ಮನೆಗಳ ಸ್ಥಳಾಂತರ; ₹32 ಕೋಟಿ ನಿಗದಿ

7
ಬಾದಾಮಿ; ಸ್ಮಾರಕಗಳ ವೀಕ್ಷಣೆಗೆ ಇನ್ನು ಪ್ರವಾಸಿಗರ ಸಂಚಾರ ಸುಗಮ

ಮನೆಗಳ ಸ್ಥಳಾಂತರ; ₹32 ಕೋಟಿ ನಿಗದಿ

Published:
Updated:
Deccan Herald

ಬಾಗಲಕೋಟೆ: ಬಾದಾಮಿಯ ಮ್ಯುಸಿಯಂ ರಸ್ತೆಯಲ್ಲಿನ 96 ಮನೆಗಳ ಸ್ಥಳಾಂತರಕ್ಕೆ ₹32 ಕೋಟಿ ಅಂದಾಜು ವೆಚ್ಚದ ಯೋಜನಾ ವರದಿಯನ್ನು ಲೋಕೋಪಯೋಗಿ ಇಲಾಖೆ ಸಿದ್ಧಪಡಿಸಿದೆ.

ಇದರಿಂದ ಇತಿಹಾಸ ಪ್ರಸಿದ್ಧ ಗುಹೆಗಳಿಗೆ ವೀಕ್ಷಣೆಗೆ ತೆರಳಲು ಪ್ರವಾಸಿಗರಿಗೆ ಇದ್ದ ಅಡ್ಡಿ–ಆತಂಕ ನಿವಾರಣೆ ಪ್ರಯತ್ನಕ್ಕೆ ಚಾಲನೆ ದೊರೆತಂತಾಗಿದೆ. 96 ಮನೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ನಿವೇಶನಗಳಿಗೆ ಮಾರ್ಗಸೂಚಿ ದರದ ಅನ್ವಯ ಬೆಲೆ ನಿಗದಿಪಡಿಸಿರುವ ಲೋಕೋಪಯೋಗಿ ಇಲಾಖೆ, ವರದಿಯನ್ನು ಬಾದಾಮಿ ಪುರಸಭೆಗೆ ನೀಡಿದೆ. ಪುರಸಭೆ ಆಡಳಿತ ಅದನ್ನು ಉಪವಿಭಾಗಾಧಿಕಾರಿಗೆ ಕಳುಹಿಸಿಕೊಟ್ಟಿದ್ದು, ಸೋಮವಾರ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಲಿದೆ.

ಪ್ರಸ್ತಾವ ಆಧರಿಸಿ ಕ್ರಮ: 'ಲೋಕೋಪಯೋಗಿ ಇಲಾಖೆ ಸಿದ್ಧಪಡಿಸಿರುವ ವರದಿಯನ್ನು ಜಿಲ್ಲಾಡಳಿತ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ಸಲ್ಲಿಸಲಿದೆ. ಅಲ್ಲಿಂದ ಪ್ರಸ್ತಾವ ಸಲ್ಲಿಕೆಯಾಗುತ್ತಿದ್ದಂತೆಯೇ ಸ್ವಾಧೀನಪ್ರಕ್ರಿಯೆ ಆರಂಭಿಸಲಾಗುವುದು' ಎಂದು ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾದಾಮಿಯ ಅಗಸ್ತ್ಯತೀರ್ಥ ಹೊಂಡದ ಗೋಡೆಗೆ ಹತ್ತಿಕೊಂಡಂತೆಯೇ ಇರುವ ಈ ಮನೆಗಳನ್ನು ಸ್ಥಳಾಂತರಿಸಿ, ಮ್ಯುಸಿಯಂ ಹಾಗೂ ಮೇಣದ ಬಸದಿ  ಸಂಪರ್ಕಿಸಲು ರಸ್ತೆ ನಿರ್ಮಿಸಲು ಈ ಹಿಂದೆ ಭಾರತೀಯ ಪುರಾತತ್ವ ಇಲಾಖೆ ಯೋಜನೆ ಸಿದ್ಧಪಡಿಸಿ ಅಂದಿನ ಜಿಲ್ಲಾಧಿಕಾರಿ ಕೆ.ಎಸ್.ಪ್ರಭಾಕರ್ ಅವರಿಗೆ ವರದಿ ಸಲ್ಲಿಸಿತ್ತು. ಆಗ ಕಟ್ಟಡಗಳ ಸ್ವಾಧೀನಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದ ಕಾರಣ ಯೋಜನೆ ನನೆಗುದಿಗೆ ಬಿದ್ದಿತ್ತು. ಹಿಂದಿನ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಹಾಗೂ ಈಗಿನ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಅಸ್ಥೆ ವಹಿಸಿ ಸ್ಥಳೀಯರ ಮನವೊಲಿಕೆ ಮಾಡಿದ್ದು, ಸ್ಥಳಾಂತರ ಪ್ರಕ್ರಿಯೆಗೆ ಮತ್ತೆ ಚಾಲನೆ ದೊರಕಿತ್ತು.

‘ಮನೆಗಳ ಸ್ವಾಧೀನದ ನಂತರ ನಿವಾಸಿಗಳಿಗೆ ಪುನರ್‌ವಸತಿ ಕಲ್ಪಿಸುವ ಹೊಣೆಗಾರಿಕೆಗೆ ಮತ್ತೆ ಜಾಗ ಖರೀದಿ ಮಾಡಬೇಕಾಗುತ್ತದೆ. ಇದರಿಂದ ಅನಗತ್ಯವಾಗಿ ಕಾಲಹರಣವಾಗಲಿದೆ. ಹಾಗಾಗಿ ನೇರವಾಗಿ ಖರೀದಿಸುವಂತೆ ಗುರುವಾರ ಅಧಿಕಾರಿಗಳ ಸಭೆ ನಡೆಸಿರುವ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‌ಕುಮಾರ ಸಲಹೆ ನೀಡಿದ್ದಾರೆ’ ಎಂದು ತಿಳಿದುಬಂದಿದೆ.

ಐಹೊಳೆ ಗ್ರಾಮದ ಸ್ಥಳಾಂತರ ಇಲ್ಲ?

ಸ್ಮಾರಕಗಳ ಸಂರಕ್ಷಣೆ ಹಿನ್ನೆಲೆಯಲ್ಲಿ ಐಹೊಳೆ ಗ್ರಾಮವನ್ನು ಸ್ಥಳಾಂತರಿಸುವ ಯೋಚನೆಯಿಂದ ಸರ್ಕಾರ ಹಿಂದಕ್ಕೆ ಸರಿದಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಐಹೊಳೆ ಸ್ಥಳಾಂತರಕ್ಕೆ ಆಡಳಿತಾತ್ಮಕ ಒಪ್ಪಿಗೆ ದೊರಕಿತ್ತು. ₹400 ಕೋಟಿ ವೆಚ್ಚದಲ್ಲಿ ನೀಲನಕ್ಷೆಯೂ ಸಿದ್ಧವಾಗಿತ್ತು. ಆದರೆ ಸ್ಥಳಾಂತರ ವಿರೋಧಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಹಾಗೂ ಯೋಜನಾ ವೆಚ್ಚವೂ ‘ಭಾರ’ವಾದ ಕಾರಣ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ತಿಳಿದುಬಂದಿದೆ.

ಜನವಸತಿ ಇಟ್ಟುಕೊಂಡೇ ಐಹೊಳೆಯ ಸ್ಮಾರಕಗಳ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಪ್ರವಾದೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‌ಕುಮಾರ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಪ್ರವಾಸಿ ಸ್ಥಳಗಳಿಗೆ ಮೂಲ ಸೌಕರ್ಯ ಶಾಸಕ ಸಿದ್ದರಾಮಯ್ಯ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ ಅವರಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಟಿ.ಕೆ.ಅನಿಲ್‌ಕುಮಾರ ಆಗಸ್ಟ್ 9 ಹಾಗೂ 10ರಂದು ಬಾದಾಮಿ, ಐಹೊಳೆ, ಪಟ್ಟದಕಲ್ಲಿಗೆ ಭೇಟಿ ನೀಡಿದ್ದರು.

ಟೂರಿಸಂ ಪ್ಲಾಜಾಗೆ ಮರುಜೀವ?

ಐಹೊಳೆಗೆ ಬರುವ ಪ್ರವಾಸಿಗರಿಗೆ ಉಳಿಯಲು ಮಯೂರ ಹೋಟೆಲ್ ಇದೆ. ಬಾದಾಮಿಯಲ್ಲಿ ಸಾಕಷ್ಟು ಹೋಟೆಲ್‌ಗಳಿವೆ. ಆದರೆ ಪಟ್ಟದಕಲ್ಲಿನಲ್ಲಿ ಯಾವುದೇ ವ್ಯವಸ್ಥೆ ಇಲ್ಲದಿರುವುದನ್ನು ಮನಗಂಡ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‌ಕುಮಾರ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲಿ ಇರುವ ಇಲಾಖೆಗೆ ಸೇರಿದ 24 ಎಕರೆ ಜಾಗೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಟೂರಿಸಂ ಪ್ಲಾಜಾ ನಿರ್ಮಾಣಕ್ಕೆ ನೀಲನಕ್ಷೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ಹೋಟೆಲ್ ಕಟ್ಟಡ ನಿರ್ಮಾಣಕ್ಕೆ ಲೀಸ್ ಆಧಾರದ ಮೇಲೆ ಜಾಗ ನೀಡುವಂತೆ ಹಾಗೂ ಕಮತಗಿ, ಸೂಳಿಭಾವಿ, ಗುಳೇದಗುಡ್ಡ, ಇಳಕಲ್‌ನ ನೇಕಾರರ ಉತ್ಪನ್ನಗಳನ್ನು ಪ್ರವಾಸಿಗರಿಗೆ ಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೆ ಸಭೆ: ಸ್ಥಳೀಯ ಸಂಸ್ಥೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ ನೇತೃತ್ವದಲ್ಲಿ ಶುಕ್ರವಾರ ನಿಗದಿಯಾಗಿದ್ದ ಸಭೆ ರದ್ದಾಗಿತ್ತು. ಸೆಪ್ಟೆಂಬರ್‌ ಮೊದಲ ವಾರದಲ್ಲಿ ಮತ್ತೆ ಸಭೆ ನಡೆಯಲಿದೆ. ಈ ವೇಳೆ ಶಾಸಕ ಸಿದ್ದರಾಮಯ್ಯ ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

 

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !