ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ರಕ್ತ ಹೀರುವ ಕಾಯ್ದೆ ಹಿಂಪಡೆಯಿರಿ:

ಬೇಡಿಕೆ ಈಡೇರದಿದ್ದರೆ ಪಾಠ ಕಲಿಸುವ ಎಚ್ಚರಿಕೆ
Last Updated 29 ಸೆಪ್ಟೆಂಬರ್ 2020, 7:44 IST
ಅಕ್ಷರ ಗಾತ್ರ

ಇಳಕಲ್: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭೂ ಸುಧಾರಣಾ ಕಾಯ್ದೆ ಹಾಗೂ ಕೃಷಿ ಮಾರುಕಟ್ಟೆ ಕಾಯ್ದೆಗೆ ತಂದಿರುವ ತಿದ್ದುಪಡಿ ವಿರೋಧಿಸಿ ಸೋಮವಾರ ನಡೆದ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿದ್ದವು. ಬೆಳಿಗ್ಗೆ ಕೆಲಹೊತ್ತು ರಾಷ್ಟ್ರೀಯ ಹೆದ್ದಾರಿ– 50 ಅನ್ನು ಬಂದ್‍ ಮಾಡಲಾಗಿತ್ತು. ಇಲ್ಲಿಯ ಕಂಠಿ ವೃತ್ತದಲ್ಲಿ ನೂರಾರು ಪ್ರತಿಭಟನಾಕಾರರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವುವಂತೆ ಒತ್ತಾಯಿಸಿದರು.

ರೈತ ಸಂಘದ ಮಲ್ಲನಗೌಡ ತುಂಬದ ಮಾತನಾಡಿ, ಈಗಾಗಲೇ ಸಂಕಷ್ಟದಲ್ಲಿರುವ ರೈತರನ್ನು ಸರ್ಕಾರವು ಹೊಸ ಕಾಯ್ದೆಗಳ ಮೂಲಕ ಕಾರ್ಪೋರೇಟ್ ಕಂಪನಿಗಳ ಹಿಡಿತಕ್ಕೆ ನೀಡುತ್ತಿದೆ. ರೈತರ ಜಮೀನು ಉಳಿಸುವುದು ಸರ್ಕಾರಕ್ಕೆ ಬೇಕಿಲ್ಲ. ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸಿಕೊಡುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಈ ಕಾಯ್ದೆಗಳನ್ನು ತಂದಿದೆ ಎಂದು ಆರೋಪಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಪೂಜಾರಿ ಮಾತನಾಡಿ, ಸರ್ಕಾರ ರೈತರ ಸಿಟ್ಟನ್ನು ಅರ್ಥಮಾಡಿಕೊಳ್ಳದಿದ್ದರೇ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ. ಕಾಲಲ್ಲಿ ಮೆಟ್ಟುವ ಚಪ್ಪಲಿ ಶೋರೂಂನಲ್ಲಿ, ಮಾಲೀಕ ನಿಗದಿಪಡಿಸಿದ ದರದಲ್ಲಿ ಪಾದರಕ್ಷೆ ಮಾರಾಟವಾಗುತ್ತದೆ. ರೈತ ಬೆಳೆದ ಅನ್ನ ಬೀದಿಯಲ್ಲಿ, ದಲ್ಲಾಳಿ ಅಥವಾ ವರ್ತಕ ಕೇಳಿದ ಬೆಲೆಗೆ ಮಾರಾಟ ಮಾಡುವುದು ಯಾವ ನ್ಯಾಯ? ಲಾಭವನ್ನೇ ಮುಖ್ಯವಾಗಿಟ್ಟು ಕೊಂಡಿರುವ ಬಂಡವಾಳಶಾಹಿಗಳು ರೈತರ ರಕ್ತ ಹೀರುವ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ನಗರದಲ್ಲಿ ಮಧ್ಯಾಹ್ನ 12 ಗಂಟೆ ವರೆಗೆ ಬಂದ್‍ಗೆ ಬೆಂಬಲ ವ್ಯಕ್ತವಾಯಿತು. ವಾಣಿಜ್ಯ ಮಳಿಗೆಗಳು ಮುಚ್ಚಿದ್ದವು. ಬಸ್ ಸಂಚಾರ ಸ್ಥಗಿತಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿ 50ರಲ್ಲಿ ವಾಹನ ಸಂಚಾರ ವಿರಳವಾಗಿತ್ತು. ನಂತರ ಜನಜೀವನ, ವಾಹನ ಸಂಚಾರ ಸಹಜ ಸ್ಥಿತಿಗೆ ಬಂದಿತು. ಪ್ರತಿಭಟನೆಯಲ್ಲಿ ಮಹಾಂತೇಶ ವಂಕಲಕುಂಟಿ, ಅಶೋಕ ಪೂಜಾರಿ, ಮುರ್ತುಜಾ ಬಾದಾಮಿ, ಮಹಮ್ಮದ ಕರಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT