ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಬೆಲೆ ಕುಸಿತ: ರಸ್ತೆ ತಡೆ

Last Updated 30 ನವೆಂಬರ್ 2019, 13:49 IST
ಅಕ್ಷರ ಗಾತ್ರ

ಬಾಗಲಕೋಟೆ: ಇಲ್ಲಿನ ಎಪಿಎಂಸಿಯಲ್ಲಿ ಈರುಳ್ಳಿ ಬೆಲೆ ಕೇವಲ ಎರಡು ದಿನಗಳಲ್ಲಿ ಅರ್ಧಕ್ಕರ್ಧ ಬೆಲೆಗೆ ಕುಸಿದಿದ್ದರಿಂದ ಆಕ್ರೋಶಗೊಂಡ ರೈತರು ಶನಿವಾರ ಸಂಜೆ ಇಲ್ಲಿನ ಎಪಿಎಂಸಿ ಕ್ರಾಸ್ ಬಳಿಯ ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿಯನ್ನು ತಡೆದು ಕೆಲ ಹೊತ್ತು ಪ್ರತಿಭಟನೆ ನಡೆಸಿದರು.

ಬಾಗಲಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನವೆಂಬರ್ 28ರಂದು ಈರುಳ್ಳಿ ಕ್ವಿಂಟಲ್‌ಗೆ ಗರಿಷ್ಠ ₹6000ದವರೆಗೆ ಮಾರಾಟವಾಗಿದೆ. ಅಂದು 967 ಕ್ವಿಂಟಲ್ ಈರುಳ್ಳಿ ಮಾರುಕಟ್ಟೆಗೆ ಆವಕಗೊಂಡಿದೆ. ಆದರೆ ಇಂದು ಕ್ವಿಂಟಲ್‌ಗೆ ₹3000ದ ಆಸುಪಾಸಿಗೆ ಕುಸಿದಿತ್ತು. ಇದು ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿ ಬಂದಿದ್ದ ರೈತರನ್ನು ಕೆರಳಿಸಿತು.

ಚಿಲ್ಲರೆ ಮಾರುಕಟ್ಟೆಯಲ್ಲಿ ಕಿಲೋ ಈರುಳ್ಳಿ ₹100ರ ಸಮೀಪವಿದೆ. ಆದರೆ ಸಗಟು ಖರೀದಿ ವೇಳೆ ರೈತರನ್ನು ವಂಚಿಸಲಾಗುತ್ತಿದೆ. ಈರುಳ್ಳಿ ಹಸಿಯಾಗಿದೆ. ಕೆಟ್ಟಿದೆ ಎಂಬ ನೆ‍ಪಗಳನ್ನು ಹೇಳುತ್ತಾ ಬಾಯಿಗೆ ಬಂದ ದರಕ್ಕೆ ಕೇಳುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

ಬೆಳಿಗ್ಗೆ 11ಕ್ಕೆ ಸವಾಲು (ಹರಾಜು) ಮಾಡಬೇಕಿದ್ದರೂ ಸಂಜೆ 6 ಗಂಟೆಯಾದರೂ ಮಾಡಿಲ್ಲ. ರೈತರನ್ನು ಬೇಕೆಂದೇ ಗೋಳು ಹೊಯ್ದುಕೊಳ್ಳುತ್ತಾರೆ. ಬೆಲೆ ನಿಗದಿ ಮಾಡುವಾಗ ರೈತರ ನಡುವೆಯೇ ತಾರತಮ್ಯ ಮಾಡುತ್ತಾರೆ. ಇಲ್ಲದ ನೆಪ ಹೇಳಿ ಕಡಿಮೆ ಬೆಲೆಗೆ ಕೊಳ್ಳುತ್ತಾರೆ. ನಮ್ಮ ಹಿತ ಕಾಯಬೇಕಾದ ಅಧಿಕಾರಿಗಳು ವ್ಯಾಪಾರಸ್ಥರೊಂದಿಗೆ ಕೈ ಜೋಡಿಸುತ್ತಾರೆ ಎಂದು ಶಿರೂರಿನ ರೈತ ಶಿವಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಮುಂಜಾನೆ ಒಂದು ಬೆಲೆ ಇದ್ದರೆ ಮಧ್ಯಾಹ್ನ ಮತ್ತೊಂದು ಬೆಲೆ ಇರುತ್ತದೆ. ತೂಕದಲ್ಲಿಯೂ ವಂಚನೆ ಮಾಡಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸರ್ಕಲ್ ಇನ್‌ಸ್ಪೆಕ್ಟರ್ ಐ.ಆರ್.ಪಟ್ಟಣಶೆಟ್ಟಿ ರೈತರನ್ನು ಸಮಾಧಾನಪಡಿಸಿದರು. ವ್ಯಾಪಾರಸ್ಥರು, ಮಾರುಕಟ್ಟೆ ಅಧಿಕಾರಿಗಳನ್ನು ಸೇರಿಸಿ ಸಭೆ ನಡೆಸಿ ನ್ಯಾಯಯುತ ಬೆಲೆ ಕೊಡಿಸುವುದಾಗಿ ಹೇಳಿ ಎಲ್ಲರನ್ನೂ ಮತ್ತೆ ಮಾರುಕಟ್ಟೆ ಪ್ರಾಂಗಣಕ್ಕೆ ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT