ಬಾಗಲಕೋಟೆ: ‘ಜಾತಿ ವಿಷ ಬೀಜ ಬಿತ್ತುವ ಮೂಲಕ ಹಿಂದೂ ಸಮಾಜ ಹಾಗೂ ದೇಶವನ್ನು ವಿಭಜಿಸುವ ಯತ್ನಗಳು ನಡೆದಿವೆ’ ಎಂದು ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಕಳವಳ ವ್ಯಕ್ತಪಡಿಸಿದರು.
ನವನಗರದ ಸೆಕ್ಟರ್ ನಂ.3ರಲ್ಲಿರುವ ಪ್ರಸನ್ನ ವೆಂಕಟದಾಸರ ಸ್ಮಾರಕ ಭವನದಲ್ಲಿ ರಾಷ್ಟ್ರೀಯ ವೇದವಿಜ್ಞಾನ ಸಂಸ್ಥೆ ಟ್ರಸ್ಟ್, ಪ್ರಸನ್ನ ವೆಂಕಟ ಸಾಂಸ್ಕೃತಿಕ ಮತ್ತು ಚಾರಿಟಬಲ್ ಹಾಗೂ ಸಂಶೋಧನಾ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ 14ನೇ ಹರಿದಾಸ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ವಿಷ ಬೀಜ ಬಿತ್ತುವುದಕ್ಕೆ ಕಡಿವಾಣ ಹಾಕಲು ಧಾರ್ಮಿಕ ಮುಖಂಡರೇ ಮುಂದಾಗಬೇಕು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸಮುದಾಯಕ್ಕೆ ಮೀಸಲಾಗದೆ ಇಡೀ ಹಿಂದೂ ಸಮಾಜದ ಮಾರ್ಗದರ್ಶಕರಾಗಿದ್ದರು. ಜಾತಿಗೊಬ್ಬ ಸ್ವಾಮೀಜಿ ಹುಟ್ಟು ಹಾಕುವ ಬದಲು, ಹಿಂದೂ ಸಮಾಜವನ್ನು ಒಟ್ಟಾಗಿ ಕರೆದುಕೊಂಡು ಹೋಗಬಲ್ಲ ಸಂತರನ್ನು ಮುನ್ನೆಲೆಗೆ ತರುವ ಕೆಲಸ ಆಗಬೇಕಿದೆ’ ಎಂದು ಸಲಹೆ ಮಾಡಿದರು.
‘ಸಮಗ್ರ ಹಿಂದೂ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಸಾಮರ್ಥ್ಯ ವಿಪ್ರರಿಗೆ ಇದೆ. ವಿಪ್ರರಿಗೆ ಸಕಲ ಜ್ಞಾನವಿದ್ದು, ಸಂಘಟನೆ ಇಲ್ಲದಂತೆ ಆಗಿದೆ. ಸಮಾಜದ ವಿರುದ್ಧ ಟೀಕೆಗಳು ಬಂದರೆ, ಅದಕ್ಕೆ ತಕ್ಕದಾಗಿ ಉತ್ತರ ನೀಡುವ ಕೆಲಸ ಸಮಾಜ ಮಾಡಲೇಬೇಕು’ ಎಂದು ಕಿವಿಮಾತು ಹೇಳಿದರು.
‘ಪ್ರಸನ್ನ ವೆಂಕಟದಾಸರ ಬಾಗಲಕೋಟೆ ಮಣ್ಣಿನವರು ಎಂಬುದು ನಮಗೆಲ್ಲ ಹೆಮ್ಮೆಯ ವಿಷಯ. ನಮ್ಮ ಸಾಮರ್ಥ್ಯ ಹೊರಗಿನವರು ಹೇಳಿದಾಗಷ್ಟೇ ನಮಗೆ ಗೊತ್ತಾಗುತ್ತದೆ. ಹಾಗೆಯೇ ಪ್ರಸನ್ನ ವೆಂಕಟದಾಸರ ಬಗ್ಗೆ ಸಂಶೋಧನಾಕಾರರು ತಿಳಿಸಿದ ನಂತರವಷ್ಟೇ ಮಹತ್ವ ತಿಳಿಯುವಂತೆ ಆಗಿದೆ. ಟ್ರಸ್ಟ್‌ಗೆ ಅಗತ್ಯ ನೆರವು ನೀಡುತ್ತೇನೆ’ ಎಂದು ಭರವಸೆ ನೀಡಿದರು.
ಟ್ರಸ್ಟ್ ಅಧ್ಯಕ್ಷ ಸುಭಾಸ ಕಾಖಂಡಕಿ ಮಾತನಾಡಿ, ‘ವಚನ ಸಾಹಿತ್ಯದಷ್ಟೇ ಮಹತ್ವ ದಾಸಸಾಹಿತ್ಯಕ್ಕೂ ಸಿಗಬೇಕಿದೆ. ಕನಕದಾಸರ ಅಧ್ಯಯನ ಪೀಠ ಹೊರತಾಗಿ ಯಾವುದೇ ದಾಸರ ಕೃತಿಗಳ ಕುರಿತಾದ ಅಧ್ಯಯನಪೀಠಗಳು ರಚನೆ ಆಗಿಲ್ಲ. ಪ್ರಸನ್ನ ವೆಂಕಟದಾಸರ ಅಧ್ಯಯನಪೀಠ ಆರಂಭಿಸುವ ಗುರಿಯಿದ್ದು, ಸರ್ಕಾರದಿಂದ ನೆರವು ಸಿಗಬೇಕು’ ಎಂದು ಹೇಳಿದರು.
ಮಂತ್ರಾಲಯದ ಗುರುಸಾರ್ವಭೌಮ ದಾಸಸಾಹಿತ್ಯ ಯೋಜನೆ ಗೌರವ ನಿರ್ದೇಶಕ ಕೆ.ಅಪಣ್ಣಾಚಾರ್ಯ ಮಾತನಾಡಿ, ‘ಯಾವುದೇ ದಾಸರ ಕೀರ್ತನೆಗಳನ್ನು ಗಮನಿಸಿದರೆ, ಅಲ್ಲಿ ಭಕ್ತಿಗೆ ಹೆಚ್ಚು ಪ್ರಾಧ್ಯಾನ್ಯತೆ ಇರುತ್ತದೆ. ಅದಕ್ಕಾಗಿಯೇ ದಾಸ ಸಾಹಿತ್ಯ ಎಲ್ಲರಿಗೂ ಆಪ್ತವಾಗುತ್ತದೆ’ ಎಂದರು.
ಹಿರಿಯ ಸಂಶೋಧಕ ಕೃಷ್ಣ ಕೋಲ್ಹಾರ ಕುಲಕರ್ಣಿ, ಪಂ. ಬಿಂದುಮಾಧವಾಚಾರ್ಯ ನಾಗಸಂಪಿಗೆ, ಗಾಯಕ ಅನಂತ ಕುಲಕರ್ಣಿ, ರೇಖಾ ಕಾಖಂಡಕಿ, ವಿಠ್ಠಲಾಚಾರ್ಯ ಕಾಖಂಡಕಿ, ಗುರುರಾಜ ಕುಲಕರ್ಣಿ ಇದ್ದರು.
Quote - ಪ್ರಸನ್ನ ವೆಂಕಟದಾಸರ ಕೀರ್ತನೆಗಳ ಅಧ್ಯಯನಕ್ಕೆ ಒತ್ತು ಸಿಗಬೇಕಿದೆ. ತಾವು ಕಂಡಿದ್ದನ್ನು ಕಣ್ಣಿಗೆ ಕಟ್ಟುವಂತೆ ಆಪ್ತವಾದ ಶೈಲಿಯಲ್ಲಿ ಬರೆಯುತ್ತಿದ್ದರು. ಅದೇ ಅವರ ಸಾಹಿತ್ಯದ ವೈಶಿಷ್ಟ್ಯ ಕೃಷ್ಣ ಕೋಲ್ಹಾರ ಕುಲಕರ್ಣಿ ಸಂಶೋಧಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.