ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಿಳಿದ ಬಸ್‌: ಅರ್ಧದಷ್ಟು ಆಸನಗಳ ಭರ್ತಿಗೆ ಮಾತ್ರ ಅನುಮತಿ

18 ದಿನಗಳವರೆಗೆ ಬಸ್‌ಪಾಸ್‌ ಅವಧಿ ವಿಸ್ತರಣೆ
Last Updated 22 ಜೂನ್ 2021, 6:50 IST
ಅಕ್ಷರ ಗಾತ್ರ

ಬಾಗಲಕೋಟೆ: ಕೋವಿಡ್ ಎರಡನೇ ಅಲೆಯ ಕಾರಣ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧ ತೆರವುಗೊಂಡ ಕಾರಣ ಬರೋಬ್ಬರಿ 54 ದಿನಗಳ ನಂತರ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ಗಳು ಸೋಮವಾರ ರಸ್ತೆಗೆ ಇಳಿದವು.

ಪ್ರಯಾಣಿಕರ ಸ್ಪಂದನೆ ಆಧರಿಸಿ ಸಾರಿಗೆ ಸಂಸ್ಥೆ ಬಸ್ ಓಡಿಸಿದ್ದರಿಂದ ಮೊದಲ ದಿನ ಜಿಲ್ಲೆಯ ಎಂಟು ಡಿಪೊಗಳ ವ್ಯಾಪ್ತಿಯಲ್ಲಿ ಬರೀ 125 ಬಸ್‌ಗಳು ಮಾತ್ರ ಓಡಾಟ ನಡೆಸಿದವು. ಜಿಲ್ಲಾ ಕೇಂದ್ರ ಬಾಗಲಕೋಟೆಯಿಂದ ತಾಲ್ಲೂಕು ಕೇಂದ್ರಗಳಿಗೆ, ಪಕ್ಕದ ವಿಜಯಪುರ, ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ಮುದ್ದೇಬಿಹಾಳ, ಗದಗ, ರಾಯಚೂರು ನಗರಗಳಿಗೆ ಮಾತ್ರ ಮೊದಲ ದಿನ ಬಸ್‌ಗಳ ಓಡಾಟ ಕಂಡುಬಂದಿತು.

250 ಸಿಬ್ಬಂದಿಯ ಸೇವೆ: ಪೂರ್ಣಪ್ರಮಾಣದಲ್ಲಿ ಬಸ್‌ಗಳುರಸ್ತೆಗೆ ಇಳಿಯದ ಕಾರಣ ಬಾಗಲಕೋಟೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ 2200 ಸಾರಿಗೆ ಸಿಬ್ಬಂದಿಯ ಪೈಕಿ250 ಮಂದಿ ಮಾತ್ರ ಕೆಲಸಕ್ಕೆ ಹಾಜರಾದರು. ಎರಡು ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಕೆಲಸಕ್ಕೆ ಅವಕಾಶ ಮಾಡಿಕೊಡಲಾಯಿತು.

ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ಬಸ್‌ಗಳಲ್ಲಿ ಸಂಚಾರಕ್ಕೆ
ಅವಕಾಶ ಮಾಡಿಕೊಡಲಾಯಿತು. ಜನರು ಕಡಿಮೆ ಇರುತ್ತಾರೆ ಎಂಬ ಕಾರಣಕ್ಕೆ ಟಿಕೆಟ್ ದರ ಹೆಚ್ಚಳಗೊಳಿಸಿಲ್ಲ ಎಂದು ಬಾಗಲಕೋಟೆಯ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮಣ್ಣವರ ’ಪ್ರಜಾವಾಣಿ‘ಗೆ ತಿಳಿಸಿದರು.

ಆಂಧ್ರ, ತೆಲಂಗಾಣಕ್ಕೆ ಅನುಮತಿ: ಜೂನ್ 22ರಿಂದ ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಬಸ್‌ಗಳ ಓಡಿಸಲು ಅನುಮತಿ ಸಿಕ್ಕಿದೆ. ಆದರೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಕಾರ್ಯಾಚರಿಸಬೇಕಿದೆ. ಸಮಯದ ಹೊಂದಾಣಿಕೆ ಗಮನಿಸಿ ಹೈದರಾಬಾದ್ ಹಾಗೂ ಮಂತ್ರಾಲಯಕ್ಕೆ ಬಸ್‌ಗಳ ಓಡಿಸಲು ಚಿಂತಿಸಲಾಗಿದೆ. ಪ್ರಯಾಣಿಕರ ಸ್ಪಂದನೆ ಆಧರಿಸಿ ಶೀಘ್ರ ಬೆಂಗಳೂರಿಗೆ ರಾತ್ರಿ ಬಸ್‌ಗಳ ಓಡಾಟ ಆರಂಭಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT