ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ: ಚಿಕುನ್ ಗುನ್ಯಾ, ಡೆಂಗಿ ಜ್ವರದ ಭೀತಿ

ಚಾಲುಕ್ಯ ನಗರದ ಮನೆಗಳ ಸುತ್ತ ನುಗ್ಗಿದ ಒಳಚರಂಡಿ ನೀರು
Last Updated 17 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಬಾದಾಮಿ: ಪಟ್ಟಣದ ಚಾಲುಕ್ಯ ನಗರ ಬಡಾವಣೆ ಮನೆಗಳ ಸುತ್ತ ಒಳಚರಂಡಿ ನೀರಿನ ಸಂಗ್ರಹವಾಗಿ ದುರ್ನಾತ ಬೀರುತ್ತಿದೆ. ಇದು ಸ್ಥಳೀಯರ ನೆಮ್ಮದಿ ಕಸಿದಿದೆ. ಈ ಬಗ್ಗೆ ಪುರಸಭೆ ಆಡಳಿತಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ನಿವಾಸಿಗಳು ದೂರುತ್ತಾರೆ.

‘ಒಳಚರಂಡಿ ಮತ್ತು ಚರಂಡಿ ನೀರು ಸೊಳ್ಳೆಗಳಿಗೆ ನೆಲೆಯೊದಗಿಸಿದೆ. ಹೀಗಾಗಿ, ಸ್ಥಳೀಯರು ಚಿಕುನ್ ಗುನ್ಯಾ ಮತ್ತು ಡೆಂಗಿ ಜ್ವರದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ಒಂದೇ ಮನೆಯಲ್ಲಿ ನಾಲ್ಕು ಜನರು ಡೆಂಗಿ ಜ್ವರದಿಂದ ಬಳಲಿದ ನಿದರ್ಶನವಿದೆ. ಈಚೆಗೆ ಬಾಲಕನೊಬ್ಬ ಶಂಕಿತ ‌ಡೆಂಗಿ ಜ್ವರದಿಂದ ಮೃತಪಟ್ಟಿದ್ದಾನೆ. ಇಷ್ಟಾದರೂ ಪುರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಚಾಲುಕ್ಯ ನಗರದ ನಿವಾಸಿಗಳು ಆರೋಪಿಸುತ್ತಾರೆ.

‘ಒಳಚರಂಡಿಯ ಮುಖ್ಯ ಕೊಳವೆ ನೀರೇ ಹೋಗದಂತೆ ಸ್ಥಗಿತವಾಗಿದೆ. ದೊಡ್ಡ ಚರಂಡಿಯಲ್ಲಿ ನೀರು ಸಂಗ್ರಹವಾಗಿ ಮುಂದೆ ಹರಿಯದ ಕಾರಣ ಚರಂಡಿ ಮತ್ತು ಒಳಚರಂಡಿ ನೀರು ಒತ್ತು ನಿಲ್ಲುತ್ತಿದೆ. ಇದರಿಂದ ಜನರು ಬದುಕುವುದೇ ದುಸ್ತರವಾಗಿದೆ. ಸೊಳ್ಳೆಗಳ ಕಾಟಕ್ಕೆ ರಾತ್ರಿ ನಿದ್ರೆ ಮಾಡದಂತಾಗಿದೆ. ಸಂಜೆಯಾಗುತ್ತಲೇ ಬಾಗಿಲು ಮುಚ್ಚಬೇಕು. ಇಲ್ಲದಿದ್ದರೆ ಸೊಳ್ಳೆಗಳ ಗುಂಪು ಮನೆಗೆ ಹೊಕ್ಕುತ್ತವೆ’ ಎಂದು ನಿವಾಸಿ ಅಮೀನಸಾಬ್ ಬಾರಾವಲಿ ಅಳಲು ತೋಡಿಕೊಳ್ಳುತ್ತಾರೆ.

‘ನಾಲ್ಕು ತಿಂಗಳಿಂದ ಇಲ್ಲಿ ಒಳಚರಂಡಿ ನೀರು ನಿಂತಿದೆ. ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದಾಗಿದೆ. ಅಧಿಕಾರಿಗಳಿಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಮನಸ್ಸಿಗೆ ಬಂದಂತೆ ಮಾಡುತ್ತಾರೆ. ಅಧಿಕಾರ ಇಲ್ಲದ ಪುರಸಭೆ ಸದಸ್ಯರು ಮೌನವಾಗಿದ್ದಾರೆ. ಕೂಡಲೇ ರಾಜಕಾಲುವೆಗೆ ಕೆಳಗೆ ಕಾಂಕ್ರೀಟ್‌ ಹಾಕಬೇಕು’ ಎಂದು ಪುರಸಭೆ ಮಾಜಿ ಸದಸ್ಯ ಗಿರೀಶ ಶೆಟ್ಟರ ಒತ್ತಾಯಿಸಿದರು.

‘ಶಾಸಕ ಸಿದ್ದರಾಮಯ್ಯ ಅವರು ನಾಲ್ಕು ತಿಂಗಳ ಹಿಂದೆ ಇಲ್ಲಿ ಬಂದು ಚರಂಡಿ ಸಮಸ್ಯೆ ವೀಕ್ಷಿಸಿ ಹೋಗಿದ್ದಾರೆ. ಅವರು ಬಂದಾಗ ಅಧಿಕಾರಿಗಳು ಫೈಲ್ ಹಿಡಿದುಕೊಂಡು ಓಡಾಡುತ್ತಾರೆ. ಅವರು ಹೋದ ಮೇಲೆ ಏನೂ ಕೆಲಸ ಮಾಡುವುದಿಲ್ಲ. ಯಾರೂ ಇತ್ತ ತಿರುಗಿ ನೋಡಿಲ್ಲ’ ಎಂಬುದು ಅವರ ಆರೋಪ.

‘ಒಳಚರಂಡಿ ನೀರನ್ನು ಯಂತ್ರದ ಮೂಲಕ ತೆಗೆಸಲಾಗುವುದು. ಹೊಸ ನಿವೇಶನ ಮಾಡಿರುವುದರಿಂದ ಮ್ಯಾನ್ ಹೋಲ್ ಮುಚ್ಚಿವೆ. ಶೀಘ್ರವೇ ಹೊಸದಾಗಿ ಮ್ಯಾನ್‌ಹೋಲ್ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಜ್ಯೋತಿಗಿರೀಶ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಉದ್ಯಾನವೂ ನಿರ್ಲಕ್ಷ್ಯ...
‘ಮುಖ್ಯಮಂತ್ರಿ ಅನುದಾನದಲ್ಲಿ 2012ರಲ್ಲಿ ಕಟ್ಟಿಮನಿ ನಿವೇಶನದಲ್ಲಿ₹65 ಲಕ್ಷ ವೆಚ್ಚದಲ್ಲಿ ಉದ್ಯಾನ ನಿರ್ಮಿಸಬೇಕಿತ್ತು. ಆದರೆ, ಸುತ್ತಲೂ ಬರೀ ಕಾಂಪೌಂಡ್ ನಿರ್ಮಿಸಿದ್ದಾರೆ. ಉದ್ಯಾನದ ತುಂಬೆಲ್ಲ ಕಸದ ರಾಶಿ ಬೆಳೆದಿದ್ದು, ಸ್ವಚ್ಛತೆಯೇ ಇಲ್ಲದಂತಾಗಿದೆ. ಆ ಉದ್ಯಾನವನ್ನೂ ಅಭಿವೃದ್ಧಿ ಮಾಡಬೇಕು’ ಎಂದು ಶಿವಪ್ಪ ಕಲಗುಡಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT