ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ಜಾನಪದ ಲೋಕೋತ್ಸವ 10, 11ರಂದು

Last Updated 8 ಫೆಬ್ರುವರಿ 2018, 6:34 IST
ಅಕ್ಷರ ಗಾತ್ರ

ರಾಮನಗರ: ಕರ್ನಾಟಕ ಜಾನಪದ ಪರಿಷತ್ತು, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಪ್ರವಾಸಿ ಜಾನಪದ ಲೋಕೋತ್ಸವ ಕಾರ್ಯಕ್ರಮವು ಇದೇ 10 ಹಾಗೂ 11ರಂದು ಜಾನಪದ ಲೋಕದ ಆವರಣದಲ್ಲಿ ನಡೆಯಲಿದೆ.

‘ಲೋಕೋತ್ಸವವು ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮವಾಗಿದೆ. ಈ ಬಾರಿ ಎರಡೂ ದಿನಗಳಂದು ವಿವಿಧ ಕಲಾ ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ನಾಡಿನ ವಿವಿಧ ಜಿಲ್ಲೆಗಳ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಕರಕುಶಲ ಮೇಳ, ಗೀತಗಾಯನ, ಜನಪದ ಕುರಿತ ಸಂವಾದಗಳೂ ನಡೆಯಲಿವೆ. ಲೋಕಸಿರಿ ವಸ್ತು ಸಂಗ್ರಹಾಲಯ ಹಾಗೂ ಕುಟೀರದ ಉದ್ಘಾಟನೆಯೂ ಇದೇ ವೇಳೆ ನೆರವೇರಲಿದೆ’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘10ರಂದು ಬೆಳಿಗ್ಗೆ 10.30ಕ್ಕೆ ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಟಿ. ಟಾಕಪ್ಪ ಕರಕುಶಲ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ‘ಆಧುನಿಕತೆಯತ್ತ ಜನಪದ ಕಲೆಗಳು’ ಕುರಿತು ಮುಕ್ತ ಚರ್ಚೆ ನಡೆಯಲಿದ್ದು, ಜಾನಪದ ತಜ್ಞ ಶ್ರೀನಿವಾಸ ಕಪ್ಪಣ್ಣ ಸಾರಥ್ಯ ವಹಿಸಲಿದ್ದಾರೆ. ಸಂಜೆ 5.30ಕ್ಕೆ ಬಯಲು ರಂಗಮಂದಿರದಲ್ಲಿ ನಾಡಿನ ವಿವಿಧ ಕಲಾವಿದರು ಕಲಾ ಪ್ರದರ್ಶನ ನೀಡಲಿದ್ದಾರೆ’ ಎಂದು ಅವರು ತಿಳಿಸಿದರು.

‘11ರಂದು ಬೆಳಿಗ್ಗೆ 10.30ಕ್ಕೆ ಸರಸ್ವತಿ ಮಂದಿರದಲ್ಲಿ ‘ಜಾನಪದ ಕ್ಷೇತ್ರ ಕಾರ್ಯ ಹಾಗೂ ಸಂಘಟನೆ’ ಕುರಿತು ಸಂವಾದ ನಡೆಯಲಿದೆ. ಸಂಜೆ 4.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಲೋಕಸಿರಿ ವಸ್ತು ಸಂಗ್ರಹಾಲಯವನ್ನು ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟನೆ ಮಾಡಲಿದ್ದಾರೆ. ವಿಧಾನಪರಿಷತ್ ಸದಸ್ಯ ವಿ. ಸೋಮಣ್ಣ ಅವರ ನಿಧಿಯಿಂದ ನಿರ್ಮಿಸಿರುವ ಕುಟೀರವನ್ನು ಸೋಮಣ್ಣ ಉದ್ಘಾಟಿಸಲಿದ್ದಾರೆ. ಸಂಜೆ 5.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕೃಷಿಕ್ ಸರ್ವೋದಯ ಫೌಂಡೇಶನ್‌ನ ಅಧ್ಯಕ್ಷ ವೈ.ಕೆ. ಪುಟ್ಟಸೋಮೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದು ವಿವರಿಸಿದರು.

ಜಾನಪದ ನೃತ್ಯಗಳ ಸಾಥ್‌: ಎರಡೂ ದಿನಗಳಂದು ನಾಡಿನ ಕಲಾವಿದರು ಜನಪದ ನೃತ್ಯಗಳನ್ನು ಪ್ರಸ್ತುತಪಡಿಸಲಿದ್ದಾರೆ. ಪಟಾಕುಣಿತ, ವೀರಗಾಸೆ, ಡೊಳ್ಳು, ಕಂಸಾಳೆ, ಚಿಟ್ ಮೇಳ, ಬುಡಬುಡಕೆ ಸಹಿತ ವಿವಿಧ ಕಲಾ ಪ್ರಕಾರಗಳು ಪ್ರದರ್ಶನಗೊಳ್ಳಲಿವೆ. ಎರಡೂ ದಿನಗಳಂದು ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು. ಜಾನಪದ ಲೋಕದ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT