ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿಶ್ವಾಸವೂ ಇಲ್ಲ, ಚರ್ಚೆಯೂ ಇಲ್ಲ!

ಬಜೆಟ್‌ ಅಧಿವೇಶನದ ನಾಲ್ಕು ದಿನ ಬಾಕಿ l ಇನ್ನೂ ತಗ್ಗದ ವಿರೋಧ ಪಕ್ಷಗಳ ಅಬ್ಬರ
Last Updated 2 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ : ನಾಲ್ಕು ದಿನಗಳ ರಜೆಯ ನಂತರ ಸೋಮವಾರ ಆರಂಭವಾದ ಸಂಸತ್ತಿನ ಎರಡೂ ಸದನಗಳಲ್ಲಿ ಯಥಾರೀತಿ ವಿರೋಧ ಪಕ್ಷಗಳ ಅಬ್ಬರವೇ ಜೋರಾಗಿತ್ತು.

ಬಜೆಟ್‌ ಅಧಿವೇಶನ ಕೊನೆಗೊಳ್ಳಲು ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದ್ದರೂ ಸೋಮವಾರ ಕೂಡ ಯಾವುದೇ ಕಲಾಪ ನಡೆಯಲಿಲ್ಲ. ಇದರೊಂದಿಗೆ ಸತತ 18ನೇ ದಿನವೂ ವ್ಯರ್ಥವಾಗಿದೆ.

ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪ ಆರಂಭವಾಗುತ್ತಲೇ ವಿರೋಧ ಪಕ್ಷಗಳು ಪ್ರತಿಭಟನೆಗಿಳಿದ ಕಾರಣ ಉಭಯ ಸದನಗಳನ್ನು ಮಂಗಳವಾರದವರೆಗೆ ಮುಂದೂಡಲಾಯಿತು. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಚರ್ಚೆಗೆ ಬರಲಿಲ್ಲ.

ಕಾವೇರಿ ನಿರ್ವಹಣಾ ಮಂಡಳಿ, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದಂತಹ ಪ್ರಾದೇಶಿಕ ವಿಷಯಗಳು ಎರಡೂ ಸದನಗಳಲ್ಲಿ ಮತ್ತೆ ಪ್ರತಿಧ್ವನಿಸಿದವು.

ಕೆಲವೇ ನಿಮಿಷದಲ್ಲಿ ಮುಂದೂಡಿಕೆ: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಎಐಎಡಿಎಂಕೆ ಸಂಸದರು ಪ್ರತಿಭಟನೆ ಆರಂಭಿಸಿದ್ದರಿಂದ ಕೆಲವೇ ನಿಮಿಷಗಳಲ್ಲಿ ಲೋಕಸಭೆ ಕಲಾಪವನ್ನು ಮೊದಲು ಮಧ್ಯಾಹ್ನದವರೆಗೆ ಹಾಗೂ ನಂತರ ಮಂಗಳವಾರಕ್ಕೆ ಮುಂದೂಡಲಾಯಿತು.

ಅವಿಶ್ವಾಸ ಗೊತ್ತುವಳಿ ಪರ ಕಾಂಗ್ರೆಸ್‌, ಎಡ ಪಕ್ಷಗಳು, ಟಿಡಿಪಿ ಮತ್ತು ಇನ್ನಿತರ ಪಕ್ಷಗಳ 80 ಸಂಸದರು ಫಲಕ ಪ್ರದರ್ಶಿಸಿದರು. ಸುಗಮ ಕಲಾಪಗಳಿಗೆ ಕಾಂಗ್ರೆಸ್‌ ಅಡ್ಡಿಪಡಿಸುತ್ತಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು.

ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಕುರಿತು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಪ್ರಶ್ನಿಸಿ ಪರಿಶೀಲನಾ ಅರ್ಜಿ ಸಲ್ಲಿಸುವಂತೆ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಸಂಸದರು ಒತ್ತಾಯಿಸಿದರು. ಟಿಎಂಸಿ ಸದಸ್ಯರು ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಹಗರಣ ಪ್ರಸ್ತಾಪಿಸಿದರು.

ಮೇಲ್ಮನೆಯಲ್ಲೂ ಅದೇ ಸ್ಥಿತಿ: ರಾಜ್ಯಸಭೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ವಿರೋಧ ಪಕ್ಷಗಳ ಸಂಸದರ ಗದ್ದಲದಿಂದಾಗಿ ಆರು ನಿಮಿಷದೊಳಗಾಗಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.


ಪರಶುರಾಮನ ವೇಷದಲ್ಲಿ ಸಂಸತ್‌ಗೆ ಬಂದ ತೆಲುಗುದೇಶಂ ಸಂಸದ ನರಮೋಲಿ ಶಿವಪ್ರಸಾದ್‌

ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಬಿಎಸ್‌ಪಿ, ಟಿಡಿಪಿ, ಡಿಎಂಕೆ, ಎಐಎಡಿಎಂಕೆ ಸದಸ್ಯರು ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರ ಪೀಠದ ಎದುರು ನುಗ್ಗಿ ‘ಕೇಂದ್ರ ಸರ್ಕಾರ ದಲಿತ ವಿರೋಧಿ’ ಎಂದು ಘೋಷಣೆ ಕೂಗಿದರು. ಟಿಡಿಪಿ ಸಂಸದರು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿದರು.

ಚರ್ಚೆಗೆ ಸರ್ಕಾರ ಸಿದ್ಧ: ‘ಇಡೀ ದೇಶ ನಿಮ್ಮ ವರ್ತನೆ ಗಮನಿಸುತ್ತಿದೆ. ಗದ್ದಲದಿಂದ ನೀವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಂಸದೀಯ ವ್ಯವಸ್ಥೆಯ ಘನತೆಗೆ ಧಕ್ಕೆ ತರಬೇಡಿ. ಚರ್ಚೆಗೆ ಅವಕಾಶ ನೀಡಲು ಸಿದ್ಧ’ ಎಂದು ನಾಯ್ಡು ಮಾಡಿಕೊಂಡ ಮನವಿ ಫಲ ನೀಡಲಿಲ್ಲ.

‘ಅವಿಶ್ವಾಸ ಗೊತ್ತುವಳಿ ಸೇರಿದಂತೆ ವಿರೋಧ ಪಕ್ಷಗಳು ಎತ್ತಿರುವ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ’ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿಜಯ್‌ ಗೋಯಲ್‌ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT