ಹೋಳಿ ಹಬ್ಬಕ್ಕೆ ಫೈಬರ್ ಹಲಗಿಗಳಿಗೆ ಬಹು ಬೇಡಿಕೆ

ಶನಿವಾರ, ಮಾರ್ಚ್ 23, 2019
34 °C

ಹೋಳಿ ಹಬ್ಬಕ್ಕೆ ಫೈಬರ್ ಹಲಗಿಗಳಿಗೆ ಬಹು ಬೇಡಿಕೆ

Published:
Updated:
Prajavani

ಕೆರೂರ: ಹೋಳಿ ಹಬ್ಬದ ಸಂಭ್ರಮಕ್ಕೆ ‘ನಾದ'ದ ಮೂಲಕ ವಿಶೇಷ ಮೆರುಗು ನೀಡುವ ಚರ್ಮದ ಹಲಗಿಗಳು ಮೂಲೆಗುಂಪಾಗುತ್ತಿದ್ದರೆ ಆಧುನಿಕತೆ ಸೋಕಿಸಿಕೊಂಡು ಹುಡುಗರನ್ನು ಆಕರ್ಷಿಸುವ ಫೈಬರ್ ಹಲಗಿಗಳಿಗೆ ಸದ್ಯ ಎಲ್ಲಿಲ್ಲದ ಬೇಡಿಕೆ. ದೊಡ್ಡವರಿಂದ ಹಿಡಿದು ಚಿಕ್ಕಮಕ್ಕಳವರೆಗೂ ಫೈಬರ್‌ ಹಲಗಿಗಳೇ ಬೇಕು.

ಕೆರೂರ ಸಂತೆ ದಿನ ಮಂಗಳವಾರ ಚರ್ಮದ ಹಲಗಿಗಳನ್ನು ಕೇಳುವವರೇ ಇರಲಿಲ್ಲ. ಪ್ರಮುಖ ಮಾರ್ಕೆಟ್ ಬಳಿಯ ಪೊಲೀಸ್ ಸ್ಟೇಶನ್ ಎದುರು ಬೀಡುಬಿಟ್ಟಿರುವ ಹಲಗಿ ಮಾರಾಟಗಾರರ ಬಳಿ ಬಹುತೇಕ ಗ್ರಾಹಕರು ಫೈಬರ್ ಹಲಗಿಗಳನ್ನು ಕೊಳ್ಳಲು ಮುಗಿಬೀಳುತ್ತಿದ್ದ ದೃಶ್ಯ ಕಂಡು ಬಂದಿತು.

ಹೋಳಿ ಹಬ್ಬದಲ್ಲಿ ಮಕ್ಕಳ ಬೇಡಿಕೆ ಪೂರೈಸಲು ಕಡಿಮೆ ದರದಲ್ಲಿ ದೊರೆಯುವ ಚರ್ಮದ ಹಲಗೆಗಳನ್ನು ಖರೀದಿಸಲು ಮುಂದಾದರೆ, ಮಕ್ಕಳು ಮಾತ್ರ ಹೆಚ್ಚು ಶಬ್ದ ಹೊರಡಿಸಿ ಆಕರ್ಷಿಸುವ ಫೈಬರ್ ಹಲಗೆಗಳೇ ಬೇಕೆಂದು ಹಠ ಹಿಡಿದು ರಾಗ ತೆಗೆದರು.

ಚರ್ಮದ ವಿಶೇಷತೆ:

ಫೈಬರ್‌ಗೆ ಹೋಲಿಸಿದರೆ ಚರ್ಮದ ಹಲಗಿಗಳು ಸಾಕಷ್ಟು ಕಡಿಮೆ ದರದಲ್ಲಿ ದೊರೆಯುತ್ತವೆ. ಜೊತೆಗೆ ಬಾಳಿಕೆಯೂ ಹೆಚ್ಚು. ಒಮ್ಮೆ ಕೊಂಡು ಸರಿಯಾಗಿ ಬಳಸಿದರೆ ಎರಡ್ಮೂರು ವರ್ಷ ಬಾಳಿಕೆ ಬರಲಿದೆ ಎಂಬುದು ಹಲಗಿ ತಯಾರಕರ ಮಾತು. ಅಲ್ಲದೇ ಬೆಂಕಿಗೆ ಕಾಯಿಸಿದಷ್ಟು ಹೆಚ್ಚು ನಾದ ಹೊಮ್ಮಿಸುವ ವಿಶೇಷತೆ ಚರ್ಮದ ಹಲಗಿಗಳದ್ದು.

ವಿನ್ಯಾಸದ ಆಕರ್ಷಣೆ:

ಫೈಬರ್ ಹಾಳೆಯಿಂದ ನಿರ್ಮಿಸಿದ ಹಲಗಿಗಳು ಬಲು ಸೂಕ್ಷ್ಮ. ಅವನ್ನು ಸಾಕಷ್ಟು ಎಚ್ಚರಿಕೆಯಿಂದಲೇ ಬಳಸಬೇಕು. ಇಲ್ಲದಿದ್ದರೆ ಬೇಗನೆ ಹಾಳಾಗುತ್ತವೆ ಹಾಗೂ ಇವನ್ನು ಬೆಂಕಿಯತ್ತ ಸೋಕಿಸುವಂತಿಲ್ಲ. ಹೊಸ ವಿನ್ಯಾಸದಿಂದಷ್ಟೇ ಫೈಬರ್ ಹಲಗಿಗಳು ಗ್ರಾಹರನ್ನು ಆಕರ್ಷಿಸುತ್ತವೆ ವಿನಃ ಬಾಳಿಕೆ ದೃಷ್ಟಿಯಿಂದ ನೋಡಿದರೆ ಚರ್ಮದ ಹಲಗಿಗಳು ಹೋಳಿ ಹಬ್ಬಕ್ಕೆ ಉತ್ತಮ ಸರಕು ಎನಿಸಲಿದೆ.

ಫೈಬರ್‌ ಹಲಗಿಗಳ ವಿನ್ಯಾಸಕ್ಕೆ ಮಾರು ಹೋಗುವ ನಗರ ಪ್ರದೇಶದವರನ್ನು ಹೊರತುಪಡಿಸಿದರೆ, ಗ್ರಾಮೀಣ ಭಾಗದ ಹಳ್ಳಿಗರು ಈಗಲೂ ಚರ್ಮದ ಹಲಗಿಗಳನ್ನು ಬಳಸುವುದು ರೂಢಿಯಲ್ಲಿದೆ ಎನ್ನುತ್ತಾರೆ’ ಬಾಗಲಕೋಟೆಯಿಂದ ನೂರಾರು ಹಲಗಿಗಳನ್ನು ಮಾರಾಟಕ್ಕೆ ತಂದಿದ್ದ ಭೀಮಸಿ.

‘ಚರ್ಮದ ಹಲಗಿಗಳ ವಹಿವಾಟು ನಮಗೂ ಸಹ ಹೆಚ್ಚು ಲಾಭದಾಯಕ. ಆದರೆ ಫೈಬರ್ ಹಲಗಿಗಳ ಮಾರಾಟದಿಂದ ಕಡಿಮೆ ಆದಾಯವಿದ್ದು ಇವುಗಳ ತಯಾರಿಕೆಯನ್ನೇ ನಮ್ಮ ಕುಟುಂಬಗಳು ಈ ಅವಿಷ್ಕಾರದ ಯುಗ
ದಲ್ಲಿ ಸಂಕಷ್ಟಕ್ಕೀಡಾಗಿವೆ. ಫೈಬರ್ ಹಲಗಿಗಳಿಗೆ ಬೇಡಿಕೆ ಹೆಚ್ಚಾದಷ್ಟು ನಮ್ಮ ಉದ್ಯಮ ಪಾತಾಳ ಸೇರುತ್ತಿದೆ’ ಎನ್ನುತ್ತಾರೆ ಅವರು.

‘ಮಕ್ಕಳಿಗೆ ಎಷ್ಟೇ ಹೇಳಿದರೂ ಚರ್ಮದ ಹಲಗಿಗಳು ಬೇಡವೆಂದು ಹಠ ಮಾಡುತ್ತವೆ. ಫೈಬರ್ ಹಲಗಿ ಮೋಡಿ ಮಾಡಿದ್ದು ಅವೇ ಬೇಕೆಂದು ರಾಗ ತೆಗೆಯುವ ಕಾರಣ ಅನಿವಾರ್ಯತೆಯಿಂದ ಫೈಬರ್ ಹಲಗಿ ಖರೀದಿಸಬೇಕಿದೆ’
ಎಂದು ಗ್ರಾಹಕ ಶಿವಾನಂದ ಯಂಡಿಗೇರಿ ಹೇಳಿದರು.

‘ಹೆಚ್ಚಾಗಿ ಸವರ್ಣೀಯರು ತಮ್ಮ ಮನೆಗಳಲ್ಲಿ ಪಾಲಿಸುವ ಕಟ್ಟುಪಾಡುಗಳಿಂದಲೂ ಚರ್ಮದ ಹಲಗಿಗಳು ಬೇಡಿಕೆ ಕಳೆದುಕೊಳ್ಳಲು ಕಾರಣವಾಗಿವೆ. ಎಂಟತ್ತು ದಿನಗಳ ಈ ಹಬ್ಬದ ಭರಾಟೆಯಲ್ಲಿ ಫೈಬರ್ ಹಲಗಿಗಳದೇ ಹೆಚ್ಚು ಪಾರುಪತ್ಯ. ಅವುಗಳ ನಾದ ಊರಿನೆಲ್ಲೆಡೆ ಕೇಳುತ್ತದೆ. ನೋಡಲು ಸಹ ಭಿನ್ನ ಎನ್ನುತ್ತಾರೆ’ ರಾಜಪ್ಪ ಹೊಸಮನಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !