ಬಿ.ವಿ.ವಿ.ಎಸ್ ಸಿಟಿ ಕ್ರಿಕೆಟರ್ಸ್‌ಗೆ ಜಯ

7
ಕೆಎಸ್‌ಸಿಎ ಮೂರನೇ ಡಿವಿಷನ್ ಕ್ರಿಕೆಟ್ ಟೂರ್ನಿ: ಹರಿದ ರನ್‌ಗಳ ಹೊಳೆ

ಬಿ.ವಿ.ವಿ.ಎಸ್ ಸಿಟಿ ಕ್ರಿಕೆಟರ್ಸ್‌ಗೆ ಜಯ

Published:
Updated:

ಬಾಗಲಕೋಟೆ: ವರುಣ್ ಸೋರಗಾವಿ, ಎಸ್.ಬಿ.ಸಂಕೇತ್ ಹಾಗೂ ರವಿ ಬಸಂತಾನಿ ಹರಿಸಿದ ರನ್‌ಗಳ ಹೊಳೆಯ ಪರಿಣಾಮ ಕೆಎಸ್‌ಸಿಎ ರಾಯಚೂರು ವಲಯದ ಮೂರನೇ ಡಿವಿಷನ್‌ ಲೀಗ್‌ ಪಂದ್ಯಾವಳಿಯಲ್ಲಿ ಬಾಗಲಕೋಟೆಯ ಬಿ.ವಿ.ವಿ.ಎಸ್ ಸಿಟಿ ಕ್ರಿಕೆಟರ್ಸ್‌ ತಂಡ ಮಂಗಳವಾರ ಗುಳೇದಗುಡ್ಡ ಕ್ರಿಕೆಟ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿತು.

ಬಿ.ವಿ.ವಿ ಸಂಘದ ಹಳೆಯ ಕ್ಯಾಂಪಸ್‌ನ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಬಿ.ವಿ.ವಿ.ಎಸ್ ಸಿಟಿ ಕ್ರಿಕೆಟರ್ಸ್ 47.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 411 ರನ್‌ಗಳಿಸಿತು. ಬೃಹತ್ ಮೊತ್ತ ಬೆನ್ನತ್ತಿದ ಗುಳೇದಗುಡ್ಡ ಕ್ರಿಕೆಟ್ ತಂಡ 27.5 ಓವರ್‌ಗಳಲ್ಲಿ 186 ರನ್‌ಗಳಿಸಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಬಿ.ವಿ.ವಿ.ಎಸ್‌ ತಂಡ 225 ರನ್‌ಗಳ ಭಾರೀ ಅಂತರದ ಗೆಲುವು ದಾಖಲಿಸಿತು.

ಬಿ.ವಿ.ವಿ.ಎಸ್ ತಂಡದ ಆರಂಭಿಕ ಆಟಗಾರರಾದ ಅಜೀಜ್ ಬೀಳಗಿ ಹಾಗೂ ಸಾಬಣ್ಣ ಊಟಿ ವಿಫಲರಾದರೂ ನಂತರ ವರುಣ್, ಸಂಕೇತ್ ಹಾಗೂ ರವಿ, ಗುಳೇದಗುಡ್ಡ ತಂಡದ ಬೌಲರ್‌ಗಳ ಮೇಲೆ ಅಕ್ಷರಶಃ ಸವಾರಿ ಮಾಡಿದರು. 59 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಐದು ಸಿಕ್ಸರ್ ಬಾರಿಸಿದ ವರುಣ್ ಸೋರಗಾವಿ 77 ರನ್‌ ಗಳಿಸಿದರು. 10 ಬೌಂಡರಿ ಬಾರಿಸಿದ ಎಸ್‌.ಬಿ.ಸಂಕೇತ್ 59 ರನ್ ಸಿಡಿಸಿದರು. 29 ಎಸೆತಗಳಲ್ಲಿ 50 ರನ್‌ ಬಾರಿಸಿ,ಟೂರ್ನಿಯಲ್ಲಿ ಅತಿವೇಗದ ಅರ್ಧ ಶತಕ ದಾಖಲಿಸಿದ ಶ್ರೇಯ ಪಡೆದ ರವಿ ಬಸಂತಾನಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ಹೊಡೆದರು.

ಆಲ್‌ರೌಂಡ್ ಸಾಧನೆ: ಬಿ.ವಿ.ವಿ.ಎಸ್‌ನ ದಾಖಲೆಯ ಗೆಲುವಿಗೆ ಎಸ್.ಬಿ.ಸಂಕೇತ್ ತೋರಿದ ಆಲ್‌ರೌಂಡ್ ಪ್ರದರ್ಶನ ನೆರವಾಯಿತು. ಅರ್ಧ ಶತಕದ ಜೊತೆಗೆ ಬೌಲಿಂಗ್‌ನಲ್ಲೂ ಮಿಂಚಿದ ಸಂಕೇತ್, 59 ರನ್‌ ನೀಡಿ ಐದು ವಿಕೆಟ್ ಪಡೆದು ಪಂದ್ಯಪುರುಷೋತ್ತಮ ಶ್ರೇಯಕ್ಕೂ ಅರ್ಹರಾದರು. 10 ಓವರ್‌ಗಳಲ್ಲಿ 90ರನ್ ನೀಡಿ ಎರಡು ವಿಕೆಟ್ ಪಡೆದ ಗುಳೇದಗುಡ್ಡ ತಂಡದ ಆಕಾಶ್ ಸಿಪ್ರಿ ದುಬಾರಿಯಾದರು. ಆ ತಂಡದ ಅನಂತ್ ಅಷ್ಟಪುತ್ರ 55 ರನ್‌ ನೀಡಿ ಎರಡು ವಿಕೆಟ್ ಪಡೆದರೆ, ವೀರೇಶ ಕವಡಿಮಟ್ಟಿ 67 ರನ್ ನೀಡಿ ಎರಡು ವಿಕೆಟ್ ಗಳಿಸಿದರು.

ಗುಳೇದಗುಡ್ಡ ತಂಡದ ಪರವಾಗಿ ಆರಂಭಿಕ ಆಟಗಾರ ಅಭಿಷೇಕ್ ಅಲದಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 52 ಎಸೆತಗಳಲ್ಲಿ 10 ಬೌಂಡರಿ, ಮೂರು ಸಿಕ್ಸರ್ ಸಿಡಿಸಿ 68 ರನ್ ಬಾರಿಸಿದ ಅಭಿಷೇಕ್, ಕ್ರೀಸ್‌ನಲ್ಲಿ ಇರುವವರೆಗೂ ಎದುರಾಳಿ ಆಟಗಾರರಲ್ಲಿ ಆತಂಕ ಮೂಡಿಸಿದ್ದರು. 28 ಎಸೆತಗಳಲ್ಲಿ ಆರು ಬೌಂಡರಿಯೊಂದಿಗೆ 33 ರನ್ ಹೊಡೆದ ಗಣೇಶ ಅಂಗಡಿ ಗಮನ ಸೆಳೆದರು. ಸಂದೀಪ ನಾಗರಾಳ 21 ರನ್‌ಗಳಿಸಿದರು. ತಂಡದ ಉಳಿದ ಆಟಗಾರರು ಎರಡಂಕಿಯ ಮೊತ್ತ ಗಳಿಸಲಿಲ್ಲ.

ಬಿ.ವಿ.ವಿ.ಎಸ್ ಸಿಟಿ ಕ್ರಿಕೆಟರ್ಸ್ ಪರವಾಗಿ ಶಶಾಂಕ್ ಆಚಾರ್ಯ 15 ರನ್ ನೀಡಿ ಮೂರು ವಿಕೆಟ್ ಪಡೆದರೆ, ಗುರಯ್ಯ ಹಿರೇಮಠ ಒಂದು ವಿಕೆಟ್ ಪಡೆದರು. ಸತತ ಎರಡು ಸೋಲುಗಳ ಅನುಭವಿಸಿದ ಗುಳೇದಗುಡ್ಡ ತಂಡಕ್ಕೆ ಸೆಮಿಫೈನಲ್ ಪ್ರವೇಶಿಸುವ ಕನಸು ಮುಸುಕಾಯಿತು.

ಇಂದಿನ ಪಂದ್ಯಾವಳಿ

ಗುಳೇದಗುಡ್ಡ ತಂಡದ ವಿರುದ್ಧ ಭರ್ಜರಿ ಜಯದೊಂದಿಗೆ ಬೀಗುತ್ತಿರುವ ಬಿ.ವಿ.ವಿ.ಎಸ್ ಸಿಟಿ ಕ್ರಿಕೆಟರ್ಸ್ ತಂಡ ಬುಧವಾರ ಬಾಗಲಕೋಟೆಯ ಲಾಯ್ಡ್ಸ್ ಸ್ಫೋರ್ಟ್ಸ್ ಫೌಂಡೇಷನ್ ವಿರುದ್ಧ ಮುಖಾಮುಖಿಯಾಗಲಿದೆ. ಬಿ.ವಿ.ವಿ ಸಂಘದ ಹಳೆಯ ಕ್ಯಾಂಪಸ್‌ನ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9.30ಕ್ಕೆ ಪಂದ್ಯ ಆರಂಭವಾಗಲಿದೆ ಎಂದು ಕೆಎಸ್‌ಸಿಎ ಸಂಯೋಜಕ ರವಿ ಮಗ್ದಮ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !