ಶುಕ್ರವಾರ, ಅಕ್ಟೋಬರ್ 7, 2022
28 °C

ಕಾಂಗ್ರೆಸ್‌, ಜನತಾ ‘ಕೋಟೆ’; ಈಗ ಬಿಜೆಪಿ ವಶ

ಬಸವರಾಜ ಹವಾಲ್ದಾರ‌ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ದೇಶದ ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ಜಿಲ್ಲೆ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. 1985ರಲ್ಲಿ ಜನತಾ ಪಾರ್ಟಿ, ಮುಂದೆ ಜನತಾ ದಳದ ವಶದಲ್ಲಿತ್ತು. ಆದರೆ, ಈಗ ಅದು  ಬಿಜೆಪಿಯ ‘ಕೋಟೆ’ಯಾಗಿದೆ.

1983ರವರೆಗಿನ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಹೆಚ್ಚಿತ್ತು. 1985ರಲ್ಲಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ರಾಜೀನಾಮೆ ನೀಡಿ, ಸಾರ್ವತ್ರಿಕ ಚುನಾವಣೆಗೆ ಮುಂದಾಗುತ್ತಾರೆ. ಆ ವೇಳೆಗೆ ಅವರು ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕರಾಗಿದ್ದರು. ಆಗ ನಡೆದ ವಿಧಾನಸಭೆ ಚುನಾವಣೆಯಲ್ಲಿ ಏಳು ಕ್ಷೇತ್ರಗಳ ಪೈಕಿ ಆರರಲ್ಲಿ ಜನತಾ ಪಾರ್ಟಿ ಜಯ ಸಾಧಿಸುತ್ತದೆ. ಅವರು ಪೂರ್ಣ ಬಹುಮತದೊಂದಿಗೆ ಮುಖ್ಯಮಂತ್ರಿಯಾಗುವಲ್ಲಿ ಬಾಗಲಕೋಟೆ ಶಾಸಕರ ಕೊಡುಗೆಯೂ ಇರುತ್ತದೆ.

1989ರ ಚುನಾವಣೆಯಲ್ಲಿ ಜನತಾ ಪಾರ್ಟಿ ಒಡೆದ ಮನೆಯಾಗಿರುತ್ತದೆ. ಜನತಾ ದಳದಿಂದ ನಾಲ್ಕರು ಆಯ್ಕೆಯಾದರೆ, ಕಾಂಗ್ರೆಸ್‌ನಿಂದ ಮೂವರು ಆಯ್ಕೆಯಾಗುತ್ತಾರೆ. 94ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ನಾಲ್ವರು ಆಯ್ಕೆಯಾದರೆ, ಜನತಾ ದಳದಿಂದ ಮೂವರು ಆಯ್ಕೆಯಾಗುತ್ತಾರೆ.

1999ರಲ್ಲಿ ನಡೆದ ಚುನಾವಣೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿ (ಯು) ನಡುವೆ ಸ್ಪರ್ಧೆ ನಡೆಯುತ್ತದೆ. ಆರು ಕಡೆ ಕಾಂಗ್ರೆಸ್‌ ಗೆದ್ದರೆ, ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ. ಜೆಡಿ (ಯು) ಶೂನ್ಯ ಸಾಧನೆ ಮಾಡುತ್ತದೆ. 

2004ರ ಚುಣಾವಣೆ ವೇಳೆಗೆ ಜನತಾ ಪರಿವಾರದ ನಾಯಕರಾಗಿದ್ದ ಗೋವಿಂದ ಕಾರಜೋಳ, ಎಂ.ಕೆ.ಪಟ್ಟಣಶೆಟ್ಟಿ ಮುಂತಾದವರು ಬಿಜೆಪಿ ಸೇರ್ಪಡೆಯಾಗಿರುತ್ತಾರೆ. ಇದರಿಂದಾಗಿ ಬಿಜೆಪಿ ಆರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಜೆಡಿ(ಎಸ್‌) ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸುತ್ತದೆ.

2008ರ ಚುನಾವಣೆ ವೇಳೆಗೆ ವಿಧಾನಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆಯಾಗುತ್ತದೆ. ಗುಳೇದಗುಡ್ಡ ಕ್ಷೇತ್ರ ರದ್ದಾಗಿ, ಬಾದಾಮಿ ಕ್ಷೇತ್ರದಲ್ಲಿ ಸೇರ್ಪಡೆಯಾಗುತ್ತದೆ. ತೇರದಾಳ ಹೊಸ ವಿಧಾನಸಭಾ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬರುತ್ತದೆ. ಈ ಚುನಾವಣೆಯಲ್ಲಿ ಏಳೂ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿಯ ಕಮಲ ಸಂಪೂರ್ಣವಾಗಿ ಅರಳುತ್ತದೆ. ಅಜಯಕುಮಾರ ಸರನಾಯಕ, ಆರ್.ಬಿ. ತಿಮ್ಮಾಪುರ, ಎಂ.ವೈ. ಮೇಟಿ, ಬಿ.ಬಿ. ಚಿಮ್ಮನಕಟ್ಟಿಯಂತಹ ನಾಯಕರು ಸೋತು ಹೋಗುತ್ತಾರೆ.

2013ರ ವಿಧಾನಸಭೆ ಚುನಾವಣೆಯಲ್ಲಿ ಆರು ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಮತದಾರ ಮತ್ತೆ ಕಾಂಗ್ರೆಸ್‌ಗೆ ಮಣೆ ಹಾಕುತ್ತಾನೆ. ಬಿಜೆಪಿ ಒಂದೇ ಸ್ಥಾನಕ್ಕೆ ತೃಪ್ತಿ ಪಟ್ಟಕೊಳ್ಳಬೇಕಾಗುತ್ತದೆ. 

2018ರ ಚುನಾವಣೆಯಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. ಅದರ ಲಾಭ ಕಾಂಗ್ರೆಸ್‌ಗೆ ಸಿಗುವುದಿಲ್ಲ. ಐದು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮೇಲುಗೈ ಸಾಧಿಸುತ್ತದೆ. ಸಿದ್ದರಾಮಯ್ಯ ಅವರು ಕಡಿಮೆ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌, ಬಿಜೆಪಿ ನಡುವೆ ಫೈಟ್‌ ನಡೆಯಲಿದೆ. ಜೆಡಿಎಸ್‌ ಅಸ್ತಿತ್ವಕ್ಕಾಗಿ ಪರದಾಡುತ್ತಿದೆ.

ಲೋಕಸಭೆ ಕ್ಷೇತ್ರ: ಬಿಜೆಪಿ ಭದ್ರಕೋಟೆ

ಬಾಗಲಕೋಟೆ: ಹೊಸ ಜಿಲ್ಲೆ ರಚನೆಯಾದ ನಂತರ 1998ರಲ್ಲಿ ನಡೆದ ಲೋಕಸಭಾ ಕ್ಷೇತ್ರಕ್ಕೆ ನಡೆದ ಮೊದಲ ಚುನಾವಣೆಯಲ್ಲಿ ಲೋಕಶಕ್ತಿಯ ಅಜಯಕುಮಾರ ಸರನಾಯಕ ಗೆಲುವು ಸಾಧಿಸುತ್ತಾರೆ. 

ವರ್ಷದ ಅಂತರದಲ್ಲಿ ನಡೆಯುವ ಚುನಾವಣೆಯಲ್ಲಿ ಜೆಡಿಯು ಹಾಗೂ ಜೆಡಿಎಸ್‌ನಿಂದ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಪರಿಣಾಮ ಕಾಂಗ್ರೆಸ್‌ನ ಎಸ್‌.ಆರ್‌. ಪಾಟೀಲ ಅವರು ಗೆಲುವು ಸಾಧಿಸುತ್ತಾರೆ. 2004ರಿಂದ ನಡೆದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿಯ ಪಿ.ಸಿ ಗದ್ದಿಗೌಡರ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ. ಲೋಕಸಭೆ ಚುನಾವಣೆ ಮಟ್ಟಿಗೆ ಜಿಲ್ಲೆ ಬಿಜೆಪಿ ಭದ್ರಕೋಟೆಯಾಗಿದೆ.

ಇಲ್ಲಿನ ಲೋಕಸಭಾ ಕ್ಷೇತ್ರದಿಂದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸ್ಪರ್ಧಿಸಿದ್ದಾರೆ. 1980ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೀರೇಂದ್ರ ಪಾಟೀಲ ಅವರು ಗೆಲುವು ಸಾಧಿಸುತ್ತಾರೆ. 1991ರಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಸೋಲುತ್ತಾರೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸಿದ್ದು ನ್ಯಾಮನಗೌಡರ ಗೆಲುವು ಸಾಧಿಸುತ್ತಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು