ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ಖರೀದಿ ಕೇಂದ್ರ ಆರಂಭಿಸಲು ಆಗ್ರಹ

ತಹಶಿಲ್ದಾರ್ ಕಚೇರಿ ಆವರಣದಲ್ಲಿ ಎತ್ತಿನ ಬಂಡಿ ನಿಲ್ಲಿಸಿದ ರೈತರು
Last Updated 19 ಫೆಬ್ರುವರಿ 2022, 2:36 IST
ಅಕ್ಷರ ಗಾತ್ರ

ಹುನಗುಂದ: ಸ್ಥಗಿತಗೊಳಿಸಿರುವ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿ ಹುನಗುಂದ ಮತ್ತು ಇಳಕಲ್‌ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದ ಐದನೆಯ ದಿನ ಶುಕ್ರವಾರ ತಹಶೀಲ್ದಾರ್ ಕಚೇರಿಯ ಆವರಣ ಮುಂದೆ ರೈತರು ಎತ್ತು ಬಂಡಿ ನಿಲ್ಲಿಸಿದರು. ರೈತ ಮುಖಂಡರು ಬಿರುಬಿಸಿಲಿನಲ್ಲಿ ಕುಳಿತು ಧರಣಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ರಾಜ್ಯ ರೈತ ಸಂಘದ ಜಿಲ್ಲಾ ಉಪಾದ್ಯಕ್ಷ ಶಶಿಕಾಂತ ಬಂಡರಗಲ್ಲ ಮಾತನಾಡಿ, ನಾವು ರೈತರ ಮಕ್ಕಳು ಎಂದು ಬೊಬ್ಬೆ ಹೊಡೆಯುವ ಜನಪ್ರತಿನಿಧಿಗಳು ರೈತಾಪಿ ವರ್ಗಕ್ಕೆ ನಿಮ್ಮ ಕೊಡುಗೆ ಏನು? ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ಜನಪ್ರತಿನಿಧಿಗಳು ಇತ್ತಕಡೆ ಸುಳಿದಿಲ್ಲ. ಇವರು ನಮ್ಮ ಜನಪ್ರತಿನಿಧಿಗಳು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ಹಂತ ಹಂತವಾಗಿ ವಿಭಿನ್ನ ಮತ್ತು ವಿಶೇಷವಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಹುನಗುಂದ ಮತ್ತು ಇಳಕಲ್ಲ ತಾಲ್ಲೂಕಿನ ಗೊಬ್ಬರದ ಅಂಗಡಿಯ ಮಾಲೀಕರು ಸಂಘದ ಅಧ್ಯಕ್ಷ ಬಸವರಾಜ ಮಠದ ನೇತೃತ್ವದಲ್ಲಿ ರೈತ ಮುಖಂಡರು ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ರೈತರು ದೇಶದ ಬೆನ್ನಲುಬು. ರೈತ ವರ್ಗ ಸಂಕಷ್ಟದಲ್ಲಿರುವುದನ್ನು ಅರ್ಥಮಾಡಿಕೊಂಡು ರಾಜ್ಯ ಸರ್ಕಾರ ಶೀಘ್ರವಾಗಿ ತೊಗರಿ ಮತ್ತು ಕಡಲೆ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಗುರು ಗಾಣಗೇರ, ಬಸನಗೌಡ ಪೈಲ್ ಮಹಾಂತಪ್ಪ ಐಹೊಳ್ಳಿ, ರಸೂಲಸಾಬ ತಹಶೀಲ್ದಾರ, ಮುತ್ತುರಾಜ ಕರಡಿ, ಅಮರೇಶ ನಾಗೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT