ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಅಂಗಡಿ ರಕ್ಷಣೆಗೆ ಜೀವ ಪಣಕ್ಕಿಟ್ಟರು!

Last Updated 12 ಆಗಸ್ಟ್ 2019, 19:36 IST
ಅಕ್ಷರ ಗಾತ್ರ

ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲಿನಲ್ಲಿ ಮಲಪ್ರಭಾ ನದಿ ಪ್ರವಾಹದ ವೇಳೆ ವ್ಯಕ್ತಿಯೊಬ್ಬರು ತಮ್ಮ ಚಿನ್ನದ ಅಂಗಡಿ ರಕ್ಷಣೆಗೆ ಗ್ರಾಮಸ್ಥರನ್ನು ಜೊತೆಗಿಟ್ಟುಕೊಂಡಿದ್ದರು. ಊರಿನಿಂದ ಹೊರಗೆ ಬರಲು ಒಪ್ಪಿರಲಿಲ್ಲ. ಇದು ರಕ್ಷಣೆಗೆ ತೆರಳಿದ್ದ ಸ್ಥಳೀಯ ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿತ್ತು. ಕೊನೆಗೆ ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕಾಯಿತು.

ಪಟ್ಟದಕಲ್ಲಿನ ಚಿನ್ನದ ಅಂಗಡಿ ಮಾಲೀಕ ಮಲ್ಲಿಕಾರ್ಜುನ ಬಡಿಗೇರ ಮನೆಯಲ್ಲಿ 120 ಮಂದಿ ಆಶ್ರಯ ಪಡೆದಿದ್ದರು. ಎರಡು ಬಾರಿ ಬೋಟ್ ಕಳುಹಿಸಿದರೂ ಅಲ್ಲಿದ್ದವರು ವಾಪಸ್ ಕಳುಹಿಸಿದ್ದರು.

ತಮ್ಮ ಬಳಿ ಇದ್ದ ಚಿನ್ನಾಭರಣವನ್ನು ಕಳ್ಳರಿಂದ ರಕ್ಷಣೆ ಮಾಡಲು ಸ್ಥಳೀಯರನ್ನು ಮಲ್ಲಿಕಾರ್ಜುನ ಜೊತೆಗಿಟ್ಟುಕೊಂಡಿದ್ದರು. ಎಲ್ಲರಿಗೂ ಊಟೋಪಚಾರದ ವ್ಯವಸ್ಥೆ ಅವರೇ ಮಾಡಿದ್ದರು. ಕೊನೆಗೆ ಸ್ವತಃ ಉಪವಿಭಾಗಾಧಿಕಾರಿ ಎಚ್.ಜಯಾ ಸೇನೆಯ ಸಿಬ್ಬಂದಿಯೊಂದಿಗೆ ತೆರಳಿ ಅಲ್ಲಿದ್ದವರನ್ನು ಬಲವಂತವಾಗಿ ಕರೆತಂದಿದ್ದರು. ಪ್ರತಿರೋಧ ತೋರಿದವರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿತ್ತು.

‘ಕ್ಷಣ ಕ್ಷಣಕ್ಕೂ ಪ್ರವಾಹದ ನೀರಿನ ಮಟ್ಟ ಹೆಚ್ಚಳವಾಗುತ್ತಿತ್ತು. ಆದರೂ ಹೊರಗೆ ಬರಲು ಅಲ್ಲಿದ್ದವರು ಸುತಾರಾಂ ಒಪ್ಪಿರಲಿಲ್ತ. ಅವರ ಸುರಕ್ಷತೆಯ ಬಗ್ಗೆ ನಮ್ಮಲ್ಲಿ ಆತಂಕ ಸೃಷ್ಟಿಸಿತ್ತು. ಕೊನೆಗೆ ಪೊಲೀಸರನ್ನು ಜೊತೆಗೆ ಕರೆದೊಯ್ದೆವು‘ ಎಂದು ಜಯಾ ‘ಪ್ರಜಾವಾಣಿ’ಗೆ ತಿಳಿಸಿದರು.

ವಾರಕ್ಕಾಗುವಷ್ಟು ಸಾಮಗ್ರಿ ಇತ್ತು:

‘ನಮ್ಮೂರಿನ ಜನ ಹಂಗೇನೂ ಇಲ್ರಿ, ಒಳ್ಳೆಯವರೇ. ಅದರೆ 2009ರ ಪ್ರವಾಹದ ವೇಳೆ ಊರಿನಲ್ಲಿ ನಡೆದಿದ್ದ ಕಳ್ಳತನಗಳ ಹಿನ್ನೆಲೆ ಮುಂಜಾಗರೂಕತಾ ಕ್ರಮವಾಗಿ ನಾವೆಲ್ಲರೂ ಒಟ್ಟಿಗಿದ್ದೆವು. ಎಲ್ಲರಿಗೂ ವಾರಕ್ಕೆ ಆಗುವಷ್ಟು ತರಕಾರಿ, ಆಹಾರ ಸಾಮಗ್ರಿ ಇದ್ದವು. ಫಿಲ್ಟರ್ ನೀರು, ಐದು ಕಿಲೋ ವ್ಯಾಟ್‌ನ ನಾಲ್ಕು ಯುಪಿಎಸ್ ಇದ್ದವು. ಟಿ.ವಿ ಮೂಲಕ ಹೊರಗಿನ ಸಂಗತಿಯ ಅರಿವು ಆಗುತ್ತಿತ್ತು. ಇನ್ನೂ ಎರಡು ಅಡಿ ನೀರು ಬಂದರೂ ಏನೂ ಆಗುವುದಿಲ್ಲ ಎಂಬುದನ್ನು ನಮ್ಮವರಿಗೆ ಮನದಟ್ಟು ಮಾಡಿದ್ದೆ. ಆದರೂ ಅಧಿಕಾರಿಗಳು ಒತ್ತಾಯವಾಗಿ ಕರೆತಂದರು’ ಎಂದು ಮಲ್ಲಿಕಾರ್ಜುನ ಬಡಿಗೇರ ಅಲವತ್ತುಕೊಂಡರು. ನೀರು ಇಳಿಯುತ್ತಿದ್ದಂತೆಯೇ ಮತ್ತೆ ತಮ್ಮ ಬಳಗದೊಂದಿಗೆ ಮನೆ ಸೇರಿದ್ದರು.

(ಬಾದಾಮಿ ತಾಲ್ಲೂಕಿನ ನಂದಿಕೇಶ್ವರದ ಆಸರೆ ಕಾಲೊನಿಗೆ ಸೋಮವಾರ ಬಂದ ಕುಷ್ಟಗಿ ತಾಲ್ಲೂಕು ಬಿಜಕಲ್ ವಿರಕ್ತಮಠದ ಶಿವಲಿಂಗೇಶ್ವರ ಸ್ವಾಮಿಗೆ ಮಹಿಳೆಯೊಬ್ಬರು ರಸ್ತೆಯಲ್ಲಿಯೇ ಕೂರಿಸಿ ಪಾದಪೂಜೆ ಮಾಡಿದರು. - ಪ್ರಜಾವಾಣಿ ಚಿತ್ರ: ಮಂಜುನಾಥ ಗೋಡೆಪ್ಪನವರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT