ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಟಿಡಿಎ ಭೂಮಿ ಹಂಚಿಕೆ: ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಲಿ

ವೀರಣ್ಣ ಚರಂತಿಮಠ ಆಗ್ರಹ
Published 9 ಆಗಸ್ಟ್ 2024, 15:50 IST
Last Updated 9 ಆಗಸ್ಟ್ 2024, 15:50 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ) ರಚನೆಯಾದಾಗಿನಿಂದ ಇಲ್ಲಿಯವರೆಗೆ ಸಂಘ–ಸಂಸ್ಥೆ ಸೇರಿದಂತೆ ಯಾರಿಗೆ ಎಷ್ಟು ಭೂಮಿ ನೀಡಲಾಗಿದೆ. ಅಕ್ರಮವಾಗಿ ಯಾರಿಗೆ ನೀಡಲಾಗಿದೆ ಎಂಬುದರ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಲಿ’ ಎಂದು ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಆಗ್ರಹಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘವು ಕಾನೂನು, ನಿಯಮಾವಳಿ ಪ್ರಕಾರ ಜಮೀನು ಪಡೆದಿದೆ. ಬಿಟಿಡಿಎ ತಿಳಿಸಿದಂತೆ ₹76.23 ಲಕ್ಷ ಪಾವತಿ ಮಾಡಲಾಗಿದೆ’ ಎಂದರು.

‘ಮೋಟಗಿ ಬಸವೇಶ್ವರ ದೇವಸ್ಥಾನ, ಅಡವಿ ಸ್ವಾಮಿ ಮಠ, ಮಲ್ಲಿಕಾರ್ಜುನ ದೇವಾಲಯ, ನೇಗಿ ಶಾಲೆಗೆ ಸೇರಿದ 2 ಎಕರೆ ಜಮೀನು ಹೋಗಿತ್ತು. ಸಂಘಕ್ಕೆ ಜಮೀನು ಮಂಜೂರು ಮಾಡುವಾಗ ನಾಲ್ಕು ಎಕರೆ ಕಡಿತ ಮಾಡಲಾಗಿತ್ತು. ರಸ್ತೆ, ನೀರಿನ ಟ್ಯಾಂಕ್ ಇತ್ಯಾದಿಗಳಿಗಾಗಿ ನಾಲ್ಕು ಎಕರೆ ತೆಗೆದುಕೊಳ್ಳಲಾಗಿದೆ. ಎಲ್ಲವೂ ಸೇರಿ 11 ರಿಂದ 13 ಎಕರೆ ಹೋಗಿದೆ. ಅದಕ್ಕೆ ಬದಲಾಗಿ 20 ಎಕರೆ ಪಡೆಯಲಾಗಿದೆ’ ಎಂದರು.

‘ಮೋಟಗಿ ಬಸವೇಶ್ವರ ಜಾತ್ರೆ ಬೃಹತ್ ಪ್ರಮಾಣದಲ್ಲಿ ನಡೆಯುತ್ತದೆ. ತೇರು ಕೂಡಾ ಎಳೆಯಲಾಗುತ್ತಿದೆ. ಎಲ್ಲ ಧಾರ್ಮಿಕ ಸಂಸ್ಥೆಗಳ ಚಟುವಟಿಕೆಗೆ ಕೇಂದ್ರ ಸ್ಥಾನದಲ್ಲಿ ಸೂಕ್ತ ನೀಡುವುದು ಅವಶ್ಯ ಎಂದು ಸೆಕ್ಟರ್ 59ರಲ್ಲಿ ನೀಡಲಾಗಿತ್ತು’ ಎಂದು ಹೇಳಿದರು.

ನಮ್ಮನ್ನು ಕೇಳಿಲ್ಲ: ‘ಹೆಚ್ಚುವರಿ ಭೂಮಿ ಪಡೆದಿರುವ ಬಗ್ಗೆ ತನಿಖೆ ನಡೆಸಿದ ಪ್ರಾದೇಶಿಕ ಆಯುಕ್ತರು ಸಂಘದ ಅಭಿಪ್ರಾಯವನ್ನೇ ಪಡೆದಿಲ್ಲ. ದಾಖಲೆಗಳನ್ನೂ ಕೇಳಿಲ್ಲ’ ಎಂದರು ವೀರಣ್ಣ ಚರಂತಿಮಠ ಹೇಳಿದರು.

‘ತನಿಖೆ ಮಾಡುವವರು ಮಂಜೂರಾತಿ ಪಡೆದ ಸಂಘ ಅಭಿಪ್ರಾಯವನ್ನೂ ಕೇಳಬೇಕಿತ್ತು. ತಾವೇ ವರದಿ ಬರೆದುಕೊಂಡು ಹೋಗಿದ್ದಾರೆ. ಇದು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಇಲ್ಲಿಯವರೆಗೆ ರದ್ದು ಮಾಡುವ ಬಗ್ಗೆ ಸಂಘಕ್ಕೆ ಯಾವುದೇ ಮಾಹಿತಿ ಬಂದಿಲ್ಲ. ರದ್ದು ಮಾಡಿದರೆ ಕಾನೂನು ಹೋರಾಟ ಮಾಡಲಾಗುವುದು’ ಎಂದರು.

‘ವಿಧಾನ ಪರಿಷತ್‌ ಸದಸ್ಯ ಪಿ.ಎಚ್. ಪೂಜಾರ ಷಡ್ಯಂತ್ರವಿದೆ. ಅವರನ್ನು ಬಿಟಿಡಿಎ ಸದಸ್ಯರನ್ನಾಗಿ ಮಾಡಿದ್ದಕ್ಕೆ ಋಣ ತೀರಿಸಲು ಸಚಿವರೊಬ್ಬರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಬಿಜೆಪಿಯಿಂದ ಎಂಎಲ್‌ಸಿ ಆದಮೇಲೂ ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ’ ಎಂದು ಟೀಕಿಸಿದರು.

‘ನಿಮ್ಮನ್ನು ಬೆನ್ನು ಹತ್ತದೆ ಬಿಡುವುದಿಲ್ಲ ಎಂದು ಎಚ್ಚರಿಸಿದ ಅವರು, ಅವರ ಚಟುವಟಿಕೆ ಬಗ್ಗೆ ಪಕ್ಷದ ಮುಖಂಡರಿಗೆ ದೂರು ನೀಡಲಾಗುವುದು’ ಎಂದರು.

ಮಹೇಶ ಅಥಣಿ, ಶಿವಾನಂದ ಟವಳಿ ಇದ್ದರು.

ಅಳಿಯನ ಅವ್ಯವಹಾರಕ್ಕೆ ಏನು ಹೇಳುವಿರಿ?

ಬಾಗಲಕೋಟೆ: ‘ಆರೋಗ್ಯ ಇಲಾಖೆಯಲ್ಲಿ ಅಕ್ರಮ ನೇಮಕಾತಿ ಮಾಡುವ ಮೂಲಕ ಶಾಸಕ ಎಚ್.ವೈ. ಮೇಟಿ ಅವರ ಅಳಿಯ ಹಿಂದೆ ಡಿಎಚ್‌ಒ ಆಗಿದ್ದ ಡಾ.ರಾಜಕುಮಾರ ಯರಗಲ್‌ ಅವ್ಯವಹಾರ ಮಾಡಿದ್ದಾರೆ. ಈ ಬಗ್ಗೆ ಶಾಸಕರು ಏನು ಹೇಳುತ್ತಾರೆ’ ಎಂದು ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಪ್ರಶ್ನಿಸಿದರು.

‘ಲೂಟಿ ಹೊಡೆಯಲಿಕ್ಕೆ ಶಾಸಕರಾಗಿದ್ದೀರಾ? ಪ್ರವಾಸೋದ್ಯಮ ಇಲಾಖೆ ಗ್ರಂಥಾಲಯ ಇಲಾಖೆ ಸೇರಿದಂತೆ ಹಲವು ಹಗರಣಗಳು ನಡೆದಿವೆ. ಮೆಡಿಕಲ್‌ ಕಾಲೇಜು ಮಾಡಲಿಲ್ಲ ಎಂದು ಟೀಕೆ ಮಾಡುತ್ತಿದ್ದರು. ಈಗ ಏನು ಹೋರಾಟ ಮಾಡುತ್ತಾರೆ. ಜಾತಿ ರಾಜಕಾರಣ ಮಾಡಲಾಗುತ್ತಿದೆ. ಅಭಿವೃದ್ಧಿ ಮಾಡುವುದು ಬಿಟ್ಟು ಲಕ್ಷಾಂತರ ಜನರಿಗೆ ವಿದ್ಯೆ ನೀಡಿದ ಬಿ.ವಿ.ವಿ. ಸಂಘ ಟಾರ್ಗೆಟ್‌ ಮಾಡುತ್ತಾರೆ’ ಎಂದು ಆರೋಪಿಸಿದರು.

‘ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮನೆಗೆ ಬೀಗ ಹಾಕಿ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ₹385 ಕೋಟಿ ಕಾರ್ಪಸ್‌ ಫಂಡ ತರಲಾಗಿಲ್ಲ. ಬಿಜೆಪಿ ಸರ್ಕಾರದಲ್ಲಿ ಮಂಜೂರಾಗಿದ್ದ ಬಿಟಿಡಿಎ ನ ₹134 ಕೋಟಿ ಮೊತ್ತದ ಕಾಮಗಾರಿ ರದ್ದಾಗಿವೆ’ ಎಂದು ದೂರಿದರು.

ಸಂಘಕ್ಕೆ ಮಾತ್ರ ಆಕ್ಷೇಪವೇಕೆ?

ಬಾಗಲಕೋಟೆ: ‘ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿರುವ ನೂರು ವರ್ಷ ಪೂರೈಸಿರುವ ಸಂಘಕ್ಕೆ ಭೂಮಿ ನೀಡಿದ್ದಕ್ಕೆ ಮಾತ್ರ ಆಕ್ಷೇಪ ಎತ್ತಲಾಗುತ್ತಿದೆ. ಜಾತಿ ರಾಜಕಾರಣ ಮಾಡಲಾಗುತ್ತಿದೆ’ ಎಂದು ವೀರಣ್ಣ ಚರಂತಿಮಠ ಆರೋಪಿಸಿದರು.

‘ಕೇವಲ ಒಂದು ಎಕರೆ ಭೂಮಿ ಹೊಂದಿದ್ದ ಅಂಜುಮನ್ ಸಂಸ್ಥೆಗೆ 15 ಎಕರೆ ಯಾವುದೇ ಭೂಮಿ ಹೊಂದಿರದಿದ್ದ ಕಾಳಿದಾಸ ಶಿಕ್ಷಣ ಸಂಸ್ಥೆಗೆ 12 ಎಕರೆ ಮಂಜೂರು ಮಾಡಲಾಗಿದೆ. ನಾನೇ ಬಿಟಿಡಿಎ ಅಧ್ಯಕ್ಷನಾಗಿದ್ದ ಭೂಮಿ ಇಲ್ಲ ಎಂದು ಕೇಳಿದ ಸಕ್ರಿ ಹೈಸ್ಕೂಲ್‌ಗೆ 8 ಎಕರೆ ಭೂಮಿ ಮಂಜೂರು ಮಾಡಿದ್ದೆ. ಅವೆಲ್ಲ ಶಿಕ್ಷಣ ನೀಡುತ್ತಿವೆ. ಸಂಘವನ್ನು ಮಾತ್ರ ಗುರಿ ಮಾಡಿರುವುದು ಏಕೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT