ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಬಾಗಲಕೋಟೆ–ಕುಡಚಿ ರೈಲು ಓಡುವುದೆಂದು?

ಶತಮಾನದ ಹಿಂದಿನ ಕನಸು ಇನ್ನೂ ನನಸಾಗಿಲ್ಲ
Last Updated 15 ಅಕ್ಟೋಬರ್ 2020, 10:19 IST
ಅಕ್ಷರ ಗಾತ್ರ
ADVERTISEMENT
""
""

ಬಾಗಲಕೋಟೆ: ಕೃಷ್ಣಾ ತೀರದಿಂದ ಮರ್ಮಗೋವೆಯ ಬಂದರು ಹಾಗೂ ಮುಂಬೈಗೆ ನೇರ ಸಂಪರ್ಕ ಕಲ್ಪಿಸುವ ಬಾಗಲಕೋಟೆ–ಕುಡಚಿ ರೈಲು ಮಾರ್ಗದ ಪ್ರಸ್ತಾವ ಮರುಜೀವ ಪಡೆದು ಬರೋಬ್ಬರಿ 30 ವರ್ಷ ಕಳೆದಿದೆ. ವಿಶೇಷವೆಂದರೆ142 ಕಿ.ಮೀ ದೂರದ ಈ ಮಾರ್ಗದಲ್ಲಿ ಇಲ್ಲಿಯವರೆಗೆ ಬರೀ 30 ಕಿ.ಮೀ ಮಾತ್ರ ಪೂರ್ಣಗೊಂಡಿದೆ. ಈಗಾಗಲೇ ನಾಲ್ಕು ಬಾರಿ ಸಮೀಕ್ಷೆ ಹಾಗೂ ವಿನ್ಯಾಸ ಬದಲಾವಣೆಗೆ ಒಳಗಾಗಿ ಯೋಜನೆ ಇನ್ನೂ ಕುಂಟುತ್ತಾ ಸಾಗಿದೆ.

ಶತಮಾನದ ಹಿಂದಿನ ಕನಸು:

ಬಳ್ಳಾರಿ ಜಿಲ್ಲೆ ಸಂಡೂರು ಭಾಗದಿಂದ ಕಬ್ಬಿಣದ ಅದಿರನ್ನು ಮರ್ಮಗೋವೆಯ ಬಂದರಿಗೆ ಸಾಗಿಸಲು ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ 1894ರಲ್ಲಿ ಮೊದಲ ಬಾರಿಗೆ ಬಾಗಲಕೋಟೆ–ಕುಡಚಿ ನಡುವೆ ರೈಲು ಮಾರ್ಗದ ಪ್ರಸ್ತಾವ ಸಲ್ಲಿಸಿತ್ತು. ಅದರಂತೆ 1912 ಹಾಗೂ 1920ರಲ್ಲಿ ಎರಡು ಬಾರಿ ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ಕೂಡ ನಡೆದಿತ್ತು. ಕಾರಣಾಂತರದಿಂದ ಆಗ ಯೋಜನೆ ಕಾರ್ಯಗತಗೊಂಡಿರಲಿಲ್ಲ.

1990ರಲ್ಲಿ ಜಮಖಂಡಿಯ ಸಿದ್ದು ನ್ಯಾಮಗೌಡ ಕೇಂದ್ರ ಸಚಿವರಾದಾಗ ಯೋಜನೆ ಮರು ಜೀವ ಪಡೆಯಿತು. 1993ರಲ್ಲಿ ಮೂರನೇ ಬಾರಿಗೆ ಸಮೀಕ್ಷೆ ನಡೆದರೂ ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ರೈಲ್ವೆ ಇಲಾಖೆ ಯೋಜನೆಯ ಬಗ್ಗೆ ನಿರಾಸಕ್ತಿ ತೋರಿತು. ಆದರೆ ಈ ಭಾಗದ ಜನರ ಹೋರಾಟ–ಒತ್ತಾಸೆಯ ಫಲವಾಗಿ 2007ರಲ್ಲಿ ಮತ್ತೊಮ್ಮೆ ಸಮೀಕ್ಷೆ ಕಾರ್ಯ ಕೈಗೊಂಡು 2010ರಲ್ಲಿ ₹986.30 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗೆ ನೀಡಲಾಯಿತು. ಈ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇ 50ರಷ್ಟು ಭರಿಸುವುದು ಹಾಗೂ ರಾಜ್ಯ ಸರ್ಕಾರವೇ ಉಚಿತವಾಗಿ ಭೂಮಿ ಕೊಡುವ ಷರತ್ತನ್ನು ಯೋಜನೆ ಒಳಗೊಂಡಿದೆ.

ಈಗ ಹೊಸಪೇಟೆ–ಹುಬ್ಬಳ್ಳಿ ಮೂಲಕ ಗೋವಾ ಬಂದರಿಗೆ ಸಾಗುತ್ತಿರುವ ಕಬ್ಬಿಣದ ಅದಿರನ್ನು ಹೊಸಪೇಟೆ–ಕೊಪ್ಪಳ–ಗದಗ–ಬಾಗಲಕೋಟೆ, ಬೆಳಗಾವಿ ಮೂಲಕ ಗೋವಾಗೆ ಕಡಿಮೆ ಅವಧಿಯಲ್ಲಿ ಸಾಗಿಸುವ ಜೊತೆಗೆ ರಾಷ್ಟ್ರೀಯ ಹೆದ್ದಾರಿ 13 ಹಾಗೂ 218ರ ಮೇಲಿನ ವಾಹನ ದಟ್ಟಣೆಯ ಒತ್ತಡ ಕಡಿಮೆ ಮಾಡುವುದು. ಬಾಗಲಕೋಟೆ ಹಾಗೂ ರಾಯಭಾಗ ತಾಲ್ಲೂಕು ಕುಡಚಿ ನಡುವಿನ ಈ ರೈಲು ಮಾರ್ಗದ ಹಾದಿಯಲ್ಲಿಯೇ ಸಿಗುವ 14 ಸಕ್ಕರೆ ಕಾರ್ಖಾನೆ ಹಾಗೂ ಐದು ಸಿಮೆಂಟ್ ಕಾರ್ಖಾನೆಗಳ ಉತ್ಪನ್ನ ಸಾಗಣೆ, ಇಳಕಲ್ ಗ್ರಾನೈಟ್ ಹಾಗೂ ವಿಜಯಪುರ–ಬಾಗಲಕೋಟೆ ಜಿಲ್ಲೆಗಳಲ್ಲಿ ಬೆಳೆಯುವ ತೋಟಗಾರಿಕೆ ಉತ್ಪನ್ನಗಳ ಸಾಗಣೆಗೆ ನೆರವಾಗಲಿದೆ ಮತ್ತು ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ ಎಂಬ ಆಶಯದೊಂದಿಗೆ ರೈಲು ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ರೇಲ್‌ಬಸ್

ವಿನ್ಯಾಸ ಬದಲಾವಣೆ, ಭೂಸ್ವಾಧೀನವೇ ಸಮಸ್ಯೆ: ಹೊಸ ಭೂಸ್ವಾಧೀನ ಕಾಯ್ದೆ 2013ರ ಅನ್ವಯ ತಮಗೆ ಪರಿಹಾರ ಕೊಡುವಂತೆ ಪಟ್ಟು ಹಿಡಿದ ರೈತರು ನ್ಯಾಯಾಲಯದ ಮೊರೆ ಹೋಗಿದ್ದು, ತಾಂತ್ರಿಕ ಕಾರಣದಿಂದ ರೈಲು ಮಾರ್ಗದ ವಿನ್ಯಾಸದಲ್ಲಿ ನಾಲ್ಕು ಬಾರಿ ಆದ ಬದಲಾವಣೆ, ಹಣದ ಕೊರತೆ ಯೋಜನೆ ಅನುಷ್ಠಾನ ಸುದೀರ್ಘ ಅವಧಿಗೆ ಸಾಗಿಬರಲು ಕಾರಣವಾಯಿತು.

ರೈಲು ಮಾರ್ಗ ಬಾಗಲಕೋಟೆ, ಮುಧೋಳ, ಜಮಖಂಡಿ, ಬೆಳಗಾವಿ ಜಿಲ್ಲೆ ರಾಮದುರ್ಗ ಹಾಗೂ ರಾಯಭಾಗ ತಾಲ್ಲೂಕುಗಳ ಮೂಲಕ ಹಾಯ್ದು ಹೋಗುತ್ತದೆ. ಬಾಗಲಕೋಟೆ ನಗರದಿಂದ ತಾಲ್ಲೂಕಿನ ಖಜ್ಜಿಡೋಣಿವರೆಗೆ 632 ಎಕರೆ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ 615 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಲ್ಲಿಯವರೆಗೆ ರೈಲು ಮಾರ್ಗವೂ ಪೂರ್ಣಗೊಂಡಿದೆ. ಖಜ್ಜಿಡೋಣಿಯಿಂದ ಜಮಖಂಡಿ ತಾಲ್ಲೂಕಿನ ತೇರದಾಳವರೆಗೆ 1349 ಎಕರೆ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದ್ದು, ಇಲ್ಲಿಯವರೆಗೆ ಅದರಲ್ಲಿ 454 ಎಕರೆ ಮಾತ್ರ ಪೂರ್ಣಗೊಂಡಿದೆ. ತೇರದಾಳದಿಂದ ಬೆಳಗಾವಿ ಜಿಲ್ಲೆಯ ಕುಡಚಿವರೆಗೆ 467 ಎಕರೆ ಪೈಕಿ 236 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳವುದು ಬಾಕಿ ಇದೆ.

ಹಾಳು ಸುರಿಯುತ್ತಿವೆ ನಿಲ್ದಾಣ:

ಯೋಜನೆಯ ಮೊದಲ ಹಂತದಲ್ಲಿ ಬಾಗಲಕೋಟೆ–ಖಜ್ಜಿಡೋಣಿವರೆಗೆ 30 ಕಿ.ಮೀ ದೂರ ಹಳಿಗಳ ಹಾಕಿ ಐದು ರೈಲು ನಿಲ್ದಾಣಗಳಕಟ್ಟಿ (ನವನಗರ, ಸೂಳಿಕೇರಿ, ಕೆರಕಲಮಟ್ಟಿ, ಶೆಲ್ಲಿಕೇರಿ ಹಾಗೂ ಖಜ್ಜಿಡೋಣಿ) 2018ರ ಜೂನ್‌ನಲ್ಲಿ ಉದ್ಘಾಟಿಸಲಾಗಿದೆ. ಆದರೆ ಅಲ್ಲಿಂದ ಮುಂದೆ ಮಾರ್ಗ ಮುಂದಕ್ಕೆ ಸಾಗಲಿಲ್ಲ. ಸಿದ್ಧಗೊಂಡ ಮಾರ್ಗದಲ್ಲಿ ಪ್ರಾಯೋಗಿಕವಾಗಿ ರೇಲ್‌ಬಸ್ ಆರಂಭಿಸಿದರೂ ಅದು ಲಾಭದಾಯಕವಾಗದ ಕಾರಣ ನೈರುತ್ಯ ರೈಲ್ವೆ ಕೆಲಕಾಲದ ನಂತರ ಅದನ್ನು ಸ್ಥಗಿತಗೊಳಿಸಿತು. ಈಗ ರೈಲು ನಿಲ್ದಾಣಗಳು ಹಾಳು ಸುರಿಯುತ್ತಿವೆ. ಕಿಡಿಗೇಡಿಗಳು ಅವುಗಳ ಕಿಟಕಿ–ಬಾಗಿಲು ಮುರಿದು ಒಯ್ದಿದ್ದು, ಗಾಜುಗಳನ್ನು ಒಡೆದು ಹಾಕಿದ್ದಾರೆ. ಕಾವಲುಗಾರರು ಇಲ್ಲದೇ ಅವು ಹಾಳು ಕೊಂಪೆಯಾಗಿ ಮಾರ್ಪಟ್ಟಿವೆ.

ಬಾದಾಮಿ ತಾಲ್ಲೂಕಿನ ಸೂಳಿಕೇರಿ ಬಳಿ ನೂತನರೈಲುನಿಲ್ದಾಣ ಕಟ್ಟಡ ಕಿಡಿಗೇಡಿಗಳ ದಾಳಿಗೆ ಗುರಿಯಾಗಿರುವ ನೋಟ

ಅನುಷ್ಠಾನಕ್ಕೆ ಜೀವ ನೀಡಿದ್ದ ಅಂಗಡಿ..

ಬೆಳಗಾವಿ ಸಂಸದ ಸುರೇಶ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ನೇಮಕಗೊಂಡ ನಂತರ ಬಾಗಲಕೋಟೆ–ಕುಡಚಿ ರೈಲು ಮಾರ್ಗ ಪೂರ್ಣಗೊಳಿಸಲು ಉತ್ಸುಕರಾಗಿದ್ದರು. ಆ ನಿಟ್ಟಿನಲ್ಲಿ ಎರಡು ಬಾರಿ ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ಈ ಭಾಗದ ಜನಪ್ರತಿನಿಧಿಗಳು ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳ ಸಭೆ ಕರೆದು ಭೂಸ್ವಾಧೀನ ಪ್ರಕ್ರಿಯೆಯ ಪ್ರಗತಿಗೆ ವೇಗ ನೀಡಿದ್ದರು. ಆ ಕಾರ್ಯಕ್ಕೆ ಮೊದಲ ಹಂತದಲ್ಲಿ ₹35 ಕೋಟಿ ಹಣ ಬಿಡುಗಡೆ ಮಾಡಿಸಿದ್ದರು. ಒಂದು ವರ್ಷದ ಒಳಗೆ ಕಾಲಮಿತಿ ಕೂಡ ನಿಗದಿಗೊಳಿಸಿದ್ದರು. ಅದರಂತೆ ಸ್ವಾಧೀನ ಪ್ರಕ್ರಿಯೆ ಚುರುಕುಗೊಂಡಿದೆ ಎಂದು ಬಾಗಲಕೋಟೆಯ ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ ’ಪ್ರಜಾವಾಣಿ‘ಗೆ ತಿಳಿಸಿದರು.

ಮತ್ತೆ ಹಿನ್ನಡೆ?:

ಇದೀಗ ಸಚಿವ ಸುರೇಶ ಅಂಗಡಿ ಅವರ ಹಠಾತ್ ಕಣ್ಮರೆ ಯೋಜನೆಯ ತುರ್ತು ಅನುಷ್ಠಾನದ ಮೇಲೆ ಮತ್ತೆ ಕರಿನೆರಳು ಬೀರಲಿದೆಯೇ? ಅಂಗಡಿ ಅವರು ತೋರಿದ ಇಚ್ಚಾಶಕ್ತಿಯನ್ನು ಮುಂದೆ ಬರುವವರು ತೋರಿ ತ್ವರಿತವಾಗಿ ರೈಲು ಮಾರ್ಗ ನಿರ್ಮಾಣಕ್ಕೆ ಹಸಿರು ನಿಶಾನೆ ತೋರುವರೇ ಎಂದು ರೈಲ್ವೆ ಸವಲತ್ತುಗಳ ಹೋರಾಟಗಾರ, ಬಾಗಲಕೋಟೆಯ ಕುತ್ಬುದ್ದೀನ್ ಖಾಜಿ ಆತಂಕ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT