ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಳೇದಗುಡ್ಡ: ಈ ಶಾಲೆಯಲ್ಲಿ ಶಿಕ್ಷಕರಿದ್ದಾರೆ; ವಿದ್ಯಾರ್ಥಿಗಳೇ ಇಲ್ಲ!

ಎಚ್.ಎಸ್.ಘಂಟಿ
Published : 30 ಸೆಪ್ಟೆಂಬರ್ 2024, 5:22 IST
Last Updated : 30 ಸೆಪ್ಟೆಂಬರ್ 2024, 5:22 IST
ಫಾಲೋ ಮಾಡಿ
Comments

ಗುಳೇದಗುಡ್ಡ: ಪಟ್ಟಣದ ಆಶ್ರಯ ಕಾಲೊನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ತಾಲ್ಲೂಕಿನ ಕೋಟೆಕಲ್ ಗ್ರಾಮದ ಸರ್ಕಾರಿ ಉರ್ದು ಶಾಲೆಗಳಲ್ಲಿ ಮಕ್ಕಳೇ ಇಲ್ಲದ ಶೂನ್ಯ ದಾಖಲಾತಿ ಇದೆ. ಆದರೂ ಹಲವು ವರ್ಷಗಳಿಂದ ಇವುಗಳನ್ನು ಹಾಗೆಯೇ ಮುಂದುವರಿಸಿಕೊಂಡು ಬಂದಿರುವ ಶಿಕ್ಷಣ ಇಲಾಖೆಯ ಕಾರ್ಯವೈಖರಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸರ್ಕಾರ ಮಕ್ಕಳ ಕಲಿಕೆಗೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಕಲಿಕಾ ಸಾಮರ್ಥ್ಯ ವರ್ಧನೆಗೆ ಸರ್ಕಾರಿ ಶಾಲೆಗಳಿಗೆ ಸರ್ಕಾರ ಒತ್ತು ಕೊಡುತ್ತ ಬಂದಿದೆ. ಆದರೂ ಕೆಲ ಶಾಲೆಗಳಲ್ಲಿ ಮಕ್ಕಳೇ ಇಲ್ಲದಿದ್ದರೂ ಶಾಲೆ ನಡೆಯುತ್ತಿರುವುದು ಕಂಡು ಬಂದಿದೆ.

ಕೋಟೆಕಲ್ ಉರ್ದು ಪ್ರಾಥಮಿಕ ಶಾಲೆ: ತಾಲ್ಲೂಕಿನ ಕೋಟೆಕಲ್‌ ಗ್ರಾಮದಲ್ಲಿರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಬ್ಬ ಶಿಕ್ಷಕರಿದ್ದಾರೆ. ಆದರೆ ಮಕ್ಕಳ ಸಂಖ್ಯೆ ಶೂನ್ಯ. 2023-24 ಹಾಗೂ 2024-25ನೇ ಸಾಲಿನಲ್ಲಿ ಮಕ್ಕಳೇ ದಾಖಲಾಗಿಲ್ಲ. 2023-24ರಲ್ಲಿ ದಾಖಲಾದ ಇಬ್ಬರು ಮಕ್ಕಳು ವರ್ಗಾವಣೆ ಪ್ರಮಾಣ ಪತ್ರ ಪಡೆದು ಬೇರೆ ಶಾಲೆಗೆ ಹೋಗಿರುವುದರಿಂದ ಮಕ್ಕಳಿಲ್ಲ. ಆದರೂ ಒಬ್ಬ ಶಿಕ್ಷಕರಿದ್ದಾರೆ. ಶಾಲಾ ವೇಳೆಗೆ ಬಂದು ಶಾಲಾ ಕಚೇರಿ ಬಾಗಿಲು ತೆರೆದು ಕೂಡುವ ಕೆಲಸ ಈ ಶಿಕ್ಷಕರದ್ದು.

ಆಶ್ರಯ ಕಾಲೊನಿ ಸರ್ಕಾರಿ ಶಾಲೆ: ಒಂದೇ ಮಗು ದಾಖಲಾಗಿರುವ ತಾಲ್ಲೂಕು ಕೇಂದ್ರದ ಕಮತಗಿ ರಸ್ತೆಗೆ ಹೊಂದಿಕೊಂಡಿರುವ ಆಶ್ರಯ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಬ್ಬ ಶಿಕ್ಷಕರಿದ್ದಾರೆ. ಮಗು ಬಂದರೂ, ಬಾರದಿದ್ದರೂ ಶಾಲೆ ಮಾತ್ರ ನಡೆಯುತ್ತಿದೆ. ಇಲ್ಲಿಯೂ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಸುಮ್ಮನಿರುವುದು ಏಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

‘ಇಂತಹ ಶಾಲೆಗಳನ್ನು ಉಳಿಸಿಕೊಳ್ಳುವುದರಿಂದ ಸರ್ಕಾರಕ್ಕೆ ಸಾಕಷ್ಟು ನಷ್ಟ ಉಂಟಾಗುತ್ತದೆ. ಶಾಲೆಗಳಲ್ಲಿ ಮಕ್ಕಳಿಲ್ಲದಿದ್ದರೆ ಮಕ್ಕಳ ದಾಖಲಾತಿ ಹೆಚ್ಚಿಸುವ ಆಂದೋಲನಗಳು ಈ ಶಾಲೆಗಳಲ್ಲಿ ನಡೆದಿಲ್ಲವೇ? ಶಿಕ್ಷಣ ಇಲಾಖೆ ಈ ವ್ಯವಸ್ಥೆಯನ್ನು ಹೇಗೆ ರಕ್ಷಿಸಿಕೊಂಡು ಬಂದಿದೆ ? ಶಾಸಕರ, ಜಿಲ್ಲಾ ಶಿಕ್ಷಣಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒಗಳ ಗಮನಕ್ಕೂ ಇದು ಬಂದಿಲ್ಲವೇ’ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಈ ಶಾಲೆಗಳಲ್ಲಿ ಮಕ್ಕಳಿಲ್ಲದ ಮಾಹಿತಿ ಬಂದಿದೆ. ಆದಷ್ಟು ಬೇಗ ಈ ವ್ಯವಸ್ಥೆ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ
ಬಿ.ಎಚ್.ಹಳಗೇರಿ ಬಿಇಒ ಬಾದಾಮಿ
ನಾನು ಈಚಿಗೆ ಶಾಲೆಗೆ ವರ್ಗಾವಣೆಯಾಗಿ ಬಂದಿರುವೆ. ಶಾಲೆಯಲ್ಲಿ ಮಕ್ಕಳಿಲ್ಲ. ಸರ್ಕಾರ ಮತ್ತೆ ಬೇರೆಡೆ ವರ್ಗಾಯಿಸಿದರೆ ಹೋಗುತ್ತೇನೆ
ಸಂಗಣ್ಣ ಪರೂತಿ ಶಿಕ್ಷಕ ಕೋಟೆಕಲ್
ಆಶ್ರಯ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಅಲ್ಲಿರುವ ಶಿಕ್ಷಕರಿಗೆ ತಿಳಿಸಿರುವೆ. ಈ ಮಾಹಿತಿಯನ್ನು ಬಿಇಒ ಅವರ ಗಮನಕ್ಕೂ ತಂದಿರುವೆ
ಭಾಗೀರಥಿ ಆಲೂರ ಸಮೂಹ ಸಂಪನ್ಮೂಲ ವ್ಯಕ್ತಿ ಗುಳೇದಗುಡ್ಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT