‘ಆನಂದದಿಂದ ಬದುಕಿದ ಮನೆಯೇ ಸ್ವರ್ಗ’

7
ಬಾದಾಮಿಯಲ್ಲಿ ‘ಸ್ವರ್ಗಲೋಕವೆಂಬುದು ಬೇರಿಲ್ಲ ಕಾಣಿರೋ’ ಅನುಭಾವ ಪ್ರವಚನ

‘ಆನಂದದಿಂದ ಬದುಕಿದ ಮನೆಯೇ ಸ್ವರ್ಗ’

Published:
Updated:
Deccan Herald

ಬಾದಾಮಿ: ‘ಸ್ವರ್ಗ, ನರಕಗಳು ಭೂಲೋಕದ ನಮ್ಮ ಬದುಕಿನಲ್ಲಿಯೇ ಬಂದು ಹೋಗುತ್ತವೆ. ಸ್ವರ್ಗವನ್ನು ನಮ್ಮ ಬದುಕಿನಲ್ಲಿಯೇ ಕಂಡುಕೊಳ್ಳಬೇಕು. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಹೇಳಿದ 12ನೇ ಶತಮಾನದ ಶರಣ ಬಸವಣ್ಣನವರ ವಚನ ನಮಗೆ ಆದರ್ಶವಾಗಬೇಕು’ ಎಂದು ಬಾಳೇಹೊಸೂರಿನ ದಿಂಗಾಲೇಶ್ವರ ಶ್ರೀ ಹೇಳಿದರು.

ಇಲ್ಲಿನ ಶಾಖಾ ಶಿವಯೋಗಮಂದಿರ ಸಂಸ್ಥೆಯ ಆವರಣದಲ್ಲಿ ಶಿವಯೋಗಮಂದಿರದ ಭಕ್ತರು, ಅಕ್ಕನ ಬಳಗ ಮತ್ತು ಪ್ರವಚನ ಸೇವಾ ಸಮಿತಿ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸ್ವರ್ಗಲೋಕವೆಂಬುದು ಬೇರಿಲ್ಲ ಕಾಣಿರೋ’ ಎಂಬ ಅನುಭಾವ ಪ್ರವಚನವನ್ನು ಅವರು ನೀಡಿದರು.

‘ಪುರಾಣ ಪುಣ್ಯಕಥೆಗಳಲ್ಲಿ ಸ್ವರ್ಗದಿಂದ ಕಥೆಗಳು ಆರಂಭವಾಗುತ್ತದೆ. ಸ್ವರ್ಗದ ವರ್ಣನೆ ಅದ್ಭುತವಾಗಿರುತ್ತದೆ. ಸುಖಕ್ಕೆ ಮೀಸಲು ಸ್ವರ್ಗ. ಪಾಪಕ್ಕೆ ಮೀಸಲು ನರಕ. ಪಾಪ ಮಾಡಿದವ ನರಕಕ್ಕೆ ಹೋಗುತ್ತಾನೆ ಎಂಬ ಕಲ್ಪನೆ ಕಥೆಗಳಲ್ಲಿ ಬರುತ್ತವೆ’ ಎಂದು ಪೌರಾಣಿಕ ಸನ್ನಿವೇಶಗಳನ್ನು ತಿಳಿಸಿದರು.

‘ಮನೆಯಲ್ಲಿ ಕುಟುಂಬದ ಎಲ್ಲ ಸದಸ್ಯರು ಆನಂದದಿಂದ ಬದುಕಿ ಮನೆಯನ್ನೇ ಸ್ವರ್ಗವನ್ನಾಗಿ ಮಾಡಿಕೊಳ್ಳಬೇಕು. ನಿಮ್ಮ ಮಕ್ಕಳು ನಿಮ್ಮನ್ನು ನೋಡಿ ಆಚಾರವಂತರಾಗಬೇಕು. ಮಕ್ಕಳಿಗೆ ಅತಿಯಾದ ಸ್ವಾತಂತ್ರ್ಯ ಕೊಟ್ಟರೆ ತೊಂದರೆಯಾಗುವುದು. ಮಕ್ಕಳನ್ನು ಕಷ್ಟದಲ್ಲಿ ಬೆಳೆಸಬೇಕು. ನೀವು ಮಕ್ಕಳಿಗೆ ಕೊಡುವ ಸುಖ ನಿಮಗೆ ನರಕವಾಗಬಹುದು. ಕಷ್ಟದಿಂದ ಸ್ವರ್ಗದ ಅನುಭವವಾಗುವುದು’ ಎಂದು ಹೇಳಿದರು.

‘ಅನುಭಾವದ ಮಾತುಗಳಿಂದ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಿ. ಶಿವಶರಣೆ ಅಕ್ಕಮಹಾದೇವಿ ಬದುಕಿನಲ್ಲಿ ಅನೇಕ ಕಷ್ಟಗಳನ್ನು ಸಹಿಸಿಕೊಂಡು ಶ್ರೇಷ್ಠ ಶರಣೆಯಾದದಳು. ಒಳ್ಳೆಯ ಆಚಾರ ವಿಚಾರಗಳನ್ನು ಹೊಂದಿ’ ಎಂದು ಶ್ರೀಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷ ಸಂಗನಬಸವ ಶ್ರೀ ಆಶೀರ್ವಚನ ನೀಡಿದರು.

ಶಿವಲಿಂಗ ಶ್ರೀ, ಗದಿಗೇಶ್ವರ ಶ್ರೀ, ಮುಪ್ಪಿನ ಬಸವಲಿಂಗ ಶ್ರೀ, ಕೊಟ್ಟೂರ ಶ್ರೀ, ಜಯದೇವ ಶ್ರೀ ವೇದಿಕೆಯಲ್ಲಿ ಇದ್ದರು. ಎಸ್.ಎಂ. ಹಿರೇಮಠ ಸ್ವಾಗತಿಸಿದರು. ಇಷ್ಟಲಿಂಗ ಶಿರಸಿ ನಿರೂಪಿಸಿದರು. ಉಜ್ಜಲ ಬಸರಿ ವಂದಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !