ಬಾಗಲಕೋಟೆ: ‘ನನ್ನ ಮನೆಗೆ ನೀನೇ ಬಂದು ಶಾಲು ಹಾಕಿ ಕರೆದಿದ್ದಕ್ಕೆ ಬಿಜೆಪಿಗೆ ಮರಳಿ ಬಂದೆ ಎನ್ನುವುದನ್ನು ವೀರಣ್ಣ ಚರಂತಿಮಠ ಮರೆತು ಬಿಟ್ಟಿದ್ದಾರೆ. ಆ ಚುನಾವಣೆಯಲ್ಲಿ ಪ್ರಚಾರ ಮಾಡದಿದ್ದರೆ, ಸೋಲುತ್ತಿದ್ದರು’ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉಪಕಾರ ಮಾಡಿದವರ ಮೇಲೆಯೇ ಸವಾರಿ ಮಾಡುವ ಅವಕಾಶವಾದಿ ರಾಜಕಾರಣಿ. ಏರಿದ ಏಣಿ ಒದೆಯುವ ಚಾಳಿ ಚರಂತಿಮಠನದ್ದಾಗಿದೆ. ಒಂದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ಧನಿದ್ದೇನೆ. ಬರಲಿ’ ಎಂದು ಸವಾಲು ಹಾಕಿದರು.
‘ರಾಜಕೀಯ ತೆವಲಿಗೆ ಸಂಘದ ಹೆಸರು ದುರುಪಯೋಗ ಮಾಡುವುದನ್ನು ನಿಲ್ಲಿಸಲಿ. ಅವನಂತೆ ಎಲ್ಲ ಕಡೆ ಮೂಗು ತೂರಿಸುವ ಅಭ್ಯಾಸ ನನಗಿಲ್ಲ. ಇನ್ನೊಬ್ಬರ ಏಳಿಗೆ ಸಹಿಸುವುದಿಲ್ಲ. ನಗರಸಭೆ, ತಾಲ್ಲೂಕು ಪಂಚಾಯಿತಿ ಸಭೆಗಳಲ್ಲಿ ಸದಸ್ಯರಿಗೇ ಮಾತನಾಡಲು ಬಿಡುವುದಿಲ್ಲ. ಅವರಿಗೆ ಸ್ವಾತಂತ್ರ್ಯವೇ ಇಲ್ಲ’ ಎಂದು ಆರೋಪಿಸಿದರು.
‘ನೀನು ಹೇಳಿದವರಷ್ಟೇ ಪಾರ್ಟಿಯವರಲ್ಲ. ಜೈಕಾರ ಹಾಕಿದವನೇ ನಂಬರ್ ಒನ್. ಸರಿ ಇಲ್ಲ ಎಂದು ಹೇಳಿದರೆ ಅವರ ಕತೆ ಮುಗಿತು. ಸಂಕಷ್ಟ ಹೇಳಿಕೊಂಡು ಅವರ ಮನೆಗೆ ಹೋಗುವ ನಾಲ್ಕು ಪಟ್ಟು ಜನರು ನನ್ನ ಬಳಿಗೆ ಬರುತ್ತಾರೆ’ ಎಂದರು.
‘ರಾಜಕೀಯ ಸಂಘರ್ಷ ಮುಂದುವರಿಸಲು ಸಿದ್ಧನಿದ್ದೇನೆ. ಏನೋ ಬಯಲು ಮಾಡುವೆ ಮಾಡು. ತಯಾರಾಗಿದ್ದೇನೆ. ನಿನ್ನದು ಗುಡ್ಡದ ಎತ್ತರ ಇದೆ. ನಡವಳಿಕೆ ತಿದ್ದಿಕೊಳ್ಳಬೇಕು. ನನ್ನ ಚುನಾವಣೆಯಲ್ಲಿ ಚರಂತಿಮಠ ಕೆಲಸ ಮಾಡಿಲ್ಲ. ಅವರೇ ತುಳಸಿಗೇರಿಗೆ ಪ್ರಮಾಣ ಮಾಡಲು ಬರಲಿ. ನಾನೂ ಬರುತ್ತೇನೆ’ ಎಂದು ಹೇಳಿದರು.
‘ನವನಗರದಲ್ಲಿಯ ಫುಟ್‌ಪಾತ್ ಅನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನೆಲಸಮ ಮಾಡಲಾಗಿದೆ. ಇದರಿಂದ ಅಪಘಾತ ಹೆಚ್ಚು ಆಗುವಂತೆ ಆಗಿದೆ. ಕೇಳಿದರೆ, ಉತ್ತರವೇ ಇಲ್ಲ’ ಎಂದರು.