ಶನಿವಾರ, ಸೆಪ್ಟೆಂಬರ್ 19, 2020
23 °C

ಪ್ರವಾಹ ಸಂಕಷ್ಟ ತಪ್ಪಿಸಲು ಮಹಾರಾಷ್ಟ್ರದೊಂದಿಗೆ ಮಾತುಕತೆ: ಡಿಸಿಎಂ ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಮಹಾರಾಷ್ಟ್ರದ ಮೊಂಡುತನದಿಂದಾಗಿ ಕಳೆದ ವರ್ಷ ಭೀಕರ ಪ್ರವಾಹ ಸ್ಥಿತಿ ಎದುರಿಸಿದ್ದೆವು. ಈ ಬಾರಿ ಅದು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಮುಧೋಳ ತಾಲ್ಲೂಕಿನ ಮಾಚಕನೂರಿನಲ್ಲಿ ಶನಿವಾರ ಘಟಪ್ರಭಾ ನದಿ ಉಕ್ಕೇರಿ ಜಲಾವೃತಗೊಂಡ ಇತಿಹಾಸ ಪ್ರಸಿದ್ಧ ಹೊಳೆ ಬಸವೇಶ್ವರ ದೇವಸ್ಥಾನ ಹಾಗೂ ನದಿ ಪಾತ್ರದ ಜಮೀನುಗಳಲ್ಲಿನ ಬೆಳೆ ಪರಿಶೀಲಿಸಿದ ಅವರು ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೃಷ್ಣಾ ಕೊಳ್ಳದಲ್ಲಿನ ಮಹಾರಾಷ್ಟ್ರ ಭಾಗದಲ್ಲಿನ ಆರು ಜಲಾಶಯ ಹಾಗೂ ಬ್ಯಾರೇಜ್ ಗಳು ಶೇ 95ರಷ್ಟು ಭರ್ತಿಯಾಗುವವರೆಗೆ ಸುಮ್ಮನಿದ್ದು ನಂತರ ಏಕಾಏಕಿ ನದಿಗಳಿಗೆ ನೀರು ಹರಿಸುವ ಕೆಲಸ ಮಹಾರಾಷ್ಟ್ರ ಕಳೆದ ಬಾರಿ ಮಾಡಿತ್ತು. ಇದರಿಂದ ರಾಜ್ಯದಲ್ಲಿ ಪ್ರವಾಹದ ಸಂಕಷ್ಟ ಎದುರಾಗಿತ್ತು. ಅದನ್ನು ತಪ್ಪಿಸಲು ಜಲಾಶಯಗಳು ಶೇ 80ರಷ್ಟು ಭಾಗ ತುಂಬುತ್ತಿದ್ದಂತೆಯೇ ನೀರು ಹೊರಗೆ ಬಿಡುವಂತೆ ಕರ್ನಾಟಕ ಪ್ರತಿ ಬಾರಿ ಮನವಿ ಮಾಡುತ್ತಿದೆ.ಅದಕ್ಕೆ ಕಳೆದ ಬಾರಿ ಸೂಕ್ತ ಸ್ಪಂದನೆ ದೊರೆತಿರಲಿಲ್ಲ ಎಂದರು.

ಹೀಗಾಗಿ ಹಿಂದಿನ ವರ್ಷದ ಪರಿಸ್ಥಿತಿ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇತ್ತೀಚೆಗೆ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ.ಅದಕ್ಕೆ ಅವರಿಂದಲೂ ಸ್ಪಂದನೆ ದೊರೆತಿದೆ. ಎರಡು ರಾಜ್ಯಗಳ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಈ ವಿಚಾರದಲ್ಲಿ ಕರ್ನಾಟಕದಿಂದ ಸಮನ್ವಯದ ಕೊರತೆ ಎಂಬ ಮಾತು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹೊಸ ಮದ್ಯದಂಗಡಿ ಅವಕಾಶವಿಲ್ಲ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಕಾರದ ಹಿನ್ನೆಲೆ ಹೊಂದಿರುವ ಬಿಜೆಪಿ ನಾಯಕರಾಗಲಿ, ಕಾರ್ಯಕರ್ತರಾಗಲಿ ಮದ್ಯದಂಗಡಿಗಳ ಸಂಖ್ಯೆ ಹೆಚ್ಚಿಸುವ ಲ್ಲಿ, ಅದರಿಂದ ಬರುವ ಆದಾಯದಲ್ಲಿ ರಾಜ್ಯ ನಡೆಸುವುದರಲ್ಲಿ ಆಸಕ್ತಿ ಹೊಂದಿರುವುದಿಲ್ಲ. ಅದಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು  ಹೊರತಲ್ಲ ಎಂದು ಗೋವಿಂದ ಕಾರಜೋಳ ಸ್ಪಷ್ಪಪಡಿಸಿದರು.

ರಾಜ್ಯಸರ್ಕಾರ ಹಳ್ಳಿಗೊಂದು ಮದ್ಯದಂಗಡಿ ತೆರೆತಲು ಹೊರಟಿದೆ ಎಂಬ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದ ಕಾರಜೋಳ, ಮದ್ಯದಂಗಡಿಗಳ ಸಂಖ್ಯೆ ಹೆಚ್ಚಿಸುವುದು ಬಿಜೆಪಿಯ ನೀತಿ ಅಲ್ಲ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು