ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಳೇದಗುಡ್ಡ | ಕಾಂಗ್ರೆಸ್‍ನಲ್ಲಿ ಬಣ ರಾಜಕೀಯ: ಲಾಭ ಪಡೆಯಲು ಜೆಡಿಎಸ್ ಸಿದ್ಧತೆ

ಎಚ್.ಎಸ್. ಘಂಟಿ
Published : 24 ಆಗಸ್ಟ್ 2024, 4:58 IST
Last Updated : 24 ಆಗಸ್ಟ್ 2024, 4:58 IST
ಫಾಲೋ ಮಾಡಿ
Comments

ಗುಳೇದಗುಡ್ಡ: ಗುಳೇದಗುಡ್ಡ ಪುರಸಭೆಯ ಅಧ್ಯಕ್ಷಗಿರಿಗೆ ಕಾಂಗ್ರೆಸ್‍ನಲ್ಲೇ ಪೈಪೋಟಿ ಹೆಚ್ಚಾಗಿದ್ದು ಅಧ್ಯಕ್ಷೆ ಯಾರಾಗಲಿದ್ದಾರೆ ಎಂದು ಕುತೂಹಲ ಹುಟ್ಟಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ರಾಜವ್ವ ಹೆಬ್ಬಳ್ಳಿ ಒಬ್ಬರೇ ಸದಸ್ಯರಿದ್ದು, ಅವರಿಗೇ ಹುದ್ದೆ ಪಕ್ಕಾ ಎಂಬಂತಾಗಿದೆ. ಆದತೆ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಕಾಂಗ್ರೆಸ್ ಸದಸ್ಯರಲ್ಲೇ ತೀವ್ರ ಪೈಪೋಟಿ ಶುರುವಾಗಿದೆ.

ಬಲಾಬಲ: ಒಟ್ಟು 23 ಸಂಖ್ಯಾಬಲ ಹೊಂದಿರುವ ಪಟ್ಟಣದ ಪುರಸಭೆಯಲ್ಲಿ 16 ಕಾಂಗ್ರೆಸ್, 5 ಜೆಡಿಎಸ್, ಬಿಜೆಪಿಯ ಇಬ್ಬರು ಸದಸ್ಯರಿದ್ದಾರೆ. ಕಾಂಗ್ರೆಸ್‌ಗೆ ಬಹುಮತ ಇರುವುದರಿಂದ ಗದ್ದುಗೆಗೆ ಏರುವುದು ಸುಲಭ. ಆದರೆ ಕಾಂಗ್ರೆಸ್‍ನ ಸದಸ್ಯರು ಮತ್ತು ಮುಖಂಡರ ಭಿನ್ನಮತ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

15 ತಿಂಗಳಿಂದ ಅಧಿಕಾರವಿಲ್ಲದೇ ಚಾತಕಪಕ್ಷಿಯಂತೆ ಕಾಯುತ್ತಿದ್ದ ಸದಸ್ಯರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಜಕೀಯ ಆಟ ಶುರುವಿಟ್ಟುಕೊಂಡಿದ್ದಾರೆ.

ಆಕಾಂಕ್ಷಿಗಳು: ವಿದ್ಯಾ ಮುರುಗೋಡ, ವಂದನಾ ಭಟ್ಟಡ, ಜ್ಯೋತಿ ಆಲೂರ, ರಾಜವ್ವ ಹೆಬ್ಬಳ್ಳಿ, ಶರೀಫಾ ಮಂಗಳೂರು ಸದ್ಯದ ಆಕಾಂಕ್ಷಿಗಳಾಗಿದ್ದು ಅವರಲ್ಲಿಯೇ ತೀವ್ರ ಪೈಪೋಟಿ ಕಂಡು ಬಂದಿದೆ.

ಶಾಸಕರ ಸಭೆ: ಈಚೆಗೆ ಶಾಸಕರು ಖಾಸಗಿ ಕಾರ್ಯಕ್ರಮಕ್ಕೆ ಪಟ್ಟಣಕ್ಕೆ ಬಂದಾಗ ಎಲ್ಲ ಸದಸ್ಯರನ್ನು ಮತ್ತು ಕಾಂಗ್ರೆಸ್ ಮುಖಂಡರನ್ನು ಸೇರಿಸಿ ಸಭೆ ನಡೆಸಿದ್ದಾರೆ. ಅಧ್ಯಕ್ಷರು ಯಾರಾಗಬೇಕು ಎಂಬುದನ್ನು ನೀವೆಲ್ಲರೂ ಸೇರಿ ನಿರ್ಧರಿಸಿ ಆಯ್ಕೆ ಮಾಡಿ ಸೂಚಿಸಿದರೆ ಹೆಸರನ್ನು ಶಿಫಾರಸು ಮಾಡುವುದಾಗಿ ಹೇಳಿದ್ದಾರೆ. ಆದರೆ ಇದುವರೆಗೂ ಒಮ್ಮತದ ಅಭ್ಯರ್ಥಿ ಆಯ್ಕೆ ಆಗಿಲ್ಲ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‍ನಲ್ಲಿ ಬಣ ರಾಜಕೀಯ: ಕಾಂಗ್ರೆಸ್‍ನ ಒಟ್ಟು 16 ಸದಸ್ಯರಲ್ಲಿ ಒಗ್ಗಟ್ಟು ಕಂಡು ಬರುತ್ತಿಲ್ಲ. ಕಾರಣ ಬೇರೆಯೆ ಇದೆ. ಇಲ್ಲಿ ಶಾಸಕರ ಬಣ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗದ ಬಣವಿದೆ. ಅದು ಸದ್ದಿಲ್ಲದೇ ಭಿನ್ನ ಸ್ವರೂಪ ಪಡೆದಿದ್ದು ಚುಣಾವಣಾ ದಿನಾಂಕ ಸಮೀಪಿಸುತ್ತಿದ್ದಂತೆ ಭಿನ್ನ ನಿಲುವು ತಳೆದಿರುವುದು ಕಂಡು ಬಂದಿದೆ. ಬಣ ರಾಜಕೀಯ ಕಂಡು ಬಂದಿದೆ.

ಪ್ರವಾಸದಲ್ಲಿ ಸದಸ್ಯರು: ಚುಣಾವಣಾ ದಿನಾಂಕ ನಿಗದಿಯಾಗುವುದಕ್ಕಿಂತ ಮುಂಚೆಯೇ ಶಾಸಕರ ಬಣದಲ್ಲಿ ಗುರುತಿಸಿಕೊಂಡವರೂ ಸಹ ಸಿದ್ದರಾಮಯ್ಯ ಬಳಗದ ಬಣದಲ್ಲಿ ಪ್ರವಾಸಕ್ಕೆ ತೆರಳಿರುವ ಸಂಗತಿ ಬಯಲಾಗಿದೆ. ಇನ್ನೂ ಕೆಲವು ಸದಸ್ಯರು ಭಾನುವಾರ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವಿಪ್‌ ಸಾಧ್ಯತೆ: ಕಾಗ್ರೆಸ್‍ನ 16 ಸದಸ್ಯರಿದ್ದು ಅವರಲ್ಲಿಯೇ ಬಂಡಾಯ ಕಂಡು ಬರುತ್ತಿದ್ದು.ಇದರ ಲಾಭವನ್ನು ಜೆಡಿಎಸ್ ಪಡೆಯಲು ಹವಣಿಸುತ್ತಿದ್ದ ಕೇವಲ 5 ಸದಸ್ಯ ಬಲವಿದ್ದರೂ ನಾಮಪತ್ರ ಸಲ್ಲಿಸಲು ತಯಾರಾಗಿದೆ. ಇದರ ನಡುವೆಯೇ ವಿಪ್‌ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ಉಮೇದುವಾರಿಗೆ ಸಲ್ಲಿಕೆಗೆ ಸಿದ್ಧತೆ: ಐದು ಸದಸ್ಯರಿರುವ ಜೆಡಿಎಸ್ ಇಬ್ಬರು ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ ತಿಳಿಸಿದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ನಾನು ಪ್ರಬಲ ಆಕಾಂಕ್ಷಿ. ಒಮ್ಮತದ ಆಯ್ಕೆ ಮೂಡಿದರೆ ಪಟ್ಟಣ ಅಭಿವೃದ್ಧಿಗೆ ಶ್ರಮಿಸುತ್ತೇನೆ
ವಿದ್ಯಾ ಮುರುಗೋಡ ಪುರಸಭೆ ಸದಸ್ಯೆ
ಅಧ್ಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿ. ಶಾಸಕರಿಗೆ ಮನವಿ ಮಾಡಲಾಗಿದೆ. ಶಾಸಕರ ಮುಖಂಡರ ನಿರ್ದೇಶನದಂತೆ ನಡೆದುಕೊಳ್ಳುತ್ತೇನೆ
ವಂದನಾ ಭಟ್ಟಡ ಪುರಸಭೆ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT