ಕೆರೂರ: ಇಲ್ಲಿಯ ಮುಖ್ಯ ಬಜಾರ ವಾಣಿಜ್ಯ ಮಳಿಗೆಗಳ ಬಹುತೇಕ ಮಾಲೀಕರು ಸುಮಾರು 30ಕ್ಕೂ ಅಧಿಕ ವರ್ಷಗಳಿಂದ ಬಹಿರಂಗ ಹರಾಜಿಲ್ಲದೆ ವಾಣಿಜ್ಯ ಮಳಿಗೆಗಳನ್ನು ಮುನ್ನೆಡೆಸುತ್ತಾ ಬಂದಿದ್ದಾರೆ. ಲಕ್ಷಾಂತರ ರೂಪಾಯಿ ಮೊತ್ತದ ಬಾಡಿಗೆ ಹಣ ಬಾಕಿ ಉಳಿಸಿಕೊಂಡು ಪಟ್ಟಣ ಪಂಚಾಯಿತಿ ಆದಾಯಕ್ಕೆ ಕೊಕ್ಕೆ ಹಾಕಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ, ಕಾರ್ಯಾಲಯದಲ್ಲಿ ವಾಣಿಜ್ಯ ಮಳಿಗೆಗಳ ಮಾಲೀಕರೊಂದಿಗೆ ಬಾಕಿ ತೆರಿಗೆ ಪಾವತಿ ಮಾಡುವ ಕುರಿತು ಶನಿವಾರ ತುರ್ತು ಸಭೆ ನಡೆಸಿ, ಬಾಕಿ ತೆರಿಗೆ ಮೊತ್ತ ಪಾವತಿಗೆ ಒಂದು ವಾರದ ಗಡುವು ನೀಡಿದ್ದಾರೆ.
ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮುಖ್ಯ ಬಜಾರನಲ್ಲಿರುವ 27 ವಾಣಿಜ್ಯ ಮಳಿಗೆಗಳ ₹25 ಲಕ್ಷಕ್ಕೂ ಅಧಿಕ ಬಾಕಿ ತೆರಿಗೆ ವಸೂಲಾತಿಗೆ ಮುಂದಾಗಿದ್ದಾರೆ.
‘ವಾರದೊಳಗೆ ತೆರಿಗೆ ಪಾವತಿ ಮಾಡದೆ ಇದ್ದಲ್ಲಿ ನೋಟಿಸಿ ನೀಡಿ ಜಪ್ತಿ ಮಾಡಲಾಗುವುದು’ ಎಂದು ಮುಖ್ಯಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
‘ವಾಣಿಜ್ಯ ಮಳಿಗೆಗಳ ಟೆಂಡರ್ ಅವಧಿ ಕೂಡಾ ಮುಕ್ತಾಯವಾಗಿದ್ದು, ಸರ್ಕಾರದ ನಿಯಮದಂತೆ ಹೊಸ ಟೆಂಡರ್ ಅಥವಾ ಹೊಸ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ದಪಡಿಸಲಾಗುವುದು’ ಎಂದು ಹೇಳಿದರು.
ಪಟ್ಟಣದ ಸೌಂದರ್ಯ ಹೆಚ್ಚಿಸಲು ಹಾಗೂ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಹೊಸ ಕಟ್ಟಡ ನಿರ್ಮಾಣಕ್ಕೆ ವಾಣಿಜ್ಯ ಮಳಿಗೆಗಳ ವ್ಯಾಪಾರಿಗಳು ಸಹಕರಿಸಬೇಕು.
ಭೀಮಸೇನ ಚಿಮ್ಮನಕಟ್ಟಿ, ಶಾಸಕ
ವಾಣಿಜ್ಯ ಮಳಿಗೆಗಳು 4 ದಶಕಗಳಷ್ಟು ಹಳೆಯದಾಗಿದ್ದು ಹೊಸ ಬಹುಮಹಡಿ ಕಟ್ಟಡ ನಿರ್ಮಾಣದಿಂದ ಪ.ಪಂ ಆದಾಯ ಹೆಚ್ಚಲಿದೆ.