ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಜಾಲತಾಣ ಪ್ರಚಾರ: ಚುನಾವಣಾ ಆಯೋಗ ಅಸಹಾಯಕ

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಆಯೋಗದ ದೃಷ್ಟಿಯಲ್ಲಿ ಸಾಮಾಜಿಕ ಜಾಲತಾಣಗಳೂ ‘ವಿದ್ಯುನ್ಮಾನ ಮಾಧ್ಯಮ’ದ ವ್ಯಾಪ್ತಿಗೆ ಒಳಪಡುತ್ತವೆ. ಈ ಮಾಧ್ಯಮಕ್ಕೆ ಅನ್ವಯಿಸುವ ಎಲ್ಲ ನಿರ್ಬಂಧಗಳೂ ಸಾಮಾಜಿಕ ಜಾಲತಾಣಗಳಿಗೂ ಅನ್ವಯಿಸುತ್ತವೆ. ಆದರೆ ಇದನ್ನು ಹೇಗೆ ಅನುಷ್ಠಾನಗೊಳಿಸಬೇಕು ಎಂಬುದರ ಬಗ್ಗೆ ಆಯೋಗಕ್ಕೆ ಹೆಚ್ಚಿನ ಸ್ಪಷ್ಟತೆ ಇಲ್ಲ.

ಎಲ್ಲ ಬಗೆಯ ಜಾಲತಾಣಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಪ್ರಕಟಿಸುವ ಜಾಹೀರಾತುಗಳಿಗೆ ಆಯೋಗದ ಒಪ್ಪಿಗೆ ಪಡೆಯಬೇಕೆಂಬ ನಿಯಮವಿದೆ. ಆದರೆ ವಿವಿಧ ರಾಜಕೀಯ ಪಕ್ಷಗಳ ಜಾಲತಾಣ, ಅವುಗಳ ಫೇಸ್‌ಬುಕ್ ಪುಟ, ಟ್ವಿಟರ್ ಹ್ಯಾಂಡಲ್, ಯೂಟ್ಯೂಬ್ ಚಾನೆಲ್ ಮುಂತಾದವುಗಳಲ್ಲಿ ಪ್ರಕಟಿಸುವ ವಿಷಯಗಳ ಮೇಲೆ ಯಾವುದೇ ನಿಯಂತ್ರಣವಿಲ್ಲ. ಮತದಾನಕ್ಕೆ 48 ಗಂಟೆಗಳ ಮುಂಚೆ, ಈ ತಾಣಗಳಲ್ಲಿ ಈಗಾಗಲೇ ಪ್ರಕಟಿಸಲಾಗಿರುವ ವಿಡಿಯೊ, ಪಠ್ಯ ಮತ್ತು ಚಿತ್ರಗಳನ್ನು ತೆಗೆದುಹಾಕಬೇಕೇ ಎಂಬುದಕ್ಕೆ ಸಂಬಂಧಿಸಿದಂತೆ ನಿಯಮಗಳು ಏನನ್ನೂ ಹೇಳುವುದಿಲ್ಲ.

ಇದನ್ನು ಎಲ್ಲಾ ರಾಜಕೀಯ ಪಕ್ಷಗಳೂ ಬಳಸಿಕೊಳ್ಳುತ್ತಿವೆ. ಜಾಹೀರಾತುಗಳು ಸಾಮಾನ್ಯ ಪೋಸ್ಟ್‌ಗಳಂತೆ ಆಯಾ ಪಕ್ಷಗಳ ಮತ್ತು ಅಭ್ಯರ್ಥಿಗಳ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ವಿಷಯದಲ್ಲಿ ಆಯೋಗಕೂಡ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದೆ.

ಕಾನೂನಿನಲ್ಲಿ ಇರುವ ಈ ಅಸ್ಪಷ್ಟತೆಯನ್ನು ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ ಬಳಸಿಕೊಂಡಿವೆ. ಅಭ್ಯರ್ಥಿಗಳು ಮತ್ತು ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣಗಳಷ್ಟೇ ಅಲ್ಲದೆ ನೂರಾರು ಅನಧಿಕೃತ ತಾಣಗಳನ್ನು ಸೃಷ್ಟಿಸಲಾಗಿದೆ. ಇದರ ಹೊರತಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವ ಬೀರುವ ಶಕ್ತಿಯುಳ್ಳ ಅನೇಕರನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಚುನಾವಣೆ ಘೋಷಣೆಯಾಗುವುದಕ್ಕೆ ಮುನ್ನವೇ ಆರಂಭವಾಗಿದ್ದ ಈ ಪುಟಗಳು ಮತ್ತು ಖಾತೆಗಳು ಚುನಾವಣೆಯ ಸಂದರ್ಭದಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ, ನಿರ್ದಿಷ್ಟ ಪಕ್ಷ ಮತ್ತು ನಾಯಕರ ತೇಜೋವಧೆಯಲ್ಲಿ ತೊಡಗಿಕೊಂಡಿವೆ.

ಸಂದೇಶ ಹಂಚಿಕೊಳ್ಳುವ ವಾಟ್ಸ್ ಆ್ಯಪ್‌ನಂಥ ತಾಣಗಳನ್ನು ಈಗ ಎಲ್ಲಾ ರಾಜಕೀಯ ಪಕ್ಷಗಳೂ ಬಳಸಿಕೊಳ್ಳತೊಡಗಿವೆ. ವಿರೋಧಿಗಳ ತೇಜೋವಧೆ ಮಾಡುವಂಥ ಸಂದೇಶಗಳು ಇಲ್ಲಿ ಬಹಳ ಸಾಮಾನ್ಯ. ವಿವಿಧ ರಾಜಕೀಯ ಪಕ್ಷಗಳು ತಮ್ಮ ವಿರೋಧಿಗಳನ್ನು ಹಣಿಯುವುದಕ್ಕಾಗಿಯೇ ರೂಪಿಸಿರುವ ಫೇಸ್‌ಬುಕ್ ಪುಟಗಳು ಮತ್ತು ಟ್ವಿಟರ್ ಖಾತೆಗಳಲ್ಲಿಯೂ ಇದು ಸತತವಾಗಿ ನಡೆಯುತ್ತಲೇ ಇದೆ. ಈತನಕ ಯಾವುದೇ ಪುಟ ಅಥವಾ ಖಾತೆಯನ್ನು ನಿರ್ಬಂಧಿಸುವ ಕೆಲಸ ಚುನಾವಣಾ ಆಯೋಗದಿಂದ ನಡೆದಿಲ್ಲ.

ಸುಳ್ಳುಸುದ್ದಿಯ ಹರಡುವಿಕೆಯನ್ನು ತಡೆಯುವುದಕ್ಕೆ ಸ್ವಯಂಪ್ರೇರಿತವಾಗಿ ಮುಂದಾಗಿದ್ದ ಫೇಸ್‌ಬುಕ್ ಕೂಡ ಈ ವಿಷಯದಲ್ಲಿ ಪೂರ್ಣವಾಗಿ ಸೋತಿದೆ. ನಿರ್ದಿಷ್ಟ ಪೋಸ್ಟ್‌ಗಳನ್ನು ‘ಸುಳ್ಳುಸುದ್ದಿ’ ಎಂದು ಗುರುತಿಸುವ ಅವಕಾಶವೊಂದನ್ನು ಫೇಸ್‌ಬುಕ್ ನೀಡಿದೆಯಾದರೂ ಆ ಸವಲತ್ತಿನ ಕುರಿತು ಬಳಕೆದಾರರಲ್ಲಿ ಅರಿವು ಮೂಡಿಸುವ ಕೆಲಸ ನಡೆಯಲೇ ಇಲ್ಲ. ಸುಳ್ಳುಸುದ್ದಿ ಎಂದು ಗುರುತಿಸಿದ ನಂತರವೂ ಫೇಸ್‌ಬುಕ್ ಅದನ್ನು ತೆರವುಗೊಳಿಸುವ ಕೆಲಸವನ್ನೂ ಮಾಡುತ್ತಿಲ್ಲ.

ಮತದಾರರ ಮೇಲೆ ಪ್ರಭಾವ ಬೀರುವುದನ್ನು ನಿಯಂತ್ರಿಸುವುದಕ್ಕೆ ಚುನಾವಣಾ ಆಯೋಗ ರೂಪಿಸಿರುವ ನಿಯಮಗಳೆಲ್ಲವೂ ಸಾಂಪ್ರದಾಯಿಕ ಮಾಧ್ಯಮಗಳಿಗೆ ಮಾತ್ರ ಸೀಮಿತವಾಗಿ ಉಳಿದಿವೆ. ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಸುಲಭವಾಗಿ ರಂಗೋಲಿಯ ಕೆಳಗೆ ತೂರುತ್ತಿವೆ.

‘ನಿಯಂತ್ರಣ ಅಸಾಧ್ಯ’

ಈ ಕುರಿತಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್, ‘ಜಾಹೀರಾತುಗಳನ್ನು ಪ್ರಕಟಿಸುವಂತಿಲ್ಲ. ಆದರೆ ವೈಯಕ್ತಿಕ ಪುಟಗಳಲ್ಲಿ ಪ್ರಕಟವಾಗುವ ವಿಚಾರಗಳ ಮೇಲೆ ನಮಗೆ ನಿಯಂತ್ರಣವಿಲ್ಲ. ಇವು ಸಾರ್ವಜನಿಕ ಪೋಸ್ಟ್‌ಗಳಾಗಿದ್ದರಷ್ಟೇ ಎಲ್ಲರಿಗೂ ಕಾಣಿಸುತ್ತವೆ. ಕೇವಲ ಗೆಳೆಯರಿಗೆ ಅಥವಾ ಹಿಂಬಾಲಕರಿಗೆ ಸೀಮಿತವಾಗಿರುವ ಪೋಸ್ಟ್‌ಗಳನ್ನು ನಿಯಂತ್ರಿಸುವುದು ಅಸಾಧ್ಯ’ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿರುವ ಪ್ರಭಾವಶಾಲಿಗಳು (ಸೋಷಿಯಲ್ ಇನ್‌ಫ್ಲುಯೆನ್ಸರ್ಸ್) ನಿರ್ದಿಷ್ಟ ಪಕ್ಷಗಳನ್ನು ಬೆಂಬಲಿಸುವ ವಿಚಾರದಲ್ಲಿಯೂ ಅಸಹಾಯಕತೆಯನ್ನು ವ್ಯಕ್ತಪಡಿಸಿದ ಅವರು, ‘ಈ ಕುರಿತಂತೆ ದೂರುಗಳು ಬಂದರಷ್ಟೇ ನಾವು ಕ್ರಮ ಕೈಗೊಳ್ಳಬಹುದು. ಕೋಟ್ಯಂತರ ಮಂದಿ ಸದಸ್ಯರಾಗಿರುವ ಈ ತಾಣಗಳನ್ನು ಪರಿಶೀಲಿಸುವುದಕ್ಕೆ ಬೇಕಿರುವಷ್ಟು ಸಾಮರ್ಥ್ಯವೂ ಚುನಾವಣಾ ಆಯೋಗದ ಬಳಿ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT