ಬೆಳಿಗ್ಗೆ ರಾಮಲಿಂಗದೇವರಿಗೆ ಅಭಿಷೇಕ, ರಾಮನ ಮೂರ್ತಿಯ ಬುತ್ತಿಪೂಜೆ, ಎಲೆ ಪೂಜೆ ಸೇರಿದಂತೆ ಅಲಂಕಾರಿಕ ಪೂಜೆಗಳು ಜರುಗಿದವು. ಸಂಜೆ ಜರುಗಿದ ರಥೋತ್ಸವದಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ, ನಂದಿಕೋಲು ಉತ್ಸವಗಳು ರಥೋತ್ಸವಕ್ಕೆ ಮೆರುಗು ನೀಡಿದವು. ಭಕ್ತರು ಉತ್ತತ್ತಿ, ಬತ್ತಾಸುಗಳನ್ನು ಹಾರಿಸಿ, ರಾಮಲಿಂಗೇಶ್ವರ ಜೈ ಎಂಬ ಉದ್ಘೋಷಗಳೊಂದಿಗೆ ರಥವನ್ನು ಎಳೆದರು. ಜಾತ್ರೆ ಅಂಗವಾಗಿ ನಾಟಕ ಪ್ರದರ್ಶನ, ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಸ್ಥಳೀಯ ಯುವಸಂಘಟನೆಗಳಿಂದ ಆಯೋಜಿಸಲಾಗಿತ್ತು. ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯದ ಭಕ್ತರು ಆಗಮಿಸಿ, ರಾಮಲಿಂಗೇಶ್ವರ ದರ್ಶನ ಪಡೆದುಕೊಂಡರು. ಜಾತ್ರಾ ಕಮಿಟಿ ಹಿರಿಯರು, ಗ್ರಾಮದ ಪ್ರಮುಖರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ದರು.