ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವರ್ ಲೂಮ್ ನೇಕಾರರಿಗೂ ಸಮ್ಮಾನ ಯೋಜನೆ ವಿಸ್ತರಣೆ: ಶ್ರೀಮಂತ ಪಾಟೀಲ

Last Updated 29 ಜುಲೈ 2020, 8:51 IST
ಅಕ್ಷರ ಗಾತ್ರ

ಬಾಗಲಕೋಟೆ: ನೇಕಾರ ಸಮ್ಮಾನ ಯೋಜನೆಯನ್ನು ಪವರ್ ಲೂಮ್ (ವಿದ್ಯುತ್ ಮಗ್ಗ) ನಡೆಸುವ ನೇಕಾರರಿಗೂ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1.25 ಲಕ್ಷ ಪವರ್ ಲೂಮ್ ನೇಕಾರರು ಇದ್ದು, ಯೋಜನೆಯಡಿ ಅವರಿಗೂ ₹2 ಸಾವಿರ ನೆರವಿನ ಮೊತ್ತವನ್ನು ಪ್ರತಿ ವರ್ಷ ಅವರ ಬ್ಯಾಂಕ್ ಖಾತೆಗೆ ಹಾಕಲಾಗುವುದು ಎಂದರು.

ನೇಕಾರ ಸಮ್ಮಾನ ಅಡಿ 33 ಸಾವಿರ ಕೈಮಗ್ಗ ನೇಕಾರರ ಖಾತೆಗಳಿಗೆ ತಲಾ 2 ಸಾವಿರದಂತೆ ಈಗಾಗಲೇ ₹ 6.61 ಕೋಟಿ ಜಮಾ ಮಾಡಲಾಗಿದೆ. ಒಟ್ಟು 41 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು ಎಂದು ಹೇಳಿದರು.

ಕೋವಿಡ್ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಕೈಮಗ್ಗ ನೇಕಾರರು ನೇಯ್ದ ಸೀರೆಗಳನ್ನು ವಿತರಣೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಸಂಕಷ್ಟದಲ್ಲಿರುವ ನೇಕಾರ ಸಮುದಾಯಕ್ಕೂ ಅನುಕೂಲವಾಗಲಿದೆ. ಈ ಉದ್ದೇಶಕ್ಕೆ 6 ಲಕ್ಷ ಸೀರೆ ಖರೀದಿಗೆ ಮಂಜೂರಾತಿ ನೀಡಲಾಗಿದೆ ಎಂದರು.

ಪಠ್ಯದಿಂದ ಟಿಪ್ಪು ವಿಷಯ ಕೈಬಿಟ್ಟ ವಿಚಾರಸಿಎಂ ಜೊತೆ ಚರ್ಚಿಸುವೆ:ಬಿಜೆಪಿಯಲ್ಲಿ ಜಾತಿ, ಧರ್ಮ ಹಾಗೂ ಭಾಷೆಯ ವಿಚಾರದಲ್ಲಿ ಯಾವುದೇ ಭೇದ ಭಾವ ಮಾಡುವುದಿಲ್ಲ. ಹೀಗಾಗಿ ಟಿಪ್ಪು ಸುಲ್ತಾನ್ ಕುರಿತಾದ ವಿಷಯವನ್ನು ಪಠ್ಯ ಪುಸ್ತಕದಿಂದ ತೆಗೆದು ಹಾಕಿರುವುದನ್ನು ಸಿಎಂ ಜೊತೆ ಚರ್ಚಿಸುವೆ. ಇದೊಂದು ಸೂಕ್ಷ್ಮ ವಿಷಯವಾಗಿರುವುದರಿಂದ ಸಿಎಂ ಜೊತೆ ಮಾತನಾಡಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಬದಲಾವಣೆ ವಿಚಾರ ವಾಸ್ತವವಾಗಿ ಇಲ್ಲ. ಬರೀ ಮಾಧ್ಯಮಗಳಲ್ಲಿ ಮಾತ್ರ ಈ ಸಂಗತಿ ಚರ್ಚೆಯಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT