ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಾನ್‌ ಪಠಿಸಿದ್ದಕ್ಕೆ ಸಭಾಂಗಣದಲ್ಲಿ ಗೋಪೂಜೆ

ಹುನಗುಂದ ಪುರಸಭೆ ಸಭಾಂಗಣದೊಳಕ್ಕೆ ಗೋ ಮೂತ್ರ ಸಿಂ‍ಪಡಿಸಿದ ಬಿಜೆಪಿ ಸದಸ್ಯರು
Last Updated 24 ಆಗಸ್ಟ್ 2022, 16:38 IST
ಅಕ್ಷರ ಗಾತ್ರ

ಹುನಗುಂದ (ಬಾಗಲಕೋಟೆ ಜಿಲ್ಲೆ): ಇಲ್ಲಿನ ಪುರಸಭೆಅಧ್ಯಕ್ಷರ‌ ಅಧಿಕಾರ‌ ಸ್ವೀಕಾರ ಸಂದರ್ಭದಲ್ಲಿ ಕುರಾನ್ ಪಠಿಸಿದ್ದರಿಂದ‌, ಬಿಜೆಪಿ ಸದಸ್ಯರು ಪುರಸಭೆಯ ಸಭಾಂಗಣದಲ್ಲಿ ಗೋಮೂತ್ರ ಸಿಂಪಡಿಸಿ, ಗೋಪೂಜೆ ಮಾಡಿದ್ದಾರೆ.

ಈಚೆಗೆ, ಪಟ್ಟಣದ ಪುರಸಭೆಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಅಧ್ಯಕ್ಷ ಪರ್ವೇಜ್ ಖಾಜಿ ಅವರ ಪದಗ್ರಹಣ ಸಂದರ್ಭದಲ್ಲಿ ಕುರಾನ್ ಪಠಣ ಮಾಡಲಾಗಿತ್ತು.

ಬುಧವಾರ ಪುರಸಭೆಯ ಸಾಮಾನ್ಯ ಸಭೆ ನಿಗದಿಯಾಗಿತ್ತು. ಆದರೆ ಬಿಜೆಪಿ ಸದಸ್ಯರು ಸಾಮಾನ್ಯ ಸಭೆಗೆ ಹಾಜರಾಗದೆ, ಕೇಸರಿ ಶಾಲಿನೊಂದಿಗೆ ಸಭಾಂಗಣದಲ್ಲಿ ಗೋ ಪೂಜೆ ಮಾಡಿಸಿದರು.

ನಂತರ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಸದಸ್ಯರು, ‘ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ನಾವೆಲ್ಲರೂ ಕಾನೂನಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ಆದರೆ ಅಧ್ಯಕ್ಷರು ಕುರಾನ್ ಪಠಿಸಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾದವರು ಸಾಮೂಹಿಕವಾಗಿ ಸಾಂಪ್ರದಾಯಿಕ ವಿಧಾನದಲ್ಲಿ ಒಂದೇ ರೀತಿಯ ಪೂಜೆ ಮಾಡಿಸುತ್ತಿದ್ದರು. ಆದರೆ ನೂತನ ಅಧ್ಯಕ್ಷರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ’ ಎಂದು ಆಕ್ಷೇಪಿಸಿದರು.

ಬಿಜೆಪಿ ಸದಸ್ಯರಾದ ಚಂದ್ರಪ್ಪ ಕಡಿವಾಲ, ಸಾಂತಪ್ಪ ಹೊಸಮನಿ, ಪ್ರವೀಣ್ ಹಳಪೇಟಿ, ಶರಣಮ್ಮ ಚಿತ್ತವಾಡಗಿ, ಮಹೇಶ್ ಬೆಳ್ಳಿಹಾಳ ಹಾಗೂ ಶ್ರೀದೇವಿ ಚೂರಿ ಇದ್ದರು.

ತರಾತುರಿಯಲ್ಲಿ ಸಾಮಾನ್ಯ ಸಭೆ: ಅಸಮಾಧಾನ: ಹುನಗುಂದ: ಪಟ್ಟಣದ ಪುರಸಭೆಯಲ್ಲಿ ನಿಗದಿಯಾಗಿದ್ದ ಸಾಮಾನ್ಯ ಸಭೆಯನ್ನು ತರಾತುರಿಯಲ್ಲಿ ಮುಗಿಸಿದ್ದರ ಮರ್ವವೇನು? ಎಂದು ಪುರಸಭೆ ಬಿಜೆಪಿಯ ಸದಸ್ಯರು ಪ್ರಶ್ನಿಸಿದ್ದಾರೆ.

ಬುಧವಾರ ಪುರಸಭೆ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಸದಸ್ಯರು, ಕಳೆದ 6 ತಿಂಗಳುಗಳಿಂದ ಸಾಮಾನ್ಯ ಸಭೆ ನಡೆದಿಲ್ಲ. ಪಟ್ಟಣದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಿತ್ತು. ಆದರೆ ಪುರಸಭೆ ಅಧ್ಯಕ್ಷರು ಮತ್ತು ಅಧಿಕಾರಿಗಳು ಸಭೆಯನ್ನು ಬೇಗ ಮುಗಿಸಿದ್ದಾರೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳನ್ನು ಕೇಳಿದರೆ ಬಾಗಲಕೋಟೆಯಲ್ಲಿ ಸಭೆ ಇದೆ ಹೋಗಬೇಕು ಎಂದು ಉತ್ತರಿಸುತ್ತಾರೆ ಎಂದರು.

ಆದರೆ ಪುರಸಭೆ ಅಧ್ಯಕ್ಷ ಪರ್ವೇಜ್ ಖಾಜಿ ಮಾತನಾಡಿ, ಚುನಾವಣೆ ನೀತಿ ಸಂಹಿತೆ, ಹಿಂದಿನ ಅವಧಿಯ ಪುರಸಭೆ ಅಧ್ಯಕ್ಷರ ರಾಜೀನಾಮೆ
ನೀಡಿದ್ದರಿಂದ ಹೀಗೆ ಹಲವಾರು ಕಾರಣಗಳಿಂದ ನಾಲ್ಕು ತಿಂಗಳುಗಳಿಂದ ಸಾಮಾನ್ಯ ಸಭೆ ಕರೆಯಲು ಸಾಧ್ಯವಾಗಿಲ್ಲ. ಇಂದು ನಡೆದ ಸಾಮಾನ್ಯ ಸಭೆಗೆ ಪುರಸಭೆ ಎಲ್ಲ ಸದಸ್ಯರಿಗೂ ಎಂಟು ದಿನಗಳ ಮುಂಚಿತವಾಗಿ ನೋಟಿಸ್
ನೀಡಲಾಗಿದೆ. ನಿಗದಿತ ಸಮಯದಂತೆ 11 ಗಂಟೆಗೆ ಮೀಟಿಂಗ್
ಆರಂಭವಾಗಿದ್ದು ಸಭೆಯಲ್ಲಿದ್ದ ಸದಸ್ಯರು ಕೆಲ ವಿಷಯಗಳನ್ನು ಚರ್ಚಿಸಿದರು ಎಂದರು.

ಮುಖ್ಯಾಧಿಕಾರಿ ಕಚೇರಿಯಲ್ಲಿ ಕುಳಿತಿದ್ದ ಬಿಜೆಪಿ ಸದಸ್ಯರನ್ನು ಸಿಬ್ಬಂದಿ ಸಭೆಗೆ ಕರೆದಾಗ ಬರುವುದಿಲ್ಲ ಎಂದಿದ್ದಾರೆ. ಹೀಗಾಗಿ ಬೇಗನೆ ಸಭೆ ಮುಗಿಯಿತು. ಬಿಜೆಪಿ ಸದಸ್ಯರ ಆರೋಪದಲ್ಲಿ ಯಾವುದೇ ಉರುಳಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT