ಬೀಳಗಿ: ಭಕ್ತರಪಾಲಿನ ಆರಾಧ್ಯ ದೈವ ಸಿದ್ಧೇಶ್ವರ ದೇವಸ್ಥಾನವು ಊರಿನಿಂದ ಒಂದೂವರೆ ಕಿ.ಮೀ ಅಂತರದಲ್ಲಿ ಕಣಿವೆಗಳ ನಡುವೆ ಪ್ರಶಾಂತವಾದ ವಾತಾವರಣದ ಹಚ್ಚಹಸುರಿನ ಪ್ರಕೃತಿಯ ಮಡಿಲಲ್ಲಿದೆ.
ಇಬ್ರಾಹಿಂ ಆದಿಲ್ ಷಾಹಿ ಆಳ್ವಿಕೆಯ ಸಮಯದಲ್ಲಿ ಯಾಖತ್ ಖಾನನು ಬೀಳಗಿ ಸಮುತ ಮೊಖಾಸಿಯಾಗಿದ್ದು, ಇದೇ ಸ್ಥಳದ ಖಂಡೇರಾಯ ಪಂಡಿತನು ಊರಿನ ಪಶ್ಮಿಮ ಭಾಗದಲ್ಲಿ ಭಾವಿಯನ್ನು ಕಟ್ಟಿಸಿದನೆಂದು ಉಲ್ಲೇಖಗಳಿಂದ ತಿಳಿದುಬರುತ್ತದೆ. ಇದೇ ವಿಷಯವನ್ನು ಪ್ರತಿಪಾದಿಸುವ ಇಬ್ರಾಹಿಂ ಆದಿಲ್ ಷಾಹಿ ಕಾಲದ(1605) ನಾಗರಿ ಲಿಪಿಯ ಶಾಸನವು ಬಾವಿಯ ಗೋಡೆಯಲ್ಲಿ ಕಂಡುಬರುತ್ತದೆ.
ಈ ಬಾವಿಯ ಒಳಭಾಗದಲ್ಲಿ ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಾಣವಾಗಿರುವ ಮಹಾದೇವ ದೇವಾಲಯವಿದೆ. ಇಲ್ಲಿರುವ ಶಾಸನಗಳು ಮಹಾದೇವ ದೇವಾಲಯವು 1708ರಲ್ಲಿ ನಿರ್ಮಾಣವಾಯಿತು ಎಂದು ತಿಳಿಸುತ್ತವೆ. ಬೀಳಗಿಯ ದಕ್ಷಿಣ ಭಾಗದಲ್ಲಿ ಒಂದು ಕಿ.ಮೀ. ದೂರದಲ್ಲಿ ದೊಡ್ಡದಾದ ಕಲ್ಯಾಣಿ ಇದೆ. ಈ ದೇವಾಲಯವು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ರಚನೆಯಾಗಿದೆ.
ನವರಂಗದ ಮಧ್ಯದಲ್ಲಿರುವ ಕಲ್ಯಾಣ ಚಾಲುಕ್ಯ ಶೈಲಿಯ ನಾಲ್ಕು ಸ್ತಂಭಗಳು ಅಲಂಕೃತವಾಗಿವೆ. ಗರ್ಭಗೃಹದ ಮೇಲೆ ಕಂದಂಬ ನಾಗರ ಶಿಖರವಿದೆ. ದೇವಾಲಯವು ವಿಶಾಲವಾದ ಒಳಪ್ರಾಂಗಣ ಹೊಂದಿದ್ದು, ಅಕ್ಕ–ಪಕ್ಕದಲ್ಲಿ ಪಾರ್ವತಿ ಮತ್ತು ವೀರಭದ್ರೇಶ್ವರ ದೇವರುಗಳ ಚಿಕ್ಕದಾದ ಗುಡಿಗಳಿವೆ. ಮುಖ್ಯ ಗುಡಿಯ ಬಲಭಾಗದಲ್ಲಿ ನೀರಿನ ಝರಿಯಿದ್ದು ಪ್ರದಕ್ಷಿಣಾ ಪಥದಲ್ಲಿ ಅನೇಕ ಲಿಂಗಗಳ ಚಿಕ್ಕಗುಡಿಗಳಿವೆ. ಇವುಗಳ ಬಳಿಯೇ ಲಜ್ಜಾ ಗೌರಿಯ ಮೂರ್ತಿ ಹಾಗೂ ಇತರೆ ಪುರಾತನ ಶಿಲಾಕೃತಿಗಳು ಕಂಡುಬರುತ್ತವೆ.
ಸಿದ್ದೇಶ್ಚರ ದೇವಾಲಯವು ಚತುರ್ಭಜಾಕಾರದ ತಳವಿನ್ಯಾಸ ಹೊಂದಿದ್ದು, ಹೊರಭಾಗದಲ್ಲಿ ಚೌಕಾಕಾರದ ಕಂಬಗಳಿಂದ ಕೂಡಿರುವ ಮೊಗಸಾಲೆಗಳಿವೆ. ದೇವಾಲಯದ ಪೂರ್ವದ ಮಹಾದ್ವಾರವನ್ನು 1695ರಲ್ಲಿ ಖಂಡೇರಾವ ತಿಮ್ಮಾಜಿ ಎಂಬ ಹೈದರಖಾನ್ ಅಧಿಕಾರಿಯು ಕಟ್ಟಿಸಿದನೆಂದು ದೇವಾಲಯದ ಪಾವಟಿಯ ಮೇಲಿರುವ ಮರಾಠಿ ಶಾಸನದಿಂದ ತಿಳಿದುಬರುತ್ತದೆ.
ದೇವಾಲಯವನ್ನು ಹೊರಭಾಗದಿಂದ ವೀಕ್ಷಿಸಿದರೆ ಹಿಂಭಾಗದ ಗುಡ್ಡದ ಮೇಲಿರುವ 12 ಮೀಟರ್ ಎತ್ತರದ ದೀಪಸ್ತಂಭವು ಕಂಡುಬರುತ್ತದೆ. ದೀಪಸ್ತಂಭವನ್ನು 1589ರಲ್ಲಿ ಹೈದರಖಾನ್‌ನ ಅಧಿಕಾರಿ ಖಂಡೇರಾವ್ ತಿಮ್ಮಾಜಿಯಿಂದ ನಿರ್ಮಾಣವಾಯಿತು. ಅದರ ಮೇಲಿರುವ ಮರಾಠಿ ಶಾಸನವು ತಿಳಿಸುತ್ತದೆ. ಗುಡ್ಡದ ಮೇಲಿರುವ ಮಲ್ಲಸಿದ್ದಪ್ಪ (ಮೇಲಸಿದ್ದಪ್ಪ)ನ ಗುಡಿ ಹಾಗೂ ಎಳುಮಠವೂ ಪ್ರಸಿದ್ದವಾಗಿವೆ. ಸಿದ್ದೇಶ್ವರ ದೇವರ ಜಾತ್ರೆ ಶ್ರಾವಣ ಮಾಸದಲ್ಲಿ ಜರುಗುತ್ತದೆ. ಪ್ರತಿ ಶ್ರಾವಣದ ಕೊನೆಯ ಸೋಮವಾರ ಸಿದ್ದೇಶ್ವರ ದೇವರ ರಥೋತ್ಸವವು ನಡೆಯುತ್ತದೆ. ಆಗಸ್ಟ್ 26ರಂದು ಸಿದ್ಧೇಶ್ವರ ರಥೋತ್ಸವ ನೆರವೇರುತ್ತದೆ. ಜಾತ್ರೆಯ ಅಂಗವಾಗಿ ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ ಎಂದು ದೇವಸ್ಥಾನದ ಅರ್ಚಕ ಪ್ರಭು ಸರಗಣಾಚಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.