ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಪ್ರವಾಸಕ್ಕೆ ಘಟಪ್ರಭೆ–ಕೃಷ್ಣೆ ಸಂಧಿಸುವ ಸುಂದರ ತಾಣ ‘ಚಿಕ್ಕಸಂಗಮ’

ಹುಬ್ಬಳ್ಳಿಯಿಂದ 155 ಕಿ.ಮೀ ದೂರ
Last Updated 25 ಸೆಪ್ಟೆಂಬರ್ 2018, 13:44 IST
ಅಕ್ಷರ ಗಾತ್ರ

ಬಾಗಲಕೋಟೆ ಜಿಲ್ಲೆ ಎಂದಾಕ್ಷಣ ಬಾದಾಮಿ, ಬನಶಂಕರಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ ಮೊದಲಾದ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳು ನೆನಪಾಗುತ್ತವೆ. ಈ ವಿಶ್ವಪ್ರಸಿದ್ಧ ತಾಣಗಳ ನಡುವೆಯೇ ಅಲ್ಲೊಂದು, ಇಲ್ಲೊಂದು ಎಲೆಮರೆಯ ಕಾಯಿಯಂತೆ ಪ್ರವಾಸಿ ತಾಣಗಳು ಇಲ್ಲಿವೆ. ಹುಬ್ಬಳ್ಳಿಯಿಂದ ನೀವು ಒಂದು ದಿನದ ಪ್ರವಾಸ ಹೊರಡಲು ಯೋಜಿಸಿದ್ದೀರಾ? ಹಾಗಿದ್ದರೆ ಇಲ್ಲಿನ ಚಿಕ್ಕಸಂಗಮಕ್ಕೆ ಬನ್ನಿ...

ಬೀಳಗಿ ತಾಲ್ಲೂಕಿನ ಚಿಕ್ಕಸಂಗಮ ಹುಬ್ಬಳ್ಳಿಯಿಂದ 155 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿಯಿಂದ ವಿಜಯಪುರಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಮಾರ್ಗದಲ್ಲಿ ಬಾಡಗಂಡಿ ಸಮೀಪ ಬಲಕ್ಕೆ 14 ಕಿ.ಮೀ ಡಾಂಬರು ದಾರಿಯಲ್ಲಿ ಸಾಗಿದರೆ ನಿಮಗೆ ಚಿಕ್ಕಸಂಗಮ ಸಿಗುತ್ತದೆ.

ಹುನಗುಂದ ತಾಲ್ಲೂಕು ಕೂಡಲಸಂಗಮದಲ್ಲಿ ಮಲಪ್ರಭೆಯನ್ನು ಸೇರಿಕೊಳ್ಳುವ ಮುನ್ನ ಚಿಕ್ಕಸಂಗಮದಲ್ಲಿ ಘಟಪ್ರಭೆಯನ್ನು ಕೃಷ್ಣೆ ಕೂಡಿಕೊಳ್ಳುತ್ತಾಳೆ. ಹೀಗೆ ಕೃಷ್ಣಾ ಹಾಗೂ ಘಟಪ್ರಭಾ ನದಿಗಳ ಕೂಡುವ ಸ್ಥಳದಲ್ಲಿಯೇ ಇತಿಹಾಸ ಪ್ರಸಿದ್ಧ ಸಂಗಮನಾಥನ ದೇಗುಲವಿದೆ. ಪ್ರಕೃತಿಯ ರಮಣೀಯತೆಯ ನಡುವಿನ ಸಂಧಿಸ್ಥಾನದಲ್ಲಿ ಎರಡೂ ನದಿಗಳ ಗಾಂಭೀರ್ಯ ಬೆರಗು ಮೂಡಿಸುತ್ತದೆ.

ಆಗಸ್ಟ್‌ನಿಂದ–ನವೆಂಬರ್‌ವರೆಗೆ ಈ ಪ್ರದೇಶದಲ್ಲಿ ವ್ಯಾಪಿಸುವ ಆಲಮಟ್ಟಿ ಜಲಾಶಯದ ಹಿನ್ನೀರ ರಾಶಿ ಸಮುದ್ರದಂತೆ ಗೋಚರಿಸಿದರೆ, ಬೇಸಿಗೆಯಲ್ಲಿ ದೇಶ–ವಿದೇಶಗಳಿಂದ ಲಗ್ಗೆ ಇಡುವ ತರಹೇವಾರಿ ಪಕ್ಷಿಗಳ ಲೋಕ ಇಲ್ಲಿ ತೆರೆದುಕೊಳ್ಳುತ್ತದೆ. ಕೂಡಲಸಂಗಮಕ್ಕೆ ಭೇಟಿ ನೀಡುವವರು, ಸಮೀಪದ ರಾಂಪುರದ ಮೂಲಕ ಚಿಕ್ಕಸಂಗಮಕ್ಕೂ ಬರಬಹುದು. ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದಿಂದಲೇ ಇಲ್ಲಿಯೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಈ ತಾಣವನ್ನು ಪ್ರವಾಸಿ ಸ್ನೇಹಿಯಾಗಿ ರೂಪಿಸಲಾಗಿದೆ.

ಸಮೀಪದ ಹೆರಕಲ್‌ನಲ್ಲಿ ಘಟಪ್ರಭಾ ನದಿಗೆ ಬೃಹತ್ ಬ್ಯಾರೇಜ್ ನಿರ್ಮಿಸಲಾಗಿದೆ. ಗುಡ್ಡಗಳನ್ನು ಕೊರೆದು ಮಾಡಿರುವ ರಸ್ತೆಯ ಮೂಲಕ ಸಂಚಾರ ಮನಕ್ಕೆ ಮುದ ನೀಡುತ್ತದೆ. ಸಂಜೆಯ ಸೂರ್ಯಾಸ್ತದ ಸೊಬಗು ಸವಿಯಬಹುದು. ಜೊತೆಗೆ ಬೀಳಗಿ ಸಮೀಪ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿರುವ ಚಿಂಕಾರಾ ರಕ್ಷಿತಾರಣ್ಯದಲ್ಲೂ ಸಂಚರಿಸಿ, ಅದೃಷ್ಟವಿದ್ದರೆ ಚಿಂಕಾರಗಳ ಹಿಂಡಿನ ದರ್ಶನ ಭಾಗ್ಯ ಸಿಗಬಹುದು.

ಸ್ವಂತ ವಾಹನದಲ್ಲಿ ಬಂದರೆ ಸೂಕ್ತ. ಇಲ್ಲದಿದ್ದರೆ ಆಲಮಟ್ಟಿಗೆ ರೈಲು, ಇಲ್ಲವೇ ವಿಜಯಪುರಕ್ಕೆ ತೆರಳುವ ಬಸ್‌ನಲ್ಲಿ ಬಾಡಗಂಡಿಗೆ ಇಳಿದರೆ ಅಲ್ಲಿಂದ ಚಿಕ್ಕಸಂಗಮಕ್ಕೆ ನಿಯಮಿತವಾಗಿ ಬಸ್‌ಗಳು, ಟಂ.ಟಂಗಳು ಲಭ್ಯ. ಚಿಕ್ಕಸಂಗಮದಲ್ಲಿ ಅರಣ್ಯ ಇಲಾಖೆ ಅತಿಥಿಗೃಹ ಇದ್ದು, ದೇವಸ್ಥಾನ ಸಮಿತಿಯಿಂದಲೂ ಉಳಿಯಲು ವ್ಯವಸ್ಥೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT