ಶುಕ್ರವಾರ, ಸೆಪ್ಟೆಂಬರ್ 24, 2021
24 °C
ಬೆಳಗಿನ ಜಾವ ಬಾಲ್ಯ ವಿವಾಹ ಮಾಡಲು ಮುಂದಾಗಿದ್ದ ಪೋಷಕರು

ಬಾಲ್ಯ ವಿವಾಹ ಮಾಡಲು ಮುಂದಾಗಿದ್ದ ಪೋಷಕರು: ತಡರಾತ್ರಿ ಕಾರ್ಯಾಚರಣೆ, ಬಾಲಕಿ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ವಿವಾಹ ನೆರವೇರಿಸಲು ಕರೆದೊಯ್ಯುತ್ತಿದ್ದ ಬಾಲಕಿಯನ್ನು ಪೊಲೀಸರ ಸಹಾಯದಿಂದ ಮಕ್ಕಳ ಸಹಾಯವಾಣಿಯ ಸದಸ್ಯರು ಇತ್ತೀಚೆಗೆ ತಡರಾತ್ರಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

ಬೀಳಗಿ ತಾಲ್ಲೂಕು ಶಿವಾಪುರದ ಬಾಲಕಿಯ ಜೊತೆಗೆ ಗುಳೇದಗಡ್ಡ ತಾಲ್ಲೂಕಿನ ರಾಘಾಪುರದ ವರನ ಮದುವೆ ನಿಶ್ವಯವಾಗಿತ್ತು. ಮದುವೆ ನಸುಕಿನ 3 ಗಂಟೆಗೆ ನಿಗದಿಯಾಗಿತ್ತು. ಬಾಲಕಿ ಈಗಷ್ಟೇ ಎಸ್‌ಎಸ್‌ಎಲ್‌ಸಿ ಮುಗಿಸಿದ್ದಳು. ವಿಷಯ ತಿಳಿದ ಮಕ್ಕಳ ಸಹಾಯವಾಣಿ ಸದಸ್ಯರು ರಾತ್ರಿ ಶಿವಾಪುರಕ್ಕೆ ತೆರಳಿದ್ದಾರೆ. ಅವರು ಬರುವ ವಿಷಯ ಗೊತ್ತಾಗಿ ಅಲ್ಲಿಂದ ಬಾಲಕಿಯನ್ನು ಆಗಲೇ ಕರೆದೊಯ್ಯಲಾಗಿತ್ತು.

ಬಿಳಿ ಬಣ್ಣದ ಟೆಂಪೋ ಟ್ರ್ಯಾಕ್ಸ್‌ ವಾಹನದಲ್ಲಿ ಬಾಲಕಿಯನ್ನು ರಾಘಾಪುರಕ್ಕೆ ಕರೆದೊಯ್ಯುತ್ತಿದ್ದಾರೆ ಎಂಬ ವಿಷಯ ತಿಳಿದ ಮಕ್ಕಳ ಸಹಾಯವಾಣಿಯ ಸಂಯೋಜಕ ಬಸವಲಿಂಗಪ್ಪ, ಪೊಲೀಸ್ ನಿಯಂತ್ರಣ ಕೊಠಡಿಗೆ ರಾತ್ರಿ 11.45ಕ್ಕೆ ಕರೆ ಮಾಡಿದ್ದಾರೆ. ಬಾಲಕಿಯನ್ನು ಕರೆದೊಯ್ಯುತ್ತಿದ್ದ ವಾಹನ ಬೀಳಗಿ ಕ್ರಾಸ್ ದಾಟಿ 20 ನಿಮಿಷ ಆಗಿದೆ ಎಂಬ ಮಾಹಿತಿ ನೀಡಿದ್ದಾರೆ. ನಿಯಂತ್ರಣ ಕೊಠಡಿಯವರು ಗದ್ದನಕೇರಿ ಕ್ರಾಸ್‌ನಲ್ಲಿ ನಾಕಾಬಂದಿ ನಡೆಸುತ್ತಿದ್ದ ಕಲಾದಗಿ ಠಾಣೆ ಪೊಲೀಸರು ಹಾಗೂ ಬಾಗಲಕೋಟೆಯ 112 ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಗದ್ದನಕೇರಿ ಕ್ರಾಸ್‌ನಲ್ಲಿ ಕಾದು ನಿಂತಿದ್ದ ಎಎಸ್‌ಐ ಎಸ್‌.ಎಸ್.ನರಸಪ್ಪನವರ ನೇತೃತ್ವದಲ್ಲಿ ಸಿಬ್ಬಂದಿಯಾದ ಎಸ್.ಆರ್. ಭಜಂತ್ರಿ, ಬಿ.ವೈ.ಮಲ್ಲಾಡದ, ಕೆ.ಡಿ.ಹಡಗಲಿ, ಮುತ್ತುರಾಜ ಪೂಜಾರ, ಎಸ್.ಬಿ.ಕೋತಿನ ಕ್ರೂಸರ್ ವಾಹನವನ್ನು ತಡೆದು ಬಾಲಕಿಯನ್ನು ರಕ್ಷಿಸಿದ್ದಾರೆ. ಮರುದಿನ ಪೋಷಕರನ್ನು ಕರೆಸಿ ಮಕ್ಕಳ ಕಲ್ಯಾಣ ಸಮಿತಿ ಉಸ್ತುವಾರಿಯಲ್ಲಿ ಮುಚ್ಚಳಿಕೆ ಬರೆಸಿಕೊಂಡು 18 ವರ್ಷ ತುಂಬುವವರೆಗೂ ಮದುವೆ ಮಾಡದಂತೆ ತಾಕೀತು ಮಾಡಿ ಕಳುಹಿಸಿಕೊಡಲಾಗಿದೆ. ಬಾಲಕಿಯನ್ನು ಮದುವೆಯಾಗಲು ಹೊರಟಿದ್ದ ವರ ಕೂಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ಪೊಲೀಸ್ ಸಿಬ್ಬಂದಿಗೆ ಎಸ್ಪಿ ಪ್ರಶಂಸಾ ಪತ್ರ..
ಮಕ್ಕಳ ಸಹಾಯವಾಣಿ ಸಿಬ್ಬಂದಿಯ ಕರೆ ನಿರ್ಲಕ್ಷ್ಯ ಮಾಡದೇ ಗಂಭೀರವಾಗಿ ಪರಿಗಣಿಸಿ ತಡರಾತ್ರಿ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಣೆ ಮಾಡಿದ ಎಎಸ್‌ಐ ಎಸ್.ಎಸ್.ನರಸಪ್ಪನವರ ಹಾಗೂ ಸಿಬ್ಬಂದಿಗೆ ಎಸ್ಪಿ ಲೋಕೇಶ ಜಗಲಾಸರ್ ಪ್ರಶಂಸಾಪತ್ರ ನೀಡಿ ಗೌರವಿಸಿದರು.

‘ಬಾಲ್ಯವಿವಾಹಗಳ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿರಂತರವಾಗಿ ಶ್ರಮಿಸಲು ಈ ಕಾರ್ಯ ಪ್ರೇರಣಾದಾಯಕವಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು