ಗುರುವಾರ , ಜುಲೈ 7, 2022
22 °C
ಎಸ್‌ಸಿ ಪ್ರಮಾಣ ಪತ್ರಕ್ಕೆ ಆಗ್ರಹ: ಬೇಡ ಜಂಗಮರ ಬೃಹತ್ ಸಮಾವೇಶ

‘ಹಕ್ಕು ಕೇಳುತ್ತಿದ್ದೇವೆ, ಕಸಿಯಲು ಬಂದಿಲ್ಲ’

ಮಹೇಶ ಮನ್ನಯ್ಯನವರಮಠ Updated:

ಅಕ್ಷರ ಗಾತ್ರ : | |

Prajavani

ಮುಧೋಳ (ರನ್ನಕ್ರೀಡಾಂಗಣ): ಸಂವಿಧಾನ ಬದ್ಧ ಹಕ್ಕಿಗಾಗಿ ಒತ್ತಾಯಿಸಿ ರಾಜ್ಯದ ಮೂಲೆಮೂಲೆಯಿಂದ ಬಂದಿದ್ದ ಬೇಡ ಜಂಗಮರು ಶನಿವಾರ ‘ಬೃಹತ್ ಸಮಾವೇಶ’ ನಡೆಸಿದರು.  ಸಮಾಜದ ವಿರುದ್ಧ ಧ್ವನಿ ಎತ್ತಿದ ರಾಜಕಾರಣಿಗಳಿಗೆ ಪರೋಕ್ಷವಾಗಿ ಚಾಟಿ ಬೀಸಿದರು.

ಅಧಿವೇಶನದಲ್ಲಿ ಬೇಡ ಜಂಗಮ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದ ಆರೋಪ ಹೊತ್ತಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಸ್ವಕ್ಷೇತ್ರದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಿದ ಬೇಡ ಜಂಗಮ ತಾಲ್ಲೂಕು ಘಟಕದ ಕಾರ್ಯವೈಖರಿಗೆ ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಮಠಾಧೀಶರಿಂದ ಪ್ರಶಂಸೆ ವ್ಯಕ್ತವಾಯಿತು. ‌

ದಲಿತ ಸಂಘರ್ಷ ಸಮಿತಿಯ ಸಂಚಾಲಕ ವೆಂಕಟೇಶ ಸಹ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಹಕ್ಕು ಒತ್ತಾಯಕ್ಕೆ ಇನ್ನಷ್ಟು ಬಲ ತುಂಬಿದರು ಎಂಬ ಅಭಿಪ್ರಾಯ ಕೇಳಿಬಂತು.

‘ಇಂದು ಸಚಿವ ಕಾರಜೋಳರ ಮನೆಯ ಬಾಗಿಲಿಗೆ ಬಂದಿದ್ದೇವೆ. ಅವರಲ್ಲಿ ಬೇಡ ಜಂಗಮ ಪ್ರಮಾಣ ಪತ್ರ ಕೊಡಿಸಿ ಎಂದು ಮನವಿ ಮಾಡುತ್ತಿದ್ದೇವೆ. ಪ್ರಮಾಣ ಪತ್ರ ಕೊಡದೇ ಇರುವಲ್ಲಿ ಕಾರಜೋಳರ ಹಸ್ತಕ್ಷೇಪ ಇರುವುದರಿಂದ ಸಮಾವೇಶ ಇಲ್ಲಿ ಆಯೋಜಿಸಿದ್ದು, ಅದಕ್ಕಾಗಿ ಸಾವಿರ ಸಂಖ್ಯೆಯಲ್ಲಿ ಜಂಗಮರು ಸೇರಿದ್ದೇವೆ. ಸರ್ಕಾರ ನಿಮ್ಮ ಕೈಯಲ್ಲಿ ಇರಬಹುದು, ಆದರೆ, ಜೋಳಿಗೆ ನಮ್ಮ ಕೈಯಲ್ಲಿದೆ. ಸಂವಿಧಾನ ಬದ್ಧ ಹಕ್ಕು ಕೇಳುತ್ತಿದ್ದೇವೆ ಹೊರತು ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲು ಬಂದಿಲ್ಲ’ ಎಂದು ಕುಷ್ಟಗಿಯ ಚಳಗೇರಿ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

‘ನಾಡಿನ ಉದ್ದಗಲಕ್ಕೂ ಜಗತ್ತಿನ ಇತಿಹಾಸದಲ್ಲಿ ಯಾರೂ ನೀಡದ ಕೊಡುಗೆಯನ್ನು ಜಂಗಮ ಸಮಾಜ ನೀಡಿದೆ. ಜನರಲ್ಲಿ ಧಾರ್ಮಿಕ ಭಾವನೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಭಾವೈಕ್ಯದ ಸಂದೇಶವನ್ನು ನೀಡುವ ಮೂಲಕ, ಬಡವ ಬಲ್ಲಿದ ಎನ್ನದೆ ದೀನ ದಲಿತರಿಗೆ ಮುಕ್ತ ಅವಕಾಶವನ್ನು ನೀಡಿ ದಾಸೋಹದ ಅವಕಾಶವನ್ನು ನೀಡಿದ್ದು ವೀರಶೈವ, ಜಂಗಮ ಮಠಗಳು’ ಎಂದರು.

‘ಒಳ್ಳೆಯ ರಾಜಕಾರಣಿ ಪ್ರಬುದ್ಧವಾಗಿ ಬೆಳೆದಿದ್ದಾರೆ ಎಂದರೆ, ಒಳ್ಳೆಯ ಅಧಿಕಾರಿಯಾಗಿ ಹೆಸರು ಮಾಡಿದ್ದಾರೆ ಎಂದರೆ ಅವರು ಜಂಗಮ ಸಮಾಜದ ಮಠಗಳನ್ನು ಊಟ ಮಾಡಿದ್ದಾರೆ ಎಂದರ್ಥ. ಸರ್ವ ಜನಾಂಗದ ಹಿತವನ್ನು ಬಯಸಿದ ಈ ಸಮಾಜ ಇಂದು ಬಹಳಷ್ಟು ಸಂಕಷ್ಟದಲ್ಲಿದೆ. ಎಲ್ಲ ಸಮಾಜದವರು ಇಂದಲ್ಲ ನಾಳೆ ಕೈಹಿಡಿಯುತ್ತಾರೆ ಎನ್ನುತ್ತ ಬಂದಿದ್ದೇವೆ’ ಎಂದರು.

‘ಗಾಣಿಗ, ಬಣಜಿಗ, ಪಂಚಮಸಾಲಿ, ಕುಂಬಾರ, ಕಂಬಾರ ಸಮಾಜಕ್ಕೆ ಅದೇ ಹೆಸರಿನ ಜಾತಿ ಪ್ರಮಾಣ ಪತ್ರ ನೀಡುತ್ತಾರೆ. ಆದರೆ, ಜಂಗಮರಿಗೆ ಜಂಗಮ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಬದಲಾಗಿ ವೀರಶೈವ ಲಿಂಗಾಯತ ಎಂದು ಜಾತಿ ಪ್ರಮಾಣ ಪತ್ರ ನೀಡುತ್ತಿದ್ದಾರೆ’ ಎಂದು ಖೇದ ವ್ಯಕ್ತಪಡಿಸಿದರು.

ಕೆರೂರ ಚರಂತಿಮಠದ ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಕಮತಗಿ ಹುಚ್ಚೇಶ್ವರಮಠದ ಹೊಳೆಹುಚ್ಚೇಶ್ವರ ಸ್ವಾಮೀಜಿ, ಗುಳೇದಗುಡ್ಡ ಅಮರೇಶ್ವರಮಠದ ಡಾ.ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಚುಳಕಿಯ ಬಸವರಾಜ ಉಮಚಗಿಮಠ, ಬೆಂಗಳೂರು ಕೊಳಲಮಠದ ಶಾಂತವೀರ ಸ್ವಾಮೀಜಿ, ಕೊಣ್ಣೂರ ಪ್ರಭುದೇವ ಸ್ವಾಮೀಜಿ, ಜಮಖಂಡಿ ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾದ್ಯ ಶಿವಾಚಾರ್ಯರು, ಜಮಖಂಡಿ ಒಲೇಮಠದ ಡಾ.ಅಭಿನವ ಚನ್ನಬಸವ ಸ್ವಾಮೀಜಿ, ಮುಧೋಳ ಗವಿಮಠದ ನಿಜಗುಣದೇವರು, ಕಲಾದಗಿಯ ಗಂಗಾಧರ ಸ್ವಾಮೀಜಿ, ಮರೇಗುದ್ದಿಯ ಗಂಗಾಧರ ಸ್ವಾಮೀಜಿ, ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಉಮಚಗಿಮಠ, ತಾಲ್ಲೂಕು ಅಧ್ಯಕ್ಷ ರೇವಣಯ್ಯ ಹೊಸಮಠ ಇದ್ದರು.

ದೆಹಲಿಯಲ್ಲಿದ್ದ ಸೊಲ್ಲಾಪುರದ ಸಂಸದ ಜಡಿಸಿದ್ದೇಶ್ವರ ಶಿವಾಚಾರ್ಯರು, ಮೊಬೈಲ್ ಮೂಲಕ ಸಂದೇಶ ನೀಡಿದರು. ಅಖಿಲ ಕರ್ನಾಟಕ ಬೇಡಜಂಗಮ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಡಿ.ಹಿರೇಮಠ, ವೀರೇಶ ಕೊಡಲಗಿಮಠ ಮಾತನಾಡಿದರು. ಶಿಕ್ಷಕ ಬಿ.ಎಂ. ಫಕೀರಸ್ವಾಮಿಮಠರು ಬರೆದ ‘ನ್ಯಾಯಕ್ಕಾಗಿ ಧ್ವನಿ’ ಕೃತಿ ಬಿಡುಗಡೆ ಮಾಡಲಾಯಿತು. ಬಸವರಾಜ ಶಾಸ್ತ್ರಿಗಳು, ಮಹಾಂತೇಶ ಶಾಸ್ತ್ರಿ ವೇದಘೋಷ ಮೊಳಗಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು