ರಬಕವಿ ಬನಹಟ್ಟಿ: ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಬುಧವಾರ ಇಲ್ಲಿ ಕರೆ ನೀಡಲಾಗಿದ್ದ ಬಂದ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಬನಹಟ್ಟಿಯ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದವು. ನೇಕಾರರು ಕಾಡಸಿದ್ಧೇಶ್ವರ ದೇವಸ್ಥಾನದಿಂದ ನಗರ ಪ್ರಮುಖ ಬೀದಿಗಳಲ್ಲಿ ಅರೆ ಬೆತ್ತಲೆ ಪ್ರತಿಭಟನಾ ಮೆರವಣಿಗೆ ಕೈಗೊಂಡರು.
ದಿನಸಿ, ಔಷಧ ಅಂಗಡಿಗಳು, ಶಾಲೆ–ಕಾಲೇಜುಗಳು ಹಾಗೂ ಬಸ್ ಸಂಚಾರ ಎಂದಿನಂತೆ ಕಾರ್ಯ ನಿರ್ವಹಿಸಿದವು. ಜಮಖಂಡಿ–ಕುಡಚಿ ರಾಜ್ಯ ಹೆದ್ದಾರಿಯ ಮೇಲೆ ಭದ್ರನವರ ಮನೆಯ ಮುಂದೆ ಪ್ರತಿಭಟನಾ ಸಭೆ ನಡೆಯಿತು. ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ರಸ್ತೆ ಬಂದ್ ಮಾಡಿದರು. ನಂತರ ನೇಕಾರರು ತಮ್ಮ ವಿದ್ಯುತ್ ಬಿಲ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಿ ಪಡಿಸಿದರು. ಯಾವುದೇ ಕಾರಣಕ್ಕೂ ಬಿಲ್ ಪಾವತಿಸುವುದಿಲ್ಲ ಎಂದರು.
‘ಚುನಾವಣೆಯ ಪ್ರಚಾರ ಭಾಷಣದಲ್ಲಿ ನೇಕಾರರಿಗೆ 20 ಎಚ್.ಪಿವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದರು. ಆದರೆ ಸದ್ಯ ವಿದ್ಯುತ್ ದರವನ್ನು ಹೆಚ್ಚಳ ಮಾಡಲಾಗಿದೆ. ಒಂದು ಎಚ್.ಪಿ.ಗೆ ಕನಿಷ್ಠ ಶುಲ್ಕವನ್ನು ₹ 140ಕ್ಕೆ ಹೆಚ್ಚಿಸುವ ಮೂಲಕ ನೇಕಾರರಿಗೆ ಅನ್ಯಾಯ ಮಾಡಿದ್ದಾರೆ. ಆದ್ದರಿಂದ ಆದಷ್ಟು ಬೇಗನೆ ನೇಕಾರರಿಗೂ ಉಚಿತ ವಿದ್ಯುತ್ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟ ಮಾಡುತ್ತೇವೆ’ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.
‘ನೇಕಾರಿಕೆಯ ಉದ್ಯೋಗ ಮತ್ತು ನೇಕಾರರನ್ನು ಉಳಿಸುವುದಕ್ಕಾಗಿ ರಾಜ್ಯ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ 1,500 ಕ್ಕೂ ಹೆಚ್ಚು ಮನವಿ ಪತ್ರಗಳನ್ನು ನೀಡಲಾಗಿದೆ. ಆದರೆ ಸರ್ಕಾರದಿಂದ ಯಾವುದೇ ಸ್ಪಂದನೆ ಇಲ್ಲವಾಗಿದೆ. ರಾಜ್ಯದಲ್ಲಿ 42ಕ್ಕಿಂತ ಹೆಚ್ಚು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಕಾರರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ₹ 1,500 ಕೋಟಿಯನ್ನು ರಾಜ್ಯ ಸರ್ಕಾರ ನೀಡದೇ ನೇಕಾರರಿಗೆ ಅನ್ಯಾಯ ಮಾಡಿದೆ. ನೇಕಾರರಿಗೆ ಬರಬೇಕಾದ ಸಾಲದ ಮೇಲಿನ ಶೇ 1 ಮತ್ತು ಶೇ 3 ರಷ್ಟು ಬಡ್ಡಿ ಮನ್ನಾ ಇನ್ನೂ ಬಹಳಷ್ಟು ನೇಕಾರರಿಗೆ ತಲುಪಿಲ್ಲ. ರೈತರಂತೆ ನೇಕಾರರಿಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ದೊರೆಯುವಂತೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ನೇಕಾರ ಮುಖಂಡ ಮಹಾದೇವ ನುಚ್ಚಿ ಆಗ್ರಹಿಸಿದರು.
‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ನೇಕಾರರಿಗೆ ಅನ್ಯಾಯ ಮಾಡುತ್ತ ಬಂದಿವೆ’ ಎಂದು ಭಗತಸಿಂಗ್ ಯುವಕ ಸಂಘದ ಮುಖಂಡ ಆನಂದ ಜಗದಾಳ ದೂರಿದರು.
‘ಹಿಂದಿನ ಸರ್ಕಾರ ಕೈಗೊಂಡ ಯೋಜನೆಗಳನ್ನು ಮತ್ತು ಕಾಯ್ದೆಗಳನ್ನು ತಡೆಹಿಡಿಯುವುದಾಗಿ ಹೇಳುತ್ತಿರುವ ಸರ್ಕಾರ ವಿದ್ಯುತ್ ದರ ಏರಿಕೆಯನ್ನು ಕೂಡ ಹಿಂದಕ್ಕೆ ಪಡೆಯಲಿ’ ಎಂದು ನೇಕಾರ ಮಾಲೀಕರ ಮುಖಂಡರಾದ ಸುರೇಶ ಚಿಂಡಕ ಒತ್ತಾಯಿಸಿದರು.
ನೇಕಾರ ಮಾಲೀಕರ ಮುಖಂಡರಾದ ರಾಜಶೇಖರ ಸೋರಗಾವಿ, ಮಲ್ಲಿಕಾರ್ಜುನ ಬಾಣಕಾರ, ಶಾಂತಾ ಮಂಡಿ ಮಾತನಾಡಿದರು.
ನೇಕಾರ ಮಾಲೀಕರ ಸಂಘದ ಅಧ್ಯಕ್ಷ ಶಂಕರ ಜಾಲಿಗಿಡದ, ಬ್ರಿಜ್ಮೋಹನ ಡಾಗಾ, ಪ್ರಭು ಕರಲಟ್ಟಿ, ಮಹಾದೇವ ಮುನ್ನೊಳ್ಳಿ, ಹೊನ್ನಪ್ಪ ಬಿರಡಿ, ಮಲ್ಲಿಕಾರ್ಜುನ ಭದ್ರನವರ,
ಅರ್ಜನ ಹಲಗಿಗೌಡರ, ಸಂಗಪ್ಪ ಉದಗಟ್ಟಿ, ರಾಜೇಂದ್ರ ಮಿರ್ಜಿ, ಲಕ್ಕಪ್ಪ ಮಾದರ, ಪರಮಾನಂದ ಭಾವಿಕಟ್ಟಿ, ಸಂತೋಷ ಮಾಚಕನೂರ, ಎಸ್.ಜಿ.ಬೆಳಗಲಿ, ಎಸ್.ಡಿ. ಮುರಗೋಡ, ಎಸ್.ಎಸ್. ಬಡೇಮಿ ಸೇರಿದಂತೆ ಮಹಿಳಾ ನೇಕಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಉಪ ತಹಶೀಲ್ದಾರ್ ಎಸ್.ಎಂ. ಕೂಗಾಟೆಯವರಿಗೆ ಮನವಿ ಸಲ್ಲಿಸಿದರು.
ಬಂದ್ ನಿಂದಾಗಿ ಬನಹಟ್ಟಿಯ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ದಿನಸಿ ವಸ್ತು, ಔಷಧಿ ಅಂಗಡಿಗಳು, ಶಾಲಾ ಕಾಲೇಜುಗಳು ಹಾಗೂ ಬಸ್ ಸಂಚಾರ ಎಂದಿನಂತೆ ಕಾರ್ಯ ನಿರ್ವಹಿಸಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.