ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಸರ್ಕಾರಿ ಹುದ್ದೆಗಳಿಗೆ ನಮ್ಮನ್ನು ಪರಿಗಣಿಸಿ’

ಕೇಂದ್ರ, ರಾಜ್ಯ ಸರ್ಕಾರಕ್ಕೆ ತೋಟಗಾರಿಕೆ ವಿ.ವಿ ವಿದ್ಯಾರ್ಥಿಗಳ ಒತ್ತಾಯ
Last Updated 12 ನವೆಂಬರ್ 2019, 16:47 IST
ಅಕ್ಷರ ಗಾತ್ರ

ಬಾಗಲಕೋಟೆ: ’ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ನೇಮಕಾತಿ ವೇಳೆತೋಟಗಾರಿಕೆ ವಿಜ್ಞಾನ ವಿಷಯದಲ್ಲಿ ಪದವಿ ಪಡೆದವರನ್ನು ಪರಿಗಣಿಸಬೇಕು’ ಎಂದು ಆಗ್ರಹಿಸಿ ಇಲ್ಲಿನ ತೋಟಗಾರಿಕೆ ವಿಜ್ಞಾನಿಗಳ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಮಂಗಳವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.

ವಿಶ್ವವಿದ್ಯಾಲಯ ಮುಂಭಾಗದ ಗೇಟ್ ಎದುರು ಜಮಾಯಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ವಿಜ್ಞಾನದಲ್ಲಿ ಪದವಿ ಪಡೆದವರನ್ನು ಮಾತ್ರ ನೇಮಕಾತಿ ವೇಳೆ ಪರಿಗಣಿಸಲಾಗುತ್ತಿದೆ. ಅದೇ ವಿಷಯಗಳನ್ನು ಓದಿರುವ ನಮ್ಮನ್ನು ಯಾವುದೇ ಹುದ್ದೆಗಳಿಗೆ ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ಸಂಜೀವ ಜಕಾತಿಮಠ ಮಾತನಾಡಿ, ‘ಕೃಷಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಓದಿರುವುದನ್ನೇ ನಾವು ಓದುತ್ತಿದ್ದೇವೆ. ಆದರೂ ನಮಗೆ ಯಾವುದೇ ಹುದ್ದೆಗೆ ಅರ್ಜಿ ತುಂಬಲು ಅವಕಾಶ ನೀಡುತ್ತಿಲ್ಲ’ ಎಂದು ಆರೋಪಿಸಿದರು.

‘ಕೇಂದ್ರ ಉಗ್ರಾಣ ನಿಗಮ, ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ, ಭಾರತೀಯ ಆಹಾರ ನಿಗಮ, ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ನೇಮಕಾತಿ ವೇಳೆ ತೋಟಗಾರಿಕೆ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳನ್ನು ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯ ಬೀಜ ನಿಗಮ, ರೈತರ ಸಹಕಾರಿ ಮಾರಾಟ ಮಹಾಮಂಡಳ, ರಾಜ್ಯ ಹಾಲು ಒಕ್ಕೂಟ ಸೇರಿದಂತೆ ಬೇರೆ ಬೇರೆ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳಿಗೆ ತುಂಬಿಕೊಳ್ಳಲಾಗುತ್ತಿದೆ. ಅಲ್ಲಿ ನಮ್ಮನ್ನು ಪರಿಗಣಿಸುತ್ತಿಲ್ಲ. ಹೀಗೆ ನಮ್ಮನ್ನು ಯಾವುದೇ ಹುದ್ದೆಗಳಿಗೆ ಪರಿಗಣಿಸದ ಕಾರಣ ನಮ್ಮ ಜೀವನ ಅತಂತ್ರ ಸ್ಥಿತಿಗೆ ತಲುಪಿದೆ’ ಎಂದು ಬೇಸರ ವ್ಯಕ್ತ ಪಡಿಸಿದರು.

‘ಈ ಬಗ್ಗೆ ಕಳೆದ 5 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿದರೂ ಯಾವುದೆ ಪ್ರಯೋಜನವಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಈ ಧೋರಣೆಯಿಂದ ತೋಟಗಾರಿಕೆ ವಿಜ್ಞಾನ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಸರ್ಕಾರಿ ಕೆಲಸ ಪಡೆಯುವುದೇ ದುಸ್ತರವಾಗಿದೆ’ ಎಂದರು.

ವಿದ್ಯಾರ್ಥಿಗಳಾದ ಸಂತೋಷ ಹಡಗಲಿ, ಮಧುಸೂದನ್ ಕೆ.ಟಿ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ಪ್ರಶಾಂತ ಮಲಬನ್ನವರ್, ಕೆ.ಎನ್.ಮಂಜುಳಾ, ಬಿ.ಎಸ್.ಯಮುನಾ,ಎನ್.ಕೆ.ತೇಜಸ್ವಿನಿ ಸೇರಿದಂತೆ ಪದವಿ, ಸ್ನಾತ್ತಕೋತ್ತರ ಹಾಗೂ ಪಿ.ಎಚ್‌.ಡಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT