ಭಾನುವಾರ, ನವೆಂಬರ್ 17, 2019
24 °C
ಬಾಲ್ಯವಿವಾಹ: ರಾಜ್ಯದಲ್ಲಿ ಜಿಲ್ಲೆಯೇ ಎರಡನೇ ಸ್ಥಾನ l ಸಿಗದ ಸರ್ಕಾರದ ಯೋಜನೆಗಳ ನೆರವು

ಮಾತೃಪೂರ್ಣ ವಂಚಿತ ಬಾಲೆಯರು!

Published:
Updated:
prajavani

ಬಾಗಲಕೋಟೆ: ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಪಿಡುಗು ಹೆಚ್ಚಿರುವ ಕಾರಣ ವಯೋಮಿತಿಯ ಅಡ್ಡಿಯಿಂದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾತೃವಂದನಾ ಹಾಗೂ ಮಾತೃಪೂರ್ಣ ಯೋಜನೆಗಳ ಲಾಭ ಬಾಲೆಯರಿಗೆ ದೊರೆಯುತ್ತಿಲ್ಲ.

18 ವರ್ಷ ತುಂಬಿದ ಗರ್ಭಿಣಿಯರು ಮಾತ್ರ ಈ ಎರಡೂ ಯೋಜನೆಗಳಿಗೆ ಅರ್ಹರಾಗುತ್ತಾರೆ. ಹೀಗಾಗಿ ಹೆಚ್ಚಿನವರು ವಂಚಿತರಾಗುತ್ತಿದ್ದು, ಅಪೌಷ್ಟಿಕ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ.

ರಾಜ್ಯದಲ್ಲಿ ಬಾಲ್ಯವಿವಾಹದಲ್ಲಿ ಬಾಗಲಕೋಟೆ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಜೊತೆಗೆ ವರ್ಷದಿಂದ ವರ್ಷಕ್ಕೆ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಳವಾಗುತ್ತಿವೆ. 18 ವರ್ಷಕ್ಕೆ ಮುನ್ನ ಗರ್ಭಿಣಿಯರಾದವರಿಗೆ ಆರೋಗ್ಯ ಸವಲತ್ತು ಕಲ್ಪಿಸಲು ಆಶಾ ಕಾರ್ಯಕರ್ತೆಯರು ನಿರಾಕರಿಸುತ್ತಿದ್ದಾರೆ. ಇದು ಅವರ ಸಂಕಷ್ಟ ಹೆಚ್ಚಿಸಿದೆ.

‘ಸರ್ಕಾರ ಬಾಲ್ಯ ವಿವಾಹದ ಪಿಡುಗಿಗೆ ಸಂಪೂರ್ಣ ಕಡಿವಾಣ ಹಾಕಲಿ. ಇಲ್ಲದಿದ್ದರೆ ವಯಸ್ಸಿನ ಮಿತಿ ಇಲ್ಲದೇ ಮಾತೃವಂದನಾ ಹಾಗೂ ಮಾತೃಪೂರ್ಣ ಯೋಜನೆಗಳ ಉಪಯೋಗ ಎಲ್ಲರಿಗೂ ಕೊಡಲಿ. ದೊಡ್ಡವರು ಮಾಡಿದ ತಪ್ಪಿಗೆ ಬಾಲಕಿಯರು, ಅವರು ಜನ್ಮ ನೀಡಿದ ಮಕ್ಕಳು ಏಕೆ ಶಿಕ್ಷೆ ಅನುಭವಿಸಬೇಕು’ ಎಂದು ಬಾಗಲಕೋಟೆಯ ಸರ್ಚ್ ಸರ್ಕಾರೇತರ ಸಂಘಟನೆಯ ಸಮನ್ವಯ
ಕಾರ ಜಿ.ಎನ್.ಕುಮಾರ್ ಪ್ರಶ್ನಿಸುತ್ತಾರೆ.

‘ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದಕ್ಕೆ ನಾಲ್ಕು ವರ್ಷಗಳಲ್ಲಿ ಸಹಾಯವಾಣಿ 1098ಕ್ಕೆ ಕರೆ ಮಾಡಿ ನೆರವು ಕೋರಿದ ಪ್ರಕರಣಗಳೇ ಪುಷ್ಟಿ ನೀಡುತ್ತವೆ. ಆದರೆ ಬಯಲಿಗೆ ಬಾರದೇ ಬಹಳಷ್ಟು ವಿವಾಹಗಳು ನಡೆದಿವೆ’ ಎಂದು ಕುಮಾರ್ ಹೇಳುತ್ತಾರೆ.

ಕೇಂದ್ರದ ನೆರವಿನ ಮಾತೃವಂದನಾ ಅಡಿ ಗರ್ಭಿಣಿಯರಿಗೆ ಮೂರು ಕಂತಿನಲ್ಲಿ ₹5 ಸಾವಿರ ಕೊಡಲಾಗುತ್ತದೆ.  ಗರ್ಭಿಣಿಯಾದ ತಿಂಗಳಿನಿಂದ ಹೆರಿಗೆ ಆಗುವವರೆಗೂ ಮಾತೃಪೂರ್ಣದಡಿ ಪೌಷ್ಟಿಕ ಆಹಾರ ಕೊಡಲಾಗುತ್ತದೆ. ವಿಶೇಷವೆಂದರೆ ಈ ಯೋಜನೆಗಳ ಅನುಷ್ಠಾನದಲ್ಲಿ ಬಾಗಲಕೋಟೆ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ.

‘ಮೇಲಧಿಕಾರಿಗಳು ಪ್ರಶ್ನೆ ಮಾಡುತ್ತಾರೆ ಎಂಬ ಕಾರಣಕ್ಕೆ 18 ವರ್ಷದೊಳಗಿನ ಗರ್ಭಿಣಿಯರ ಹೆಸರನ್ನು ನಾವು ದಾಖಲೆಯಲ್ಲಿ ನಮೂದಿಸುವುದಿಲ್ಲ. ವಯಸ್ಸಿನ ದಾಖಲೆ ಬೇಕಿರುವುದರಿಂದ ಮಾತೃವಂದನದಡಿ ಹಣ ಕೊಡಲು ಆಗೊಲ್ಲ. ಆದರೆ ಮಾತೃಪೂರ್ಣದಲ್ಲಿ ದಾಖಲೆ ರಹಿತವಾಗಿಯೇ ಊಟ ಕೊಡುತ್ತೇವೆ. ನಾವೂ ಮನುಷ್ಯರಲ್ಲವೇ?’ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹೇಳುತ್ತಾರೆ.

ಪ್ರತಿಕ್ರಿಯಿಸಿ (+)