ಇವರು ನಮ್ಮೂರಿನ ’ಮಾರ್ಕೆಟ್ ಮುತ್ತಣ್ಣ’

7
ವಾರದ ಸಂತೆಗಳೇ ಕರ್ಮಭೂಮಿ, ಗ್ರಾಹಕ ಸ್ನೇಹಿ ವಹಿವಾಟು

ಇವರು ನಮ್ಮೂರಿನ ’ಮಾರ್ಕೆಟ್ ಮುತ್ತಣ್ಣ’

Published:
Updated:
Deccan Herald

ಬಾಗಲಕೋಟೆ: ಮುತ್ತಣ್ಣ, ಪಾವ್ ಕಿಲೊ ಹೆಸರು ಬ್ಯಾಳಿ, ದೀಡ್ ಕಿಲೊ ತೊಗರಿ, ರವಾ, ಪುಟಾಣಿ, ಸಾಬುದಾನಿ, ಜ್ವಾಳ, ಎಣ್ಣಿ, ಒಂದ್ ಪಾಕಿಟ್ ಅಕ್ಕಿ... 

ಹೀಗೆ ಸುತ್ತಲೂ ಚೀಲ ಹಿಡಿದು ನಿಂತವರಿಂದ ಬೇಡಿಕೆಯ ಪಟ್ಟಿ ಕಿವಿಗಪ್ಪಳಿಸುತ್ತಿದ್ದರೂ, ಶಾಂತಚಿತ್ತದಿಂದ ಎಲ್ಲರ ದೇಖರೇಕಿ ಮಾಡುವ ಕೆರೂರಿನ ಮುತ್ತಪ್ಪ ಶೆಟ್ಟರ್, ಇಲ್ಲಿನ ನವನಗರದ ಸಂಡೇ ಮಾರ್ಕೆಟ್, ಗುರುವಾರದ ಸಂತಿಗೆ ಹೋಗುವ ಗ್ರಾಹಕರ ಪಾಲಿಗೆ ಮಾತ್ರ ನೆಚ್ಚಿನ ಮುತ್ತಣ್ಣ..

ಡಿಗ್ರಿ ಓದಿದ್ದರೂ ಬಾಲ್ಯದಲ್ಲಿ ಅವ್ವನೊಟ್ಟಿಗೆ ಸಂತಿಗೆ ಕಿರಾಣಿ ಸಾಮಾನು ಮಾರಾಟಕ್ಕೆ ಹೋಗುತ್ತಿದ್ದ ಅನುಭವವನ್ನೇ ಜೀವನಕ್ಕೆ  ಊರುಗೋಲು ಆಗಿ ಮುತ್ತಣ್ಣ ಬಳಸಿಕೊಂಡಿದ್ದಾರೆ. ಅದೇ ಕಾಯಕ ಮುಂದುವರೆಸಿ, ನವನಗರ, ನರಗುಂದ, ಕೆರೂರಿನ ವಾರದ ಸಂತೆಗಳನ್ನು ಕರ್ಮಭೂಮಿಯಾಗಿಸಿಕೊಂಡಿದ್ದಾರೆ.

ಉಪ್ಪು, ಖಾರದಿಪುಡಿ, ಎಣ್ಣೆ, ಬೇಳೆ, ಬೆಲ್ಲ, ಅಕ್ಕಿಯಾದಿಯಾಗಿ ನಿತ್ಯ ಬಳಕೆಯ ಎಲ್ಲ ಸಾಮಗ್ರಿಗಳು ಮುತ್ತಣ್ಣನ ಗುಡಾರದ ಆಸರೆಯ ಅಂಗಡಿಯ ಕೆಳಗೆ ಕಾಣಸಿಗುತ್ತವೆ. ಹೊರಗೆ ದೊಡ್ಡ ದೊಡ್ಡ ಅಂಗಡಿಗಳಲ್ಲಿ ಸಿಗುವುದಕ್ಕಿಂತ ಕಡಿಮೆ ದರದಲ್ಲಿ ಹಾಗೂ ಅಷ್ಟೇ ಗುಣಮಟ್ಟದಲ್ಲಿ ಇಲ್ಲಿ ಕಿರಾಣಿ ಸಾಮಗ್ರಿ ಸಿಗುವ ಕಾರಣ, ಮುತ್ತಣ್ಣನ ಅಂಗಡಿ ಗ್ರಾಹಕರ ಪಾಲಿಗೆ ಅಚ್ಚುಮೆಚ್ಚು.

ಮನೆತನದ ಬಳುವಳಿ: ಮುತ್ತಪ್ಪ ಶೆಟ್ಟರ್‌ಗೆ ಮನೆತನದಿಂದ ಬಳುವಳಿಯಾಗಿ ಬಂದದ್ದು, ಜಂಟಿ ಒಡೆತನದಲ್ಲಿರುವ ಒಂದೆಕರೆ ಭೂಮಿ ಹಾಗೂ ಬಡತನ ಮಾತ್ರ. ಅಜ್ಜ ಅಡಿವೆಪ್ಪ ಕೆರೂರು ಹಾಗೂ ಕೊಣ್ಣೂರು ಸಂತೆಗಳಿಗೆ ವ್ಯಾಪಾರಕ್ಕೆ ಹೋಗುತ್ತಿದ್ದರೂ, ಅದು ಮನೆಯ ಖರ್ಚು ನೀಗಿಸುತ್ತಿರಲಿಲ್ಲ. ಆದರೆ ಅವ್ವ ಗಿರಿಜವ್ವ ಕೆರೂರು, ಕೊಣ್ಣೂರಿನ ಜೊತೆಗೆ ಶಿರೋಳ, ಬಾಗಲಕೋಟೆ ಸಂತೆಯ ವಹಿವಾಟಿಗೂ ಮುನ್ನುಡಿ ಬರೆದರು. 10 ವರ್ಷದ ಮುತ್ತಣ್ಣನನ್ನು ಶಿರೋಳದ ಸಂತೆಗೆ ಕಳಿಸತೊಡಗಿದರು. ಅಲ್ಲಿ ವಹಿವಾಟು ಮುಗಿಸಿಕೊಂಡು ಸಂಜೆ ಬಸ್ ತಪ್ಪಿ, ಕತ್ತಲಲ್ಲಿ 6 ಕಿ.ಮೀ ನಡೆದುಕೊಂಡು ಕೊಣ್ಣೂರಿಗೆ ಬಂದು ಅಲ್ಲಿಂದ ಕೆರೂರಿನ ಬಸ್ ಹಿಡಿಯುತ್ತಿದ್ದ ದಿನಗಳನ್ನು ಮುತ್ತಣ್ಣ ನೆನಪಿಸಿಕೊಳ್ಳುತ್ತಾರೆ.

ಮುಂದೆ ನವನಗದ ಸಂಡೇ ಮಾರ್ಕೆಟ್ ಆರಂಭವಾದ ನಂತರ ವ್ಯಾಪಾರಕ್ಕೆ ಒಂದಷ್ಟು ಮೆರುಗು ತಂದಿತು. ಇಲ್ಲಿನ ಬಸವೇಶ್ವರ ಕಲಾ ಕಾಲೇಜಿನಲ್ಲಿ 1999ರಲ್ಲಿ ಪದವಿ ಮುಗಿಸಿರುವ ಮುತ್ತಣ್ಣ, ಆಗಲೂ ಸಂತೆಯಲ್ಲಿ ವ್ಯಾಪಾರ ಮಾಡುತ್ತಲೇ ಓದು ಮುಗಿಸಿದ್ದಾಗಿ ಹೇಳುತ್ತಾರೆ.

ಸಂಡೇ ಮಾರ್ಕೆಟ್‌ನಲ್ಲಿ ಅತಿ ಹೆಚ್ಚು ವಹಿವಾಟು ನಡೆಸುವ ಶ್ರೇಯ ಹೊಂದಿರುವ ಮುತ್ತಣ್ಣನಿಗೆ ಈಗಲೂ ಗಿರಿಜವ್ವ ಬೆನ್ನೆಲುಬಾಗಿದ್ದಾರೆ. ವೃದ್ಧಾಪ್ಯವನ್ನು ಮರೆತು ಗ್ರಾಹಕರಿಗೆ ಕಿರಾಣಿ ಸಾಮಾನು ಕಟ್ಟಿಕೊಡುತ್ತಾರೆ.  ಸಂತೆ ವಹಿವಾಟಿನ ದಿನ ತಮ್ಮೂರಿನ ನಾಲ್ಕು ಜನರಿಗೆ ಕೆಲಸ ಕೊಡುವ ಮುತ್ತಣ್ಣ, ಅವರಿಗೆ ತಲಾ ₹400 ಭತ್ಯೆ ಹಾಗೂ ಊಟ ಕೊಡುತ್ತಾರೆ.

ಕ್ಯಾಲ್ಕುಲೇಟ್ ಇಲ್ಲದೇ ಕಟ್ಟಿದ ಪೊಟ್ಟಣಗಳನ್ನು ಗ್ರಾಹಕರ ಬ್ಯಾಗ್‌ಗೆ ಹಾಕುತ್ತಲೇ ಬಿಲ್ ಹೇಳುವ ಕಲೆ 20 ವರ್ಷಗಳ ಅನುಭವದಿಂದ ಮುತ್ತಣ್ಣನಿಗೆ ಸಿದ್ಧಿಸಿದೆ. ದುಡಿದು ತಿನ್ನಬೇಕು, ಗ್ರಾಹಕರನ್ನು ಗೌರವಿಸಬೇಕು ಎಂಬ ಭಾವ, ವ್ಯಾಪಾರದಲ್ಲಿ ಯಶಸ್ಸಿನತ್ತ ಸಾಗಲು ನೆರವಾಗಿದೆ. ಮುತ್ತಣ್ಣನ ಸಂಪರ್ಕ ಸಂಖ್ಯೆ: 8123605096

ಹಳ್ಳಿಗಳಲ್ಲಿ ರೈತರಿಂದ ನೇರವಾಗಿ ಖರೀದಿಸುವೆ. ಜೊತೆಗೆ ಹುಬ್ಬಳ್ಳಿಯ ಸಗಟು ಮಾರುಕಟ್ಟೆಯಲ್ಲೂ ಕೊಂಡು ತರುವೆ. ಇದರಿಂದ ಗ್ರಾಹಕರ ಕೈಗೆಟಕುವ ಬೆಲೆಗೆ ಕೊಡಲು ಸಾಧ್ಯವಾಗಿದೆ. ಹೆಚ್ಚು ಲಾಭದ ಆಸೆ ಇಲ್ಲ. ಅದೇ ಯಶಸ್ಸಿನ ಗುಟ್ಟು
- ಮುತ್ತಪ್ಪ ಶೆಟ್ಟರ್, ಕೆರೂರು

ನಮ್ಮಂತಹ ಮಧ್ಯಮ ವರ್ಗದ ಗ್ರಾಹಕರಿಗೆ ಅನುಕೂಲವಾಗಿದೆ. ಇಲ್ಲಿ ಉತ್ತಮ ಗುಣಮಟ್ಟದ ಕಿರಾಣಿ ಸಾಮಗ್ರಿ ಸಿಗುವ ಜೊತೆಗೆ ಬೇರೆ ಕಡೆಗಿಂತ ಶೇ 25ರಷ್ಟು ಖರ್ಚು ಉಳಿತಾಯವಾಗುತ್ತಿದೆ
- ಶೋಭಾ ದುತ್ತರಗಿ, ಗ್ರಾಹಕಿ, ನವನಗರ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !