ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಸೋಂಕಿನಿಂದ ಗುಣಮುಖ, ನಾನೀಗ ಎಂಟು ಕೆ.ಜಿ ತೂಕ ಇಳಿಸಿರುವೆ...

ಆಸ್ಪತ್ರೆಯಲ್ಲಿ ಸಮಯ ಕಳೆಯಲು ದೈಹಿಕ ಕಸರತ್ತಿಗೆ ಮೊರೆ
Last Updated 22 ಏಪ್ರಿಲ್ 2020, 4:15 IST
ಅಕ್ಷರ ಗಾತ್ರ

ಬಾಗಲಕೋಟೆ: ಆಸ್ಪತ್ರೆಯ ವಾರ್ಡ್‌ನಲ್ಲಿ ದಿನವಿಡೀ ವಾಕಿಂಗ್, ವ್ಯಾಯಾಮ ಮಾಡುತ್ತಿದ್ದೆ. ಈ ಅವಧಿಯಲ್ಲಿ ಎಂಟು ಕೆ.ಜಿ ತೂಕ ಇಳಿಸಿರುವೆ. ಮೊದಲು 79 ಕೆ.ಜಿ ಇದ್ದೆ. ಈಗ 71 ಆಗಿರುವೆ. ಆಗ ಹೊಟ್ಟೆ (ಬೊಜ್ಜು) ಇತ್ತು. ಅದೀಗ ಪೂರ್ಣ ಮಾಯವಾಗಿದೆ!

ಇದು ಇಲ್ಲಿನ ಕೋವಿಡ್–19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮಂಗಳವಾರ ಆಸ್ಪತ್ರೆಯಿಂದ ಮನೆಗೆ ಮರಳಿದ 58 ವರ್ಷದ ವ್ಯಕ್ತಿ (ರೋಗಿ ಸಂಖ್ಯೆ 162) ’ಪ್ರಜಾವಾಣಿ’ಗೆ ನೀಡಿದ ಪ್ರತಿಕ್ರಿಯೆ.

’ನಿರಂತರ ನಡಿಗೆ, ವ್ಯಾಯಾಮದಿಂದ ಸಂಜೆ ವೇಳೆಗೆ ಸಂಪೂರ್ಣ ದಣಿದಿರುತ್ತಿದ್ದೆ. ಹೀಗಾಗಿ ರಾತ್ರಿ ಅರಾಮವಾಗಿ ನಿದ್ರೆ ಬರುತ್ತಿತ್ತು. ಒಂದು
ದಿನವೂ ಜ್ವರ, ನೆಗಡಿ, ಕೆಮ್ಮ, ಭೇದಿ ಏನೂ ಕಾಣಿಸಿಕೊಳ್ಳಲಿಲ್ಲ. ಆರೋಗ್ಯವಾಗಿಯೇ ಇದ್ದೆನು‘ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಮುಂಜಾನೆ ಉಪಾಹಾರಕ್ಕೆ ಸೂಸಲ (ಮಂಡಕ್ಕಿ ಒಗ್ಗರಣೆ), ಅವಲಕ್ಕಿ ಇಲ್ಲವೇ ಉಪ್ಪಿಟ್ಟು ಕೊಡುತ್ತಿದ್ದರು. ಮಧ್ಯಾಹ್ನ
ಊಟಕ್ಕೆ ಎರಡು ಚಪಾತಿ, ಅನ್ನ–ಸಾಂಬಾರು, ರಾತ್ರಿಗೆ ಅನ್ನ–ಸಾಂಬಾರು. ದಿನಕ್ಕೆ ಎರಡು ಬಾರಿ ಚಹಾ, ಕುಡಿಯಲು ಬಿಸಿನೀರು ಸಿಗುತ್ತಿತ್ತು. ಐದಾರು ನಮೂನೆ ಮಾತ್ರೆ ನುಂಗಿಸುತ್ತಿದ್ದರು. ವೈದ್ಯರ ಆರೈಕೆ, ದೇವರ ದಯೆಯಿಂದ ಗುಣಮುಖವಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳದ್ದರಿಂದ ಆಸ್ಪತ್ರೆ ಸಿಬ್ಬಂದಿ ನಮ್ಮನ್ನು ಒಮ್ಮೆಯೂ ಮುಟ್ಟುವ ಪ್ರಶ್ನೆಯೇ ಬರಲಿಲ್ಲ. ಊಟವನ್ನು ಟ್ರೇನಲ್ಲಿ ತಂದಿಟ್ಟು ಹೋಗುತ್ತಿದ್ದರು. ಪಕ್ಕದಲ್ಲಿ ಗುಜರಾತ್‌ ಮೂಲದ ರೋಗಿ ಇದ್ದರು. ಅವರಿಗೆ ಕನ್ನಡ ಬಾರದೇ ಪರಸ್ಪರ ಮಾತುಕತೆ ಸಾಧ್ಯವಾಗಲಿಲ್ಲ. ಮನರಂಜನೆಗೆ ಟಿವಿ, ಓದಲು ಪುಸ್ತಕ ಏನೂ ಇರಲಿಲ್ಲ. ಹೀಗಾಗಿ ಬರೀ ದೈಹಿಕ ಕಸರತ್ತಿನ ಕಡೆ ಗಮನ ನೀಡಿದ್ದಾಗಿ ತಿಳಿಸಿದರು.

ಮನೆಗೆ ಬಂದಾಗ ಹೇಳಿದೆವು..
ಜ್ವರದಿಂದ ಬಳಲುತ್ತಿದ್ದ 75 ವರ್ಷದ ಸಹೋದರನನ್ನು (ರೋಗಿ ಸಂಖ್ಯೆ–125) ಆಸ್ಪತ್ರೆಗೆ ಕರೆತಂದಾಗ ಅವರಿಗೆ ಸೋಂಕು ದೃಢಪಟ್ಟಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದರು. ನಂತರ ಮನೆಯವರ ತಪಾಸಣೆ ಮಾಡಿದಾಗ ನನಗೆ ಹಾಗೂ ಅತ್ತಿಗೆಗೆ (ರೋಗಿ ಸಂಖ್ಯೆ–161) ದೃಢಪಟ್ಟಿತ್ತು. ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಗುಣಮುಖರಾಗಿ ಅವರು ನನ್ನೊಂದಿಗೆ ಮನೆಗೆ ಮರಳಿದ್ದಾರೆ. ಅಣ್ಣನ ಸಾವಿನ ವಿಷಯ ಅವರಿಗೆ ಇಂದು ತಿಳಿಸಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT