ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಧೋಳ | ಶಿರೋಳ ಕರಗಿತು ಅನುಮಾನದ ಕಾರ್ಮೋಡ: ದ್ವೇಷ ಮರೆತ ಊರ ಜನ

ದ್ವೇಷ ಮರೆತು ಚಹಾ ಕುಡಿದರು, ಕಣ್ಣೀರು ಗರೆದರು, ಊರ ದೇವರ ಮೇಲೆ ಪ್ರಮಾಣ ಮಾಡಿದರು
Last Updated 2 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಮುಧೋಳ: ಸವರ್ಣೀಯರು ಹಾಗೂ ದಲಿತರ ನಡುವಿನ ವೈಮನಸ್ಸಿನ ಕಾರಣದಿಂದ ವರ್ಷಗಳ ಕಾಲ ಜಾತಿ ಸಂಘರ್ಷದ ಆಡಂಬೋಲವಾಗಿ ಬದಲಾಗಿದ್ದ ತಾಲ್ಲೂಕಿನ ಶಿರೋಳ ಗ್ರಾಮದಲ್ಲಿ ಸೋಮವಾರ ಸಾಮರಸ್ಯದ ಬೀಜ ಬಿತ್ತನೆಯಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಅವರ ವಿಶೇಷ ಕಾಳಜಿಯ ಪರಿಣಾಮ ವರ್ಷಗಳಿಂದ ಪರಸ್ಪರ ಮುಖ ನೋಡದಷ್ಟು ದೂರವಾಗಿ ದ್ವೇಷದ ದಾವನಾಲದಲ್ಲಿ ಬೆಂದವರು ಅಕ್ಕಪಕ್ಕ ಕುಳಿತು ಮಾತನಾಡಿದರು. ಮನದಾಳದ ಭಾವನೆಗಳು ಕಣ್ಣೀರ ರೂಪ ತಾಳಿ ಹಗುರಗೊಂಡರು. ಇಡೀ ಗ್ರಾಮ ಮಾನವೀಯತೆಯ ಅಪ್ಪುಗೆಗೆ ಕಾಯ್ದು ಕುಳಿತಂತೆ ತೋರಿತು.

ದ್ವೇಷ, ಅನುಮಾನಗಳು ಊರಿನಲ್ಲಿ ಮೂಡಿಸಿರುವ ರಕ್ತಸಿಕ್ತ ಹೆಜ್ಜೆಗಳನ್ನು ಅಳಿಸಿಹಾಕಿ ಸಹೋದರತ್ವದ ಬಂಧ ಬೆಸೆದುಕೊಳ್ಳಲು ಗ್ರಾಮಸ್ಥರು ತೀರ್ಮಾನ ಮಾಡಿದರು. ಇನ್ನು ಮುಂದೆ ಜಾತಿ ನಂಜಿಗೆ ಬಾಂಧವ್ಯಗಳ ಹಾಳು ಮಾಡಿಕೊಳ್ಳುವುದಿಲ್ಲ ಎಂದು ಊರ ದೈವ ಕಾಡಸಿದ್ದೇಶ್ವರನ ಮೇಲೆ ಆಣೆ ಮಾಡಿದರು. ಇದಕ್ಕೆ ಸ್ವತಃ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ರಾಜೇಂದ್ರ ಸಾಕ್ಷಿಯಾದರು.

ಕಳೆದ ಸೂತಕದ ಛಾಯೆ:ಅಕ್ಟೋಬರ್‌ನಲ್ಲಿ ನಡೆದ ದಲಿತ ಸಮುದಾಯದ ಅಪ್ಪ–ಮಗನ ಜೋಡಿ ಕೊಲೆ ಘಟನೆಯಿಂದ ಇಡೀ ಗ್ರಾಮ ತತ್ತರಿಸಿತ್ತು. ತಿಂಗಳು ಕಳೆದರೂ ಊರಿನಲ್ಲಿ ಸೂತಕದ ಛಾಯೆ ಮುಂದುವರೆದಿತ್ತು. ಪರಸ್ಪರ ದ್ವೇಷ ಭಾವ, ಸಂಶಯದ ಪ್ರವೃತ್ತಿ ಮುಂದುವರೆದಿತ್ತು. ಬೂದಿ ಮುಚ್ಚಿದ ಕೆಂಡದಂತಿದ್ದ ವಾತಾವರಣ ತಿಳಿಗೊಳಿಸಲು ಎಸ್‌ಪಿಮುಂದಾಗಿದ್ದರು. ಜಿಲ್ಲಾಧಿಕಾರಿ ಅದರ ನೇತೃತ್ವ ವಹಿಸಿದ್ದರು.ವಿಶೇಷ ಮುತುವರ್ಜಿ ವಹಿಸಿ ಎರಡು ಗಂಟೆಗೂ ಹೆಚ್ಚು ಕಾಲ ಗ್ರಾಮದಲ್ಲಿ ಇದ್ದು, ಕಹಿ ಭಾವ ಮರೆತು ಪರಸ್ಪರರನ್ನು ಒಂದಾಗಿಸಲು ಪ್ರಯತ್ನಿಸಿದರು.ಅಧಿಕಾರಿಗಳ ಈ ಪ್ರಯತ್ನಕ್ಕೆ ಗ್ರಾಮಸ್ಥರು ಪೂರಕವಾಗಿಯೇ ಸ್ಪಂದಿಸಿದರು.

’ಕೊಲೆ ಘಟನೆ ದುರದೃಷ್ಟಕರ ಸಂಗತಿ. ಘಟನೆ ಮರೆತು ಎಲ್ಲರೂ ಸೌಹಾರ್ದತೆಯಿಂದ ಬದುಕಿ’ ಎಂದು ಡಿ.ಸಿ ತಿಳಿ ಹೇಳಿದರು. ‘ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ನಿಷ್ಪಕ್ಷಪಾತ ತನಿಖೆಗೆ ಬೇರೆ ಜಿಲ್ಲೆಯ ಇಬ್ಬರು ಐಪಿಎಸ್ ಅಧಿಕಾರಿಗಳ ನೇಮಿಸಲಾಗಿದೆ’ ಎಂದು ಹೇಳಿದರು.

ಎಸ್‌ಪಿಲೋಕೇಶ ಜಗಲಾಸರ್ ಮಾತನಾಡಿ, ’ನೀವು (ಗ್ರಾಮಸ್ಥರು) ರಾಗ– ದ್ವೇಷ ಬಿಟ್ಟು ಪ್ರಾಮಾಣಿಕವಾಗಿ ಒಂದಾಗುವುದಾದರೆ ಮಾತ್ರ ನಾವು ವೇದಿಕೆ ಕಲ್ಪಿಸುತ್ತೇವೆ. ಒತ್ತಾಯಕ್ಕೆ ಒಂದುಗೂಡುವ ಅಗತ್ಯವಿಲ್ಲ. ಪೂರ್ವಾಗ್ರಹಗಳ ತ್ಯಜಿಸಿ ನೀವೆಲ್ಲರೂ ಸಾಮರಸ್ಯದಿಂದ ಬದುಕುವವರೆಗೂ ನಾವು (ಪೊಲೀಸರು) ಸಂಪೂರ್ಣ ನಿಗಾ ಇಟ್ಟಿರುತ್ತೇವೆ. ಯುವಕರಿಗೆ ಹಿರಿಯರು ಬುದ್ದಿ ಹೇಳಿ ತಿದ್ದಬೇಕು. ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸಬೇಕು’ ಎಂದು ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮುಖಂಡರಾದ ಸಂಗಪ್ಪ ನಾಗರೆಡ್ಡಿ, ರಾಚಪ್ಪ ಕುಲ್ಲೊಳ್ಳಿ, ಬಸವಂತ ಕಾಂಬಳೆ ಹಾಗೂ ಯಲ್ಲಪ್ಪ ತಳಗೇರಿ, ‘ಗ್ರಾಮದಲ್ಲಿ ನಡೆದಿರುವ ಕಹಿ ಘಟನೆ ಮರೆತು ಮುಂದಿನ ದಿನಗಳಲ್ಲಿ ಎಲ್ಲರೂ ಅಣ್ಣ ತಮ್ಮಂದಿರಂತೆ ಒಟ್ಟಾಗಿ ಬದುಕುತ್ತೇವೆ’ ದೇವರ ಮೇಲೆ ಪ್ರಮಾಣ ಮಾಡಿದರು.

ಗ್ರಾಮದ ಮುಖಂಡರು ಹಾಗೂ ಕೊಲೆ ನಡೆದ ತಳಗೇರಿ ಕುಟುಂಬದವರು ಒಂದೆಡೆ ಸೇರಿ ಮಾತನಾಡಲು ಎಸ್ಪಿ ವೇದಿಕೆ ಕಲ್ಪಿಸಿದರು. ಈ ವೇಳೆ ಪರಸ್ಪರರು ದುಃಖಿಸಿ ಕಣ್ಣೀರು ಹಾಕಿದರು. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟದ್ದಕ್ಕೆ ತಮ್ಮನ್ನೇ ಹಳಿದುಕೊಂಡರು. ನಂತರ ಗ್ರಾಮದ ಮುಖಂಡರು ಎಸ್ಪಿ ಅವರೊಂದಿಗೆ ಯಲ್ಲಪ್ಪ ತಳಗೇರಿ ಅವರ ಮನೆಗೆ ಹೋಗಿ ಚಹಾ ಕುಡಿದದ್ದು ವಿಶೇಷವಾಗಿತ್ತು.

ಸಭೆಯಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ಡಿವೈಎಸ್‌ಪಿ ಆರ್.ಕೆ.ಪಾಟೀಲ, ಸಿಪಿಐ ಎಚ್.ಆರ್.ಪಾಟೀಲ, ತಹಶೀಲ್ದಾರ್ ಎಸ್.ಬಿ. ಬಾಡಗಿ, ತಾಲ್ಲೂಕು ಪಂಚಾಯ್ತಿ ಇಒ ಎನ್.ವೈ. ಬಸರಿಗಿಡದ, ಸಮಾಜ ಕಲ್ಯಾಣ ಅಧಿಕಾರಿ ಮೋಹನ ಕೊರಡ್ಡಿ, ಪಿಎಸ್ ಐ ಮಲ್ಲಿಕಾರ್ಜುನ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT