ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಕಲ್ ನಗರಸಭೆ ಚುನಾವಣೆ: ಹಾಲಿ–ಮಾಜಿಗಳ ಪ್ರತಿಷ್ಠೆ ಕಣ

ತಾರಕಕ್ಕೇರಿದ ಪ್ರಚಾರ, ಅಧಿಕಾರಕ್ಕಾಗಿ ತೀವ್ರ ಪೈಪೋಟಿ
Last Updated 29 ಆಗಸ್ಟ್ 2018, 14:02 IST
ಅಕ್ಷರ ಗಾತ್ರ

ಇಳಕಲ್‌ : ಮತದಾನಕ್ಕೆ ಇನ್ನು 24 ಗಂಟೆ ಮಾತ್ರ ಬಾಕಿ ಇದ್ದು, ಇಲ್ಲಿನನಗರಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಆಯಾ ಪಕ್ಷದ ಮುಖಂಡರು ಬಿರುಸಿನ ಪ್ರಚಾರ ನಡೆಸಿದ್ದಾರೆ.

ಬಿಜೆಪಿ ಪರವಾಗಿ ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ದೊಡ್ಡನಗೌಡ ಪಾಟೀಲ, ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಜೆಡಿಎಸ್‌ ಅಭ್ಯರ್ಥಿಗಳ ಪರವಾಗಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಆರ್‌. ನವಲಿಹಿರೇಮಠ ಪಾದಯಾತ್ರೆ ಕೈಗೊಂಡು ಮತಯಾಚಿಸಿದ್ದಾರೆ. ಎಐಎಂಐಎಂನಿಂದ ಸ್ಪರ್ಧಿಸಿರುವ ಇಬ್ಬರು ಅಭ್ಯರ್ಥಿಗಳ ಪರವಾಗಿ ಹೈದರಾಬಾದ್‌ನಿಂದ ಬಂದಿದ್ದ ಅಸಾದುದ್ದೀನ್ ಓವೈಸಿ ಪ್ರಚಾರ ಮಾಡಿದ್ದಾರೆ.

ಕಾಂಗ್ರೆಸ್‌ 13 ಕಡೆ ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ ಹಾಗೂ ಜೆಡಿಎಸ್‌ ತಲಾ ಇಬ್ಬರಿಗೆ ಟಿಕೆಟ್‌ ನೀಡಿವೆ. ಮುಸ್ಲಿಮ್ ಮತದಾರರ ಚಿತ್ತ ಎಐಎಂಐಎಂ ನತ್ತ ತಿರುಗದಿರಲಿ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಈ ತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ. ಉಸ್ಮಾನ್‌ಗಣಿ ಹುಮನಾಬಾದ್ ಎಐಎಂಐಎಂ ಮೂಲಕ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ತಮ್ಮ ಶಕ್ತಿಯನ್ನು ಒರೆಗೆ ಹಚ್ಚಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ಬೆಂಬಲ ಸಿಕ್ಕಿತ್ತು. ಇದರಿಂದ ಪ್ರೇರೆಪಿತರಾದ ಅನೇಕರು ಬಿಜೆಪಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಮೇಲ್ನೋಟಕ್ಕೆ ಈಗ ಬಂಡಾಯ ಕಾಣದಿದ್ದರೂ ಟಿಕೆಟ್ ಕೈ ತಪ್ಪಿದವರಿಂದ ಒಳ ಹೊಡೆತಗಳ ಭಯ ಕಾಡುತ್ತಿದೆ. ಜೆಡಿಎಸ್‌ನಿಂದ ಸ್ಪರ್ಧಿಸಿರುವ 19 ಅಭ್ಯರ್ಥಿಗಳ ಗೆಲುವಿಗೆ ನವಲಿಹಿರೇಮಠ ಟೊಂಕಕಟ್ಟಿ ನಿಂತಿದ್ದಾರೆ.

ನಗರಸಭೆ ಮಾಜಿ ಅಧ್ಯಕ್ಷೆ ವೈಶಾಲಿ ಘಂಟಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಸದಸ್ಯರಾದ ಹುಸೇನ್‌ಸಾಬ್ ಬಾಗವಾನ, ಶೋಭಾ ಆಮದಿಹಾಳ ಹಾಗೂ ಮಂಜುನಾಥ ಹೊಸಮನಿ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದು ಪುನರಾಯ್ಕೆ ಬಯಸಿದ್ದಾರೆ.

ಬಿಜೆಪಿಯಿಂದ ಆಯ್ಕೆಯಾಗಿದ್ದ ಮಹಾಂತೇಶ ಗುಳೇದಗುಡ್ಡ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ. ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿ ಕಾಂಗ್ರೆಸ್‌ ಬೆಂಬಲದಿಂದ ಉಪಾಧ್ಯಕ್ಷರಾಗಿದ್ದ ಮಹಾಂತೇಶ ಹನಮನಾಳ ಮತ್ತೆ ಪಕ್ಷೇತರರಾಗಿಯೇ ಸ್ಪರ್ಧಿಸಿದ್ದಾರೆ.

ನಗರಸಭೆಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ ತೀವ್ರ ಪ್ರಯತ್ನ ಮಾಡುತ್ತಿದ್ದರೇ, ವಿಧಾನಸಭೆ ಚುನಾವಣೆಯಲ್ಲಿ ದೊರೆತ ಬೆಂಬಲವನ್ನು ಉಳಿಸಿಕೊಂಡು, ನಗರದ ಚುಕ್ಕಾಣಿ ಹಿಡಿಯಲು ಬಿಜೆಪಿ ಹವಣಿಸುತ್ತಿದೆ. ಜೆಡಿಎಸ್ ಸಂಘಟನೆಯನ್ನು ಬಲಗೊಳಿಸಿ, ಅಸ್ತಿತ್ವ ಉಳಿಸಿಕೊಂಡು ನಿರ್ಣಾಯಕರಾಗಿ ಹೊರಹೊಮ್ಮುವ ಕನಸಿನೊಂದಿಗೆ ಚುನಾವಣಾ ಆಖಾಡಕ್ಕಿಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT