ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಅಧ್ಯಯನ ತಂಡ ಭೇಟಿ; ಕಾಲಿಗೆ ಬಿದ್ದು ಸಂಕಷ್ಟ ತೋಡಿಕೊಂಡರು

Last Updated 26 ಆಗಸ್ಟ್ 2019, 20:30 IST
ಅಕ್ಷರ ಗಾತ್ರ

ಬಾಗಲಕೋಟೆ: ‘ತಿಂಗಳು ಆತು ಬದುಕು ಬೀದಿಗೆ ಬಿದ್ದು, ಮನೆ–ಮಠ, ಕೈಗೆ ಬಂದ ಪೀಕು (ಬೆಳೆ) ಎಲ್ಲವೂ ನೀರು ಪಾಲಾಗಿ ಜೀವನ ಸಾಗಿಸೋದು ದುಸ್ತರ ಆಗ್ಯದ.ಇನ್ನಾದರೂ ಕಣ್ಣು ತೆರೆಯಿರಿ’

ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಪ್ರಕಾಶ್ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದಾಗ ಸಂತ್ರಸ್ತರು ಮನವಿ ಮಾಡಿದ ಪರಿ ಇದು.

ಸಂತ್ರಸ್ತರು ಕೆಲವೆಡೆ ಅಧಿಕಾರಿಗಳ ತಂಡಕ್ಕೆ ಆರತಿ ಬೆಳಗಿ ಸ್ವಾಗತಿಸಿದರು. ‘ಇನ್ನಾದರೂ ನಮ್ಮ ನೆರವಿಗೆ ನಿಲ್ಲಿ’ ಎಂದು ಕೈ ಮುಗಿದು, ಕಣ್ಣೀರು ಸುರಿಸಿ ಬೇಡಿಕೊಂಡರು. ರಬಕವಿ–ಬನಹಟ್ಟಿ ತಾಲ್ಲೂಕಿನ ಅಸ್ಕಿಯಲ್ಲಿ ಮಹಿಳೆಯರಿಬ್ಬರು ಶ್ರೀಪ್ರಕಾಶ್ ಅವರ ಕಾಲಿಗೆ ಬಿದ್ದು ನೋವು ತೋಡಿಕೊಂಡರು. ಇಲ್ಲಿಯವರೆಗೆ ಹೊಟ್ಟೆ–ಬಟ್ಟೆಗೆ ಕೊಟ್ಟೀರಿ. ಆದಷ್ಟು ಬೇಗ ಇಲ್ಲಿಂದ ನಮ್ಮನ್ನು ಸ್ಥಳಾಂತರಿಸಿ ಶಾಶ್ವತ ಸೂರು ಕಲ್ಪಿಸಿ ಎಂದು ಮನವಿ ಮಾಡಿದರು.

ಪ್ರತಿಭಟನೆ ಬಿಸಿ: ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲಿಗೆ ಭೇಟಿ ನೀಡಿದ ಕೇಂದ್ರ ತಂಡ, ಸಮಯದ ಅಭಾವದ ಕಾರಣ ನೀಡಿ ಅಲ್ಲಿಂದ ನೇರವಾಗಿ ಗದಗ ಜಿಲ್ಲೆಗೆ ತೆರಳಿತು. ಇದರಿಂದ ಕೆರಳಿದ ಪಕ್ಕದ ನಂದಿಕೇಶ್ವರ ಗ್ರಾಮಸ್ಥರು, ಸ್ಥಳೀಯ ಅಧಿಕಾರಿಗಳ ಕಾರು ತಡೆದು ಪ್ರತಿಭಟನೆ ನಡೆಸಿದರು.

ಅದೇ ಮಾರ್ಗದಲ್ಲಿ ಬಂದ ಸಂಸದ ಪಿ.ಸಿ.ಗದ್ದಿಗೌಡ ಅವರೂ ಗ್ರಾಮಸ್ಥರ ಆಕ್ರೋಶಕ್ಕೆ ತುತ್ತಾಗಬೇಕಾಯಿತು. ಅವರ ಕಾರಿಗೂ ಮುತ್ತಿಗೆ ಹಾಕಿದರು. ಈ ವೇಳೆ ಸಿಇಒ ಗಂಗೂಬಾಯಿ ಮನವೊಲಿಕೆ ಯತ್ನಕ್ಕೂ ಜಗ್ಗಲಿಲ್ಲ.

‘ಕೇಂದ್ರ ತಂಡ ನಮ್ಮೂರಿನ ಮೂಲಕವೇ ಹಾದುಹೋದರೂ ಸೌಜನ್ಯಕ್ಕೆ ಕಾರು ನಿಲ್ಲಿಸಿ ಅಳಲು ಆಲಿಸಲಿಲ್ಲ. ಅವರನ್ನು ವಾಪಸು ಕರೆಸಿ. ನಮ್ಮ ಸಂಕಷ್ಟ ಅವರೂ ಕಣ್ಣಾರೆ ಕಾಣಲಿ’ ಎಂದು ಒತ್ತಾಯಿಸಿದರು.

***

ಪ್ರವಾಹದಿಂದ ಆಗಿರುವ ನಷ್ಟದ ಬಗೆಗೆ ಕೇಂದ್ರಕ್ಕೆ ಪ್ರಾಥಮಿಕ ವರದಿ ಸಲ್ಲಿಸಲಾಗುವುದು. ನಿಖರವಾಗಿ ಮಾಹಿತಿ ಸಂಗ್ರಹಿಸಿಲು ಇನ್ನೊಮ್ಮೆ ಅಧ್ಯಯನ ನಡೆಸಬೇಕಾಗುತ್ತದೆ.

-ಶ್ರೀಪ್ರಕಾಶ್, ಜಂಟಿ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT