ಭಾನುವಾರ, ನವೆಂಬರ್ 17, 2019
28 °C
ಜಿಲ್ಲೆಯ ನೆರೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿರುವ ಸಂಸ್ಥೆಗಳ ಕಾರ್ಯಾಗಾರ

ಪರಿಹಾರಕ್ಕೆ ಸಹಕಾರ ಅಗತ್ಯ: ಡಿಸಿ

Published:
Updated:
Prajavani

ಬಾಗಲಕೋಟೆ: ‘ಪ್ರವಾಹ ನಂತರದ ಬದುಕು ಕಟ್ಟಿಕೊಳ್ಳುವಲ್ಲಿ ಸಹಾಯ ಸಹಕಾರ ಮಾಡುವ ಸಂಘ-ಸಂಸ್ಥೆಗಳಿಗೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ.ರಾಜೇಂದ್ರ ತಿಳಿಸಿದರು. 

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲೆಯ ನೆರೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಿರುವ ವಿವಿಧ ಸರ್ಕಾರೇತರ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಲು ಹಮ್ಮಿಕೊಂಡಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರೈತರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ತಮ್ಮ ವ್ಯಾಪ್ತಿಯಲ್ಲಿ ಏನು ಸಹಾಯ ಮಾಡಬಹುದಾಗಿದೆ ಎಂಬುದನ್ನು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಸಂತ್ರಸ್ತರ ಜೀವನ ಪುನಃ ಕಟ್ಟಿಕೊಡುವ ಕಾರ್ಯ ಮಹತ್ವದ್ದಾಗಿದೆ. ಇದಕ್ಕೆ ಎಲ್ಲರೂ ಸರ್ಕಾರದ ಜೊತೆ ಸಮುದಾಯ ಕೈಜೋಡಿಸುವ ಅಗತ್ಯವಿದೆ’ ಎಂದರು.

‘ಪರಿಹಾರ ವಿತರಣೆಯಲ್ಲಿ ಯಾವುದೆ ತಾರತಮ್ಯ ನಡೆದಿಲ್ಲ. ಅದಕ್ಕೆ ಅವಕಾಶ ಕೂಡ ಕೊಡುವುದಿಲ್ಲ. ಹಾನಿಗೊಳಗಾದ ಮನೆಗಳ ಮಾಹಿತಿಯನ್ನು ತಂತ್ರಾಂಶದಲ್ಲಿ ಛಾಯಾಚಿತ್ರದ ಸಮೇತ ಟ್ಯಾಗ್ ಮಾಡಲಾಗುತ್ತಿದೆ. ಪ್ರತಿಯೊಬ್ಬ ಸಂತ್ರಸ್ತರಿಗೆ ಆರ್‌ಟಿಜಿಇಎಸ್ ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನ ಜಮಾ ಮಾಡಲಾಗುತ್ತಿದೆ. 138ಕ್ಕೂ ಅಧಿಕ ಸರ್ಕಾರಿ ಶಾಲಾ ಕೊಠಡಿಗಳಿಗೆ ಹಾನಿಯಾಗಿದೆ. ಈಗಾಗಲೇ ಪರಿಹಾರ ಕೇಂದ್ರಕ್ಕಾಗಿ ಸ್ಥಾಪಿಸಲಾದ ಶೆಡ್ ಖಾಲಿಯಾಗಿವೆ. ಅಲ್ಲಿಯೇ ಶಾಲೆ ಮತ್ತು ಅಂಗನವಾಡಿಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 70 ಶೆಡ್ ನಿರ್ಮಿಸಲಾಗಿದೆ’ ಎಂದರು.

‘ಪ್ರವಾಹದಿಂದ ಹಾನಿಗೊಳಗಾದ ಒಟ್ಟು 7,500 ಮನೆಗಳಿದ್ದು, ಸಂಪೂರ್ಣ ಹಾನಿಗೊಳಗಾದ ಮನೆ ಕಟ್ಟಿಕೊಡಲು ಈಗಾಗಲೇ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಮಾಹಿತಿ ಕಳುಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಗಂಗೂಬಾಯಿ ಮಾನಕರ ಮಾತನಾಡಿ, ‘ಪ್ರವಾಹ ಸಂದರ್ಭದಲ್ಲಿ ದಾನಿಗಳಿಂದ, ಸಂಘ ಸಂಸ್ಥೆಗಳಿಂದ ಸಾಕಷ್ಟು ಸಹಾಯವಾಗಿದೆ. ಊಟ, ವೈದ್ಯಕೀಯ ಕಿಟ್, ಬಟ್ಟೆ, ಇತರೆ ಸಾಮಗ್ರಿಗಳನ್ನು ಸಂತ್ರಸ್ತರಿಗೆ ನೀಡಿದ್ದಾರೆ. ಪ್ರವಾಹದ ನಂತರ ಸಂತ್ರಸ್ತರ ಬದುಕು ಕಟ್ಟಿಕೊಳ್ಳಲು ವಿವಿಧ ಸಂಘ ಸಂಸ್ಥೆಗಳ ಸಹಕಾರವೂ ಸಹ ಅಗತ್ಯದೆ. ಕೌಶಲ ತರಬೇತಿ, ಉದ್ಯೋಗ ಒದಗಿಸುವುದು ಸೇರಿದಂತೆ ಕೆಲವೆಡೆ ಸಣ್ಣ ಪುಟ್ಟ ಅಂಗಡಿಗಳ, ವಾಣಿಜ್ಯ ಚಟುವಟಿಕೆಗಳಿಗೆ ದಾನಿಗಳ ನೆರವಿನ ಅಗತ್ಯವಿದೆ’ ಎಂದರು.

ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಹ್ಯುಮಾನಿಟೇರಿಯನ್ ರಿಲೀಫ್‌ ಸೊಸೈಟಿಯವರು ₹15.90ಲಕ್ಷದಲ್ಲಿ 64 ಮನೆ, 50 ಶೌಚಾಲಯ ನಿರ್ಮಿಸುವ ಯೋಜನೆ ತಿಳಿಸಿದರು. ಕಾರ್ಯಾಗಾರದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಗರಿಮಾ ಪನ್ವಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿದಂತೆ 26 ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು. 

ವಿಪ್ರೊ ಕಂಪನಿ; ಶಾಲೆಗಳ ದತ್ತು
‘ವಿಪ್ರೊ ಕಂಪನಿ ಪ್ರತಿನಿಧಿಗಳಾದ ಜಗನ್ನಾಥ ಮತ್ತು ರಘು ಜಿಲ್ಲೆಗೆ ಬರಲಿದ್ದು, ಪ್ರವಾಹದಿಂದ ಹಾನಿಗೊಳಗಾದ ಶಾಲೆಗಳಿಗೆ ಮತ್ತು ಅಂಗನವಾಡಿಗಳಿಗೆ ಭೇಟಿ ನೀಡಿ ನಂತರ ದತ್ತು ಪಡೆಯಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ.ರಾಜೇಂದ್ರ ತಿಳಿಸಿದರು. 

ವಿವಿಧ ಸಂಘ, ಸಂಸ್ಥೆಗಳಿಂದ ತರಬೇತಿ 
ರುಡ್‌ಸೆಟ್‌ ಸಂಸ್ಥೆ 20 ರಿಂದ 30 ಬ್ಯಾಚ್‌ಗಳನ್ನು ನೆರೆಗೆ ತುತ್ತಾಗಿರುವ ಯುವಕರಿಗೆ ಕೌಶಲ ತರಬೇತಿ ನೀಡುವ ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಸಲಕರಣೆಗಳನ್ನು ಒದಗಿಸಲಾಗುತ್ತಿದೆ. ಎಪಿಡಿ ಸಂಸ್ಥೆ 400 ಅಂಗವಿಕಲರಿಗೆ ಸ್ವ–ಉದ್ಯೋಗ ಪ್ರಾರಂಭಿಸಲು ಬೇಕಾದ ತರಬೇತಿ, ರೀಚ್ ಸಂಸ್ಥೆಯಿಂದ 90 ಜನರಿಗೆ ಕೌಶಲ  ತರಬೇತಿ, ಆ್ಯಕ್ಷನ್ ಏಡ್ ಸಂಸ್ಥೆಯಿಂದ ಮುಧೋಳ ತಾಲ್ಲೂಕಿನ ಐದು ಗ್ರಾಮ ಪಂಚಾಯ್ತಿಗಳ ತುರ್ತು ನಿರ್ವಹಣೆ, ದೇವದಾಸಿ ಮಹಿಳೆಯರಿಗೆ ಸಹಾಯ, ತಕ್ಷಶಿಲಾ ಸಂಸ್ಥೆಯಿಂದ ಹುನಗುಂದ ತಾಲ್ಲೂಕಿನ ಐದು ಗ್ರಾಮಗಳಲ್ಲಿ ಜಾನುವಾರು ಆರೋಗ್ಯ ಶಿಬಿರ, ಶಾಯಿ ಸಂಸ್ಥೆಯಿಂದ ಹೊಲಿಗೆ, ಸ್ಪೋಕನ್ ಇಂಗ್ಲಿಷ್‌ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ತಿಳಿಸಿದರು.

ಪ್ರತಿಕ್ರಿಯಿಸಿ (+)