ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಗೆ ಬಿದ್ದ ಜ್ಯೋತಿಷಿ

Last Updated 5 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ತನ್ನ ಭವಿಷ್ಯವನ್ನು ತಿಳಿಯುವ ಕುತೂಹಲ ಬಹುತೇಕ ಜನರಿಗೆ ಇದ್ದೇ ಇದೆ. ಅನೇಕರಿಗೆ ಇದೊಂದು ಚಟ ಅಥವಾ ವ್ಯಸನವೇ ಆಗಿರುತ್ತದೆ. ತಮ್ಮ ಬಹಳಷ್ಟು ಸಮಯ ಹಾಗೂ ಹಣವನ್ನು ಇದಕ್ಕಾಗಿ ಅವರು ವ್ಯಯಿಸಿ, ಭವಿಷ್ಯವನ್ನು ಹೇಳುವೆವು ಎನ್ನುವ ಜ್ಯೋತಿಷಿಗಳು, ಇನ್ನಿತರರ ಬಳಿಗೆ ಹೋಗುತ್ತಲೇ ಇರುತ್ತಾರೆ. ಒಬ್ಬನ ಬಳಿಗೆ ಹೋಗಿ ಕೇಳಿದ ವಿಷಯಗಳಿಂದ ತೃಪ್ತನಾಗದೆ, ವಿವಿಧ ಜ್ಯೋತಿಷಿಗಳ ಬಳಿಗೆ ಅಲೆಯುತ್ತಲೇ ಇರುತ್ತಾರೆ.

ಹಳ್ಳಿಯಲ್ಲಿ ಜೀವಿಸಿದ್ದ ವ್ಯಕ್ತಿಯೊಬ್ಬ ತಾನು ನಕ್ಷತ್ರಗಳನ್ನು ನೋಡಿ, ಅವುಗಳ ಅಧ್ಯಯನ ನಡೆಸಿ ಜನರ ಭವಿಷ್ಯವನ್ನು ಹೇಳಲು ಶಕ್ತನಾಗಿರುವುದಾಗಿ ಸಾರಿದ. ಅವನು ತನ್ನನ್ನೇ ಜ್ಯೋತಿಷಿಯೆಂದು ಕರೆಯಲಾರಂಭಿಸಿ, ರಾತ್ರಿಯನ್ನು ನಕ್ಷತ್ರಗಳನ್ನು ನೋಡುವುದರಲ್ಲಿ ಕಳೆದ. ಅವನು ಭವಿಷ್ಯದ ಬಗ್ಗೆ ಚಿಂತಿಸುವುದರಲ್ಲಿ ಮಗ್ನನಾಗಿರಲು ಹಳ್ಳಿಯ ಜನರು, ತಮ್ಮ ಭವಿಷ್ಯವನ್ನು ತಿಳಿಯುವ ಕುತೂಹಲದಿಂದ ಅವನಲ್ಲಿಗೆ ಬರಲಾರಂಭಿಸಿದರು.

ಒಂದು ಸಂಜೆ ಆತನು ಆಕಾಶವನ್ನು ದಿಟ್ಟಿಸುತ್ತಾ, ಲೆಕ್ಕಾಚಾರ ಹಾಕುತ್ತಾ ರಸ್ತೆಯಲ್ಲಿ ನಡೆಯುತ್ತಿದ್ದ. ತನ್ನ ಲೆಕ್ಕಾಚಾರದಲ್ಲಿ ಆತನಿಗೆ ಈ ಲೋಕದ ಅಂತ್ಯವು ಬಹಳ ಸನಿಹವಿರುವುದು ತಿಳಿದು ಬಂತು. ನಕ್ಷತ್ರಗಳನ್ನೇ ನೋಡುತ್ತಾ ನಡೆದ ಜ್ಯೋತಿಷಿಯು ರಸ್ತೆಯಲ್ಲಿದ್ದ ನೀರು ತುಂಬಿದ ಗುಂಡಿಯನ್ನು ಗಮನಿಸದೆ ಅದರೊಳಕ್ಕೆ ಬಿದ್ದ. ಆಳವಾಗಿದ್ದ ಆ ಗುಂಡಿಯೊಳಗಿನ ಕೆಸರಿನಲ್ಲಿ ಅವನು ಹೂತು ಹೋಗುತ್ತಿರಲು, ಸಹಾಯಕ್ಕಾಗಿ ಅವನು ಬೊಬ್ಬೆ ಹೊಡೆದ. ಜ್ಯೋತಿಷಿಯ ಬೊಬ್ಬೆಯನ್ನು ಕೇಳಿದ ಗ್ರಾಮಸ್ಥರು ಓಡಿಬಂದು ಗುಂಡಿಯಿಂದ ಮೇಲಕ್ಕೆತ್ತಿದರು.

ಗ್ರಾಮಸ್ಥರಲ್ಲಿ ಒಬ್ಬ ಜ್ಯೋತಿಷಿಗೆ, ‘ಸ್ವಾಮಿ, ತಾವು ನಕ್ಷತ್ರಗಳಲ್ಲಿ ಭವಿಷ್ಯವನ್ನು ಹುಡುಕುತ್ತೀರಿ. ಆದರೆ ತಮ್ಮ ಕಾಲ ಬುಡದಲ್ಲಿದ್ದ ಗುಂಡಿಯನ್ನು ಕಾಣದೆ ಹೋದಿರಿ. ತಮ್ಮ ಮುಂದಿರುವುದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ, ಭವಿಷ್ಯವನ್ನು ಅದರ ಪಾಡಿಗೆ ಬಿಟ್ಟುಬಿಡಿ ಸ್ವಾಮಿ’ ಎಂದರು.

ಭೂತವು ಕಳೆದುಹೋಯಿತು, ಭವಿಷ್ಯವು ಇನ್ನೂ ಬಂದಿಲ್ಲ, ಈಗಿರುವುದು ವರ್ತಮಾನ. ಕಳೆದುಹೋದ ಸಮಯದ ಬಗ್ಗೆ ಚಿಂತಿಸುವುದು ಮತ್ತು ಕಾಣದಿರುವ ಭವಿಷ್ಯದ ಬಗ್ಗೆ ವ್ಯಥೆಪಡುವುದು ಎರಡೂ ವ್ಯರ್ಥ. ಚಿಂತಿಸಿ, ಚಿಂತಿಸಿ, ನಿಮ್ಮ ಜೀವನಾವಧಿಯನ್ನು ಕೊಂಚ ಕಾಲಕ್ಕಾದರೂ ದೀರ್ಘ ಮಾಡಲು ನಿಮ್ಮಲ್ಲಿ ಯಾರಿಂದಾದೀತು? ಎಂದು ಪ್ರಶ್ನಿಸುತ್ತದೆ. ಬೈಬಲ್ ಶ್ರೀಗ್ರಂಥ. ಜೊತೆಗೆ, ನಾಳೆಯ ಚಿಂತೆ ನಿಮಗೆ ಬೇಡ. ನಾಳೆಯ ಚಿಂತೆಯು ನಾಳೆಗೇ ಇರಲಿ, ಇಂದಿನ ಪಾಡೇ ಇಂದಿಗೆ ಸಾಕು ಎಂಬ ಕಿವಿಮಾತನ್ನು ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT