ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಭೀತಿ: ಆಶಾ ಕಾರ್ಯಕರ್ತೆಯರಿಂದ ಕಣ್ಗಾವಲು!

ಐಸೊಲೇಶನ್‌ ವಾರ್ಡ್‌ನಲ್ಲಿ ಒಬ್ಬರಿಗೆ ಚಿಕಿತ್ಸೆ
Last Updated 16 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬಾಗಲಕೋಟೆ: ಕೊರೊನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿದೇಶದಿಂದ ಬಂದಿರುವ 103 ಮಂದಿಯ ಮೇಲೆ ಜಿಲ್ಲಾಡಳಿತ ನಿಗಾ ಇಟ್ಟಿದೆ. ವಿಶೇಷವೆಂದರೆ ಭಾನುವಾರ ಜಿಲ್ಲೆಯಲ್ಲಿ ವಿದೇಶದಿಂದ ಬಂದವರ ಸಂಖ್ಯೆ 64 ಇದ್ದರೆ, ಸೋಮವಾರ ಒಂದೇ ದಿನ 39 ಮಂದಿ ಹೆಚ್ಚಳಗೊಂಡಿದ್ದಾರೆ.

ಇವರಲ್ಲಿ ಬಾದಾಮಿ ತಾಲ್ಲೂಕಿನ ವ್ಯಕ್ತಿಯೊಬ್ಬರಿಗೆ ಶೀತ (ನೆಗಡಿ) ಕಾಣಿಸಿಕೊಂಡಿದೆ. ಅವರನ್ನು ನವನಗರದ ಜಿಲ್ಲಾ ಆಸ್ಪತ್ರೆಯ ಐಸೊಲೇಶನ್ ವಾರ್ಡ್‌ನಲ್ಲಿ ಇಡಲಾಗಿದೆ. ಆದರೆ ಅವರಲ್ಲಿ ಕೊರೊನಾ ವೈರಸ್ ಬಾಧಿಸಿದ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರಿಂದ ಉತ್ತಮ ಸ್ಪಂದನೆ

ವಿದೇಶದಿಂದ ಬಂದವರಲ್ಲಿ ಹೆಚ್ಚಿನವರು ಸೌದಿ ಅರೇಬಿಯಾ ಹಾಗೂ ದುಬೈನಿಂದ ಮರಳಿದ್ದಾರೆ. ’ಅಕ್ಕಪಕ್ಕದ ಮನೆಗಳಲ್ಲಿ ಯಾರಾದರೂ ವಿದೇಶಗಳಿಂದ ಬಂದವರು ಇದ್ದರೆ ಮಾಹಿತಿ ಕೊಡಿ‘ ಎಂದು ಮಾಧ್ಯಮಗಳ ಮೂಲಕ ಜಿಲ್ಲಾಡಳಿತ ಮಾಡಿದ ಮನವಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಅವರ ಸಹಕಾರದಿಂದಲೇ ವಿದೇಶಗಳಿಂದ ಬಂದವರು ಇಷ್ಟೊಂದು ಪ್ರಮಾಣದಲ್ಲಿ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದಾರೆ ಎಂದು ಡಾ.ಅನಂತ ದೇಸಾಯಿ ತಿಳಿಸಿದರು.

ಆಶಾ ಕಾರ್ಯಕರ್ತೆಯರ ಕಣ್ಗಾವಲು

ವಿದೇಶದಿಂದ ಮರಳಿದವರಿಗೆ 14 ದಿನಗಳ ಕಾಲ ಮನೆಯಿಂದ ಹೊರಗೆ ಬರದಂತೆ ಹಾಗೂ ಪ್ರತ್ಯೇಕವಾಗಿ ಇರುವಂತೆ (ಕ್ವಾರಂಟೈನ್) ಸೂಚನೆ ನೀಡಲಾಗಿದೆ. ಅವರ ಮೇಲೆ ಆಯಾ ಪ್ರದೇಶದ ಆಶಾ ಕಾರ್ಯಕರ್ತೆಯರು ನಿಗಾ ಇಡಲಿದ್ದಾರೆ. ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಅವರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ.

’ವಿದೇಶದಿಂದ ಬಂದವರು ನಿಗಾದಲ್ಲಿ ಇರಲು ಒಪ್ಪದಿದ್ದಲ್ಲಿ ಇಲ್ಲವೇ ಆರೋಗ್ಯ ಸ್ಥಿತಿಗತಿ ವಿಚಾರದಲ್ಲಿ ಆರೋಗ್ಯ ಇಲಾಖೆಯ ಕಾಳಜಿಗೆ ಸ್ಪಂದನೆ ನೀಡದಿದ್ದಲ್ಲಿ ಪೊಲೀಸರ ನೆರವು ಪಡೆಯುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ನೀಡಿದ್ದಾರೆ‘ ಎಂದು ಡಾ.ಅನಂತ ದೇಸಾಯಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT