ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತ ಮಹಿಳೆಯರ ಶುಭಾರಂಭ

ನವನೀತ್ ಕೌರ್‌ ಹ್ಯಾಟ್ರಿಕ್‌; ಮಿಂಚಿದ ಅನೂಪಾ
Last Updated 13 ಮೇ 2018, 19:30 IST
ಅಕ್ಷರ ಗಾತ್ರ

ಡಾಂಗೈ ಸಿಟಿ, ಕೊರಿಯಾ : ನವನೀತ್ ಕೌರ್ ಹ್ಯಾಟ್ರಿಕ್ ಗೋಲು ಗಳಿಸಿ ಮಿಂಚಿದರು. ಇದರ ಫಲವಾಗಿ ಭಾರತ ತಂಡ ಮಹಿಳೆಯರ ಏಷ್ಯನ್‌ ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಭಾನುವಾರ ಇಲ್ಲಿ ನಡೆದ ಗುಂಪು ಹಂತದ ಮೊದಲ ಪಂದ್ಯದಲ್ಲಿ ಭಾರತದ ಮಹಿಳೆಯರು ಜಪಾನ್ ತಂಡವನ್ನು 4–1ರಿಂದ ಮಣಿಸಿದರು. ಫಾರ್ವರ್ಡ್ ಆಟಗಾರ್ತಿ ನವನೀತ್ ಏಳನೇ ನಿಮಿಷದಲ್ಲೇ ಮೊದಲ ಗೋಲು ಗಳಿಸಿ ಮಿಂಚಿದರು. 25 ಮತ್ತು 55ನೇ ನಿಮಿಷಗಳಲ್ಲಿ ಮತ್ತೆ ಎರಡು ಗೋಲು ಗಳಿಸಿದರು. ಅನೂಪಾ ಬಾರ್ಲಾ ಅವರು 53ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.

ನಿಖರ ತಂತ್ರಗಳೊಂದಿಗೆ ಕಣಕ್ಕೆ ಇಳಿದ ಹಾಲಿ ಚಾಂಪಿಯನ್‌ ಭಾರತ ಆರಂಭದಿಂದಲೇ ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸಿತು. ಈ ಮೂಲಕ, ಬಲಿಷ್ಠ ರಕ್ಷಣಾ ವಿಭಾಗವನ್ನು ಹೊಂದಿರುವ ಜಪಾನ್‌ ತಂಡವನ್ನು ಬೆರಗುಗೊಳಿಸಿತು. ಮೊದಲ ಐದು ನಿಮಿ ಷಗಳ ಒಳಗೆ ವಂದನಾ ಕಟಾರಿಯಾ ಮತ್ತು ಲೀಲಿಮಾ ಮಿನೆಜ್‌ ಮಿಂಚಿನ ವೇಗ ದಲ್ಲಿ ಎದುರಾಳಿಗಳ ಆವರಣಕ್ಕೆ ನುಗ್ಗಿ ಆತಂಕ ಸೃಷ್ಟಿಸಿದರು. ಏಳನೇ ನಿಮಿ ಷದಲ್ಲಿ ನವನೀತ್‌ ಫಲ ಕಂಡರು. ವಂದನಾ ನೀಡಿದ ಪಾಸ್‌ನಲ್ಲಿ ಚೆಂಡನ್ನು ಗುರಿ ಸೇರಿಸಿ ಭಾರತಕ್ಕೆ ಮುನ್ನಡೆ ಗಳಿಸಿಕೊಟ್ಟರು.

ಪ್ರತ್ಯುತ್ತರ ನೀಡಲು ಜಪಾನ್ ತಂಡ ದವರು ಶ್ರಮಿಸಿದರು. ಆದರೆ ನಾಯಕಿ ಸುನಿತಾ ಲಾಕ್ರಾ ಅವರ ನೇತೃತ್ವದ ರಕ್ಷಣಾ ವಿಭಾಗದವರು ಎದುರಾಳಿಗಳ ಮುನ್ನಡೆಯನ್ನು ತಡೆಯುವಲ್ಲಿ ಯಶಸ್ವಿಯಾದರು. ನಂತರ ಭಾರತ ತಂಡದವರು ಮತ್ತಷ್ಟು ಚುರುಕಿನಿಂದ ಆಡಿದರು.

25ನೇ ನಿಮಿಷದಲ್ಲಿ ವಂದನಾ ಮತ್ತು ನವನೀತ್ ಮತ್ತೊಮ್ಮೆ ಕೈಚಳ ತೋರಿದರು. 25 ಗಜ ದೂರದಿಂದ ನವನೀತ್‌ ಅವರು ಚೆಂಡನ್ನು ವಂದನಾ ಅವರಿಗೆ ಪಾಸ್ ನೀಡಿದರು. ವಂದನಾ ಚಾಕಚಕ್ಯತೆಯಿಂದ ಚೆಂಡನ್ನು ಎದುರಾಳಿಗಳ ಆವರಣಕ್ಕೆ ತಲುಪಿಸಿದರು. ಅಷ್ಟರಲ್ಲಿ ಅಲ್ಲಿಗೆ ತಲುಪಿದ ನವನೀತ್‌ ಗೋಲು ಗಳಿಸಿದರು.

ಮಳೆ ಅಡ್ಡಿ: 2–0 ಗೋಲುಗಳ ಮುನ್ನಡೆಯೊಂದಿಗೆ ಭಾರತ ಮೂರನೇ ಕ್ವಾರ್ಟರ್‌ನಲ್ಲಿ ಕಣಕ್ಕೆ ಇಳಿಯಿತು. ಈ ಸಂದರ್ಭದಲ್ಲಿ ಪಂದ್ಯಕ್ಕೆ ಮೂರು ನಿಮಿಷ ಮಳೆ ಅಡ್ಡಿಪಡಿಸಿತು. ನಂತರ ಲಭಿಸಿದ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ದೀಪ್ ಗ್ರೇಸ್ ಎಕ್ಕಾ ಮತ್ತು ಗುರ್ಜೀತ್ ಕೌರ್‌ ಕೈಚೆಲ್ಲಿದರು. ಜಪಾನ್‌ ಮೂರು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡಿತ್ತು. ಆದರೆ ಅನುಭವಿ ಗೋಲ್‌ ಕೀಪರ್‌ ಸವಿತಾ ಆ ತಂಡದ ಆಸೆಗೆ ತಣ್ಣೀರು ಸುರಿದರು.

53ನೇ ನಿಮಿಷದಲ್ಲಿ ಉದಿತಾ ಮತ್ತು ಅನೂಪಾ ಬಾರ್ಲಾ ಅವರ ಚುರುಕಿನ ಆಟಕ್ಕೆ ಮತ್ತೊಂದು ಗೋಲು ಒಲಿಯಿತು. 55ನೇ ನಿಮಿಷದಲ್ಲಿ ಜಪಾನ್‌ಗೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಚೆಂಡನ್ನು ಗುರಿ ಸೇರಿಸಲು ಆ ತಂಡಕ್ಕೆ ಸಾಧ್ಯವಾಗಲಿಲ್ಲ. ಆದರೆ ಉದಿತಾ ತೋರಿದ ಜಾಣ್ಮೆಯಿಂದ ಚೆಂಡು ನವನೀತ್ ಅವರ ಬಳಿಗೆ ಬಂತು. ಅವರು ಗೋಲು ಗಳಿಸಿ ಮಿಂಚಿದರು.

ಜಪಾನ್‌ ಪರ ಏಕೈಕ ಗೋಲು 58ನೇ ನಿಮಿಷದಲ್ಲಿ ಮೂಡಿಬಂತು. ಅಕಿ ಯಮಾಡಾ ಚೆಂಡನ್ನು ಗುರಿ ಸೇರಿಸಿದರು. ಗುಂಪು ಹಂತದಲ್ಲಿ ಭಾರತದ ಮುಂದಿನ ಪಂದ್ಯ ಮೇ 16ರಂದು ಚೀನಾ ವಿರುದ್ಧ ನಡೆಯಲಿದೆ.
*
‘ಯಾವುದೇ ಟೂರ್ನಿಯಲ್ಲಿ ಉತ್ತಮ ಅರಂಭ ಮುಖ್ಯ. ಹೀಗಾಗಿ ಈ ಪಂದ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೆವು. ಪಂದ್ಯದಲ್ಲಿ ನಮ್ಮ ತಂತ್ರಗಳು ಫಲಿಸಿವೆ. 
– ನವನೀತ್ ಕೌರ್‌ , ಹ್ಯಾಟ್ರಿಕ್ ಗೋಲು ಗಳಿಸಿದ ಆಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT