ಜಮಖಂಡಿ: ತಾಲ್ಲೂಕಿನ ಗದ್ಯಾಳ ಗ್ರಾಮದ ನಟಗಲ್ ಕೆರೆ ಸುತ್ತಲಿನ ರೈತರ ಅಕ್ರಮ ಒತ್ತುವರಿಗೆ ಕೆರೆ ನಲುಗಿದ್ದು, ಉಳಿದಿರುವ ನೀರನ್ನು ಸುತ್ತಲಿನ ಜನರು ಅಕ್ರಮವಾಗಿ ಪಂಪಸೆಟ್ ಮೂಲಕ ಖಾಲಿ ಮಾಡುತ್ತಿದ್ದಾರೆ.
ಸರ್ವೆ ನಂ 92, 93, 94, 95, 96 ರಲ್ಲಿ ಒಟ್ಟು 116 ಎಕರೆ ಪ್ರದೇಶದಲ್ಲಿ ಬೃಹತ್ ಕೆರೆಯನ್ನು ಜನ, ಜಾನುವಾರು ಕುಡಿಯುವ ನೀರಿಗಾಗಿ ನಿರ್ಮಿಸಿದ್ದಾರೆ, ಇದರಿಂದ ಗದ್ಯಾಳ ಸುತ್ತಲಿನ ಹತ್ತಾರು ಗ್ರಾಮಗಳ ಅಂತರ್ಜಲಕ್ಕೆ ಸಂಜೀವಿನಿಯಾಗಿದೆ. ಆದರೆ ಕೆರೆಯ ಸುತ್ತ ಮುತ್ತಲಿನ ರೈತರು ಅಂದಾಜು 40 ಎಕರೆಗೂ ಅಧಿಕ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದು ವಿಪರ್ಯಾಸ.
ಗದ್ಯಾಳ, ಕನ್ನೋಳ್ಳಿ, ಗೋಠೆ, ಕಲಬೀಳಗಿ, ತೋದಲಬಾಗಿ ಹಾಗೂ ವಿಜಯಪುರ ಜಿಲ್ಲೆಯ ಕುಮಠೆ, ಅರ್ಜುನಗಿ, ಹೆಬ್ಬಾಳಟ್ಟಿಯವರೆಗೆ ಈ ಕೆರೆಯಿಂದ ಅಂತರ್ಜಲ ವೃದ್ಧಿಯಾಗುತ್ತದೆ.
ಕೆರೆಗೆ ಕೃಷ್ಣಾ ನದಿಯಿಂದ ಪೈಪ್‌ಲೈನ್ ಮೂಲಕ ನೀರು ತುಂಬಿಸಲಾಗುತ್ತದೆ, ಆದರೆ ಕಾಲುವೆಗೆ ನೀರು ಸ್ಥಗಿತವಾದ ನಂತರ, ಸುತ್ತಲಿನ ಗ್ರಾಮದ ರೈತರು ಕೆರೆಯಿಂದ ಅಕ್ರಮವಾಗಿ ಪೈಪ್‌ಲೈನ್ ಮಾಡಿಕೊಂಡಿದ್ದು ಅದರ ಮೂಲಕ ನೀರು ಪಡೆಯುತ್ತಿದ್ದಾರೆ.
ಕೆರೆಯಿಂದ ಸುಮಾರು 200ಕ್ಕೂ ಅಧಿಕ ಅನಧಿಕೃತವಾದ ಪಂಪ್‌ಸೆಟ್‌ಗಳಿಂದ ನೀರು ಎತ್ತುತ್ತಿದ್ದಾರೆ, ನೀರು ಖಾಲಿಯಾದರೆ ಸುತ್ತಲಿನ ರೈತರಿಗೆ ಹಾಗೂ ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುವುದು ಕಷ್ಟ.
‘ಕೆರೆಯ ಆವರಣದಲ್ಲಿ 25ಕ್ಕೂ ಅಧಿಕ ಟ್ರಾನ್ಸ್‌ಫಾರ್ಮರಗಳಿಗೆ ಅನಧಿಕೃತವಾಗಿ ಸಂಪರ್ಕ ನೀಡಿದ್ದಾರೆ, ಬೇರೆ ಗ್ರಾಮಗಳ ಸರ್ವೆ ನಂಬರ್ ತೋರಿಸಿ ಹೆಸ್ಕಾಂ ಇಲಾಖೆಯ ಅಧಿಕಾರಿಗಳಿಂದ ಜಿಪಿಎಸ್ ಮಾಡಿಸಿಕೊಂಡು ಕೆರೆಯ ಆವರಣದಲ್ಲಿ ಕೂಡಿಸಿದ್ದಾರೆ, ಕೂಡಲೇ ಅವುಗಳನ್ನು ತೆಗೆದು ನೀರು ಎತ್ತಲು ಅವಕಾಶ ನೀಡಬಾರದು’ ಎಂದು ಮಲ್ಲಪ್ಪ ಡಕಳಾಪೂರ, ಅಗನಪ್ಪ ಚೌರಿ ಆಗ್ರಹಿಸಿದರು.
ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಶೀಲ್ದಾರ್ ಸದಾಶಿವ ಮಕ್ಕೋಜಿ, ನೀರಾವರಿ ಇಲಾಖೆ, ಹಾಗೂ ಹೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
‘ಕೆರೆಯ ಜಾಗವನ್ನು ಸರ್ವೆ ಮಾಡಿಸಿ, ಕೆರೆಯಲ್ಲಿನ ಹೂಳು ತೆಗೆದು ಸುತ್ತಲು ಮಣ್ಣಿನ ಬದುಗಳನ್ನು ನಿರ್ಮಿಸಬೇಕು’ ಎಂದು ಶಿವಾಜಿ ಕದಂ, ಲಕ್ಷ್ಮಣ ಹೂಗಾರ ತಿಳಿಸಿದರು.
‘ರೈತರು ಮೇಲಧಿಕಾರಿಗಳಿಗೆ ಮನವಿ ನೀಡಿದ್ದಾರೆ, ಎರಡು ದಿನದಲ್ಲಿ ಆರ್.ಆರ್ ನಂಬರ್ ಪರಿಶೀಲಿಸಿ, ಅನಧಿಕೃತವಾದ ಟ್ರಾನ್ಸ್‌ಫಾರ್ಮರ್‌ಗಳ ಸಂಪರ್ಕ ತೆಗೆಯುತ್ತೇವೆ’ ಎಂದು ತೋದಲಬಾಗಿ ಹೆಸ್ಕಾಂ ಶಾಖಾಧಿಕಾರಿ ಪ್ರಕಾಶ ತಟಗಾರ ತಿಳಿಸಿದರು.
ಪಂಪ್‌ಸೆಟ್ ಮೂಲಕ ನೀರು ಎತ್ತುವದನ್ನು ಕೂಡಲೇ ಸ್ಥಗಿತಗೊಳಿಸಲಾಗುವುದು. ತಾಂತ್ರಿಕ ದೋಷದಿಂದ ಕೆಲ ದಾಖಲೆಗಳ ಕೊರತೆ ಇದೆ ಅವುಗಳನ್ನು ಸರಿಪಡಿಸಿ ಒತ್ತುವರಿಯನ್ನು ತೆರವುಗೊಳಿಸಲಾಗುವುದುಸದಾಶಿವ ಮಕ್ಕೋಜಿ ತಹಶೀಲ್ದಾರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.