ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಜಿಲ್ಲೆಗೊಂದು ಇಎಸ್‌ಐ ಆಸ್ಪತ್ರೆ ಕಟ್ಟಡ

ಶೇ 92ರಷ್ಟು ಅಸಂಘಟಿತ ಕಾರ್ಮಿಕರಿಗೆ ಸಹಾಯಧನ: ಜಿಲ್ಲಾಡಳಿತಕ್ಕೆ ಸಚಿವರ ಅಭಿನಂದನೆ
Last Updated 31 ಜುಲೈ 2020, 14:56 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಗೊಂದು ಕಾರ್ಮಿಕರ ವಿಮಾ ಆಸ್ಪತ್ರೆ (ಇಎಸ್‌ಐ) ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಜಾಗ ಕೊಟ್ಟರೆ ನಾಳೆಯೇ ಭೂಮಿ ಪೂಜೆಗೆ ಸಿದ್ಧವಿದ್ದೇವೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಂಘ–ಸಂಸ್ಥೆಗಳ ಮುಖಂಡರೊಂದಿಗೆ ಸಭೆ ನಡೆಸಿದ ಅವರು, ಪ್ರತೀ ಆಸ್ಪತ್ರೆಗೆ ₹6 ರಿಂದ ₹30 ಕೋಟಿಯವರೆಗೆ ವೆಚ್ಚ ಮಾಡಲು ಸಿದ್ಧವಿದ್ದೇವೆ. ಗೃಹ ಮಂಡಳಿ ಸೇರಿದಂತೆ ಯಾವುದೇ ಸಂಸ್ಥೆಯಿಂದ ಕನಿಷ್ಠ ಎರಡು ಎಕರೆ ಜಮೀನು ಕೊಟ್ಟರೆ ಖರೀದಿಸಲಾಗುವುದು. ಎರಡು ತಿಂಗಳಲ್ಲಿ ಅಡಿಪಾಯ ಸಿದ್ಧವಾಗಲಿದೆ ಎಂದರು.

ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ರಾಜ್ಯದಲ್ಲಿ 60 ಸಾವಿರ ಅಸಂಘಟಿತ ವಲಯದ ಕಾರ್ಮಿಕರಿಗೆ ₹ 816 ಕೋಟಿ ನೀಡಲಾಗಿದೆ. ಜಿಲ್ಲೆಯ ಶೇ 92 ಮಂದಿ ಅಸಂಘಟಿತ ವಲಯದವರಿಗೆ ಸರ್ಕಾರದ ನೆರವಿನ ಮೊತ್ತ ₹5000 ತಲುಪಿಸಲಾಗಿದೆ. ಈ ಸಾಧನೆ ಮಾಡಿದ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕ್ಷೌರಿಕ ಕೆಲಸ ಮಾಡುತ್ತಿರುವರನ್ನು ಗುರುತಿಸಿ ಆಯಾ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ದೃಢೀಕರಣ ಪತ್ರ ನೀಡಬೇಕು. ಅನ್‌ಲೈನ್‌ ಅರ್ಜಿಗಳು ಅಪ್ಲೋಡ್ ಆಗದ ಕಾರಣ ಅರ್ಜಿ ಸಲ್ಲಿಸುವ ಅವಧಿ ಆಗಸ್ಟ್ 15ರವರೆಗೆ ವಿಸ್ತರಿಸಲಾಗಿದೆ ಎಂದರು.

ಇದೇ ವೇಳೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಿವಿಧ ಸೌಲಭ್ಯಗಳ ಅಡಿ ಕಾರ್ಮಿಕರಿಗೆ ಸಹಾಯಧನದ ಚೆಕ್, ಮಂಜೂರಾತಿ ಆದೇಶ ಪತ್ರ ಹಾಗೂ ಬಾಂಡ್‌ಗಳನ್ನು ವಿತರಿಸಲಾಯಿತು.

ತನಿಖೆಗೆ ಸೂಚನೆ: ಸಿಮೆಂಟ್ ಕಾರ್ಖಾನೆಯಲ್ಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂಬ ಸಂಗತಿಯನ್ನು ಶಾಸಕ ವೀರಣ್ಣ ಚರಂತಿಮಠ ಗಮನಕ್ಕೆ ತಂದಿದ್ದಾರೆ. ಆ ಬಗ್ಗೆ ತನಿಖೆ ನಡೆಸಲು ಕಾರ್ಮಿಕ ಇಲಾಖೆಯ ಉಪ ಆಯುಕ್ತರನ್ನು ನೇಮಕ ಮಾಡಿರುವುದಾಗಿ ಸಚಿವ ಶಿವರಾಮ ಹೆಬ್ಬಾರ ಪ್ರಕಟಿಸಿದರು.

ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಾಯಕ್ಕ ಮೇಟಿ, ಶಾಸಕರಾದ ವೀರಣ್ಣ ಚರಂತಿಮಠ, ಸಿದ್ದುಸವದಿ, ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಸಿಇಒ ಭೂ ಬಾಲನ್, ಎಸ್ಪಿ ಲೋಕೇಶ ಜಗಲಾಸರ್,ಕಾರ್ಮಿಕ ಇಲಾಖೆ ಉಪ ಆಯುಕ್ತ ವೆಂಕಟೇಶ ಸಿಂದಿಹಟ್ಟಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT