ಬುಧವಾರ, ಸೆಪ್ಟೆಂಬರ್ 18, 2019
23 °C
ನೆರೆ ಸಂತ್ರಸ್ತರಿಗೆ ಪರಿಹಾರ: ರಾಜ್ಯದ ಬಿಜೆಪಿ ಸಂಸದರಿಗೆ ರಾಮಲಿಂಗಾರೆಡ್ಡಿ ಒತ್ತಾಯ

ಕೇಂದ್ರದ ಮೇಲೆ ಒತ್ತಡ ಹೇರಿ

Published:
Updated:

ಬಾಗಲಕೋಟೆ: ‘ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ 25 ಮಂದಿ ಸದಸ್ಯರು ಕೇಂದ್ರದ ಮೇಲೆ ಒತ್ತಡ ಹೇರಿ ಕೂಡಲೇ ನೆರೆ ಪರಿಹಾರಕ್ಕೆ ಹಣ ಬಿಡುಗಡೆ ಮಾಡಿಸಲಿ‘ ಎಂದು ಶಾಸಕ ರಾಮಲಿಂಗಾರೆಡ್ಡಿ ಆಗ್ರಹಿಸಿದರು.

ತಾಲ್ಲೂಕಿನ ಚಿಕ್ಕಸಂಶಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಒತ್ತಡ ಹೇರಿ ಹಣ ಬಿಡುಗಡೆ ಮಾಡಿಸಿಕೊಳ್ಳುವ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಸೃಷ್ಟಿಸಬಾರದಿತ್ತು. ಸಂಕಷ್ಟಕ್ಕೆ ಸಿಲುಕಿದ ರಾಜ್ಯಕ್ಕೆ ನೆರವಾಗುವುದು ಕೇಂದ್ರದ ಕರ್ತವ್ಯ’ ಎಂದರು.

‘2009ರಲ್ಲಿ ಕರ್ನಾಟಕ ಪ್ರವಾಹದ ಸಂಕಷ್ಟಕ್ಕೆ ತುತ್ತಾಗಿದ್ದ ವೇಳೆ ಅಂದಿನ ಪ್ರಧಾನಿ ನರೇಂದ್ರ ಮೋದಿ ತತ್‌ಕ್ಷಣ ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯಕ್ಕೆ ನೆರವಿನ ಹಸ್ತ ಚಾಚಿದ್ದರು. ಆದರೆ ಅಕ್ಕಪಕ್ಕದ ರಾಜ್ಯಗಳಿಗೆ ಬಂದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡಲಿಲ್ಲ’ ಎಂದು ಟೀಕಿಸಿದರು. 

‘ಪ್ರಧಾನಿ ಬಂದಿದ್ದರೆ ವಾಸ್ತವ ಮನದಟ್ಟಾಗಿ ನಮ್ಮ ಬೇಡಿಕೆಗಳಿಗೆ ಬೇಗನೇ ಸ್ಪಂದಿಸುತ್ತಿದ್ದರು. ಬರೀ ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ಅವರನ್ನು ಕಳುಹಿಸಿದ್ದರು. ಹೀಗಾಗಿ ಇಲ್ಲಿನ ಪರಿಸ್ಥಿತಿ ಅವರಿಗೆ ಗೊತ್ತಿಲ್ಲ. ಕೇಂದ್ರ ಸರ್ಕಾರ ಈಗಲಾದರೂ ಪರಿಹಾರ ನೀಡುವಂತಾಗಬೇಕು’ ಎಂದರು.

‘ಬಿಜೆಪಿಯಲ್ಲಿ ರೆಡ್ಡಿ ಸಮುದಾಯದ 9 ಮಂದಿ ಶಾಸಕರು ಇದ್ದಾರೆ. ಅವರಲ್ಲಿ ಯಾರಾದರೂ ಒಬ್ಬರಿಗೆ ಬಿ.ಎಸ್.ಯಡಿಯೂರಪ್ಪ ತಮ್ಮ ಸಂಪುಟದಲ್ಲಿ ಅವಕಾಶ ನೀಡಬಹುದಿತ್ತು. ಇರಲಿ ಮುಂದೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನೋಡೋಣ‘ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Post Comments (+)