ಅಚ್ಛೇದಿನ ಅಲ್ಲ, ದುರ್ದಿನಗಳು ಬಂದಿವೆ: ಮೋದಿ ವಿರುದ್ಧ ಎಸ್‌.ಆರ್.ಪಾಟೀಲ ವಾಗ್ದಾಳಿ

7

ಅಚ್ಛೇದಿನ ಅಲ್ಲ, ದುರ್ದಿನಗಳು ಬಂದಿವೆ: ಮೋದಿ ವಿರುದ್ಧ ಎಸ್‌.ಆರ್.ಪಾಟೀಲ ವಾಗ್ದಾಳಿ

Published:
Updated:
Deccan Herald

ಬಾಗಲಕೋಟೆ: ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶಕ್ಕೆ ಅಚ್ಛೇದಿನ ಬಂದಿಲ್ಲ. ಬದಲಿಗೆ ದುರ್ದಿನಗಳು ವಕ್ಕರಿಸಿವೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ರಾಷ್ಟ್ರವ್ಯಾಪಿ ಕರೆದಿದ್ದ ಭಾರತ ಬಂದ್ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್‌, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್‌ ಬೆಲೆ ಏರಿಕೆಯಾಗಿ ಜನ ಸಾಮಾನ್ಯರು ದಿನ ನಿತ್ಯದ ಜೀವನ ನಡೆಸುವುದು ದುಸ್ತರವಾಗಿದೆ’ ಎಂದರು.

ದೇಶದಲ್ಲಿ ಪೆಟ್ರೋಲ್‌, ಡಿಸೇಲ್ ಹಾಗೂ ಸಿಲಿಂಡರ್‌ ದರ ಹೆಚ್ಚಾಗಿರುವುದನ್ನು ಖಂಡಿಸಿ ಸೋಮವಾರ ಕಾಂಗ್ರೆಸ್‌ ಪಕ್ಷ ಭಾರತ ಬಂದ್‌ಗೆ ಕರೆ ನೀಡಿದ್ದು, ಇದರ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಹಾಗೂ ಪಕ್ಷಗಳು ಬೆಂಬಲ ಸೂಚಿಸಿದ್ದವು.

ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ₹ 120 ರಿಂದ 150 ಇದ್ದರೂ ದೇಶದಲ್ಲಿ ಪೆಟ್ರೋಲ್‌ ಬೆಲೆ ₹ 50 ರಿಂದ ₹ 60 ಇತ್ತು. ಆದರೆ ಇಂದು ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ₹70ಕ್ಕೆ ಇಳಿದಿದ್ದರೂ ದೇಶದಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ  ₹83, ಡೀಸೆಲ್ ₹ 74 ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ₹ 846ಕ್ಕೆ ತಲುಪಿದೆ. ಹೀಗಾದಲ್ಲಿ ದೇಶದ ಜನ ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.

‘ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದು. ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ₹ 15 ಲಕ್ಷ ಹಣ ಹಾಕಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ನಯಾ ಪೈಸೆ ಕೂಡಾ ಬ್ಯಾಂಕ್‌ ಖಾತೆಗೆ ಬಂದಿಲ್ಲ’ ಎಂದು ಟೀಕಿಸಿದರು.

ಮಾಜಿ ಸಚಿವ ಎಚ್.ವೈ.ಮೇಟಿ ಮಾತನಾಡಿ, ‘ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಜನ ನೆಮ್ಮದಿಯಿಂದ ಬದುಕುವುದೇ ದುಸ್ತರವಾಗಿದೆ. ಸುಳ್ಳು ಮಾತಿಗೆ ಮರುಳಾಗಿ ಯುವಜನತೆ ಬಿಜೆಪಿ ಬೆಂಬಲಿಸಬಾರದು’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸೌದಾಗರ, ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಮಾಧ್ಯಮ ವಕ್ತಾರ ಅನಿಲ್‌ಕುಮಾರ ದಡ್ಡಿ,  ನಗರಸಭೆ ಸದಸ್ಯ ಚನ್ನವೀರ ಅಂಗಡಿ, ಮುಖಂಡರಾದ ರಾಜು ಮನ್ನಿಕೇರಿ, ಎಂ.ಎಲ್.ಶಾಂತಗಿರಿ, ಹನಮಂತ ರಾಕುಂಪಿ, ನೂರ್‌ಅಹಮದ್ ಪಟ್ಟೇವಾಲೆ, ಶ್ರೀನಿವಾಸ ಬಳ್ಳಾರಿ, ಗೋವಿಂದ ಬಳ್ಳಾರಿ, ಆನಂದ ಜಿಗಜಿನ್ನಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !