ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರ ಬೆಳೆಯಿಂದ ಆದಾಯ ಹೆಚ್ಚಳ: ನಿರಾಣಿ

ಎಂಟು ಮಂದಿ ರೈತರಿಗೆ ಫಲಶ್ರೇಷ್ಠ ಪ್ರಶಸ್ತಿ ಪ್ರದಾನ
Last Updated 25 ಡಿಸೆಂಬರ್ 2021, 13:25 IST
ಅಕ್ಷರ ಗಾತ್ರ

ಬಾಗಲಕೋಟೆ: ’ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ವಿಶ್ರ ಬೆಳೆ ಬೆಳೆಯುವುದು ಅಗತ್ಯ‘ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ ಮೂರು ದಿನಗಳ ತೋಟಗಾರಿಕೆ ಮೇಳದಲ್ಲಿ ಫಲಶ್ರೇಷ್ಠ ರೈತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಮಣ್ಣಿನ ಗುಣ, ಹವಾಮಾನಕ್ಕೆ ತಕ್ಕಂತೆ ವಿವಿಧ ಬೆಳೆ ಬೆಳೆಯುವುದರಿಂದ ತಮ್ಮ ಆದಾಯ ಹೆಚ್ಚಿಸುವ ಜೊತೆಗೆ ಜಿಡಿಪಿ ಸಹ ಹೆಚ್ಚಳವಾಗುತ್ತದೆ. ರೈತರು ಮಿಶ್ರ ಬೆಳೆ ಬೆಳೆಯಲು ಮುಂದಾಗಬೇಕು ಎಂದರು.

ರೈತರು ಕೇವಲ ಜೋಳ, ಸಜ್ಜೆ, ಮೆಕ್ಕೆಜೋಳ ಬೆಳೆಗಳಿಗೆ ಮಾತ್ರ ಸೀಮಿತವಾದರೆ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಾಗುವುದಿಲ್ಲ. ತೋಟಗಾರಿಕೆ ಬೆಳೆ ಬೆಳೆದಾಗ ಪ್ರತಿ ಎಕರೆಗೆ ನಿರ್ದಿಷ್ಟ ಲಾಭ ಪಡೆಯಲು ಸಾಧ್ಯವಾಗುತ್ತದೆ. ತೋಟಗಾರಿಕೆ ಬೆಳೆಗಳಲ್ಲಿ ಪ್ರತಿ ಎಕರೆಗೆ ₹1 ಲಕ್ಷದವರೆಗೂ ಲಾಭ ಪಡೆಯಬಹುದಾಗಿದೆ. ಪಾಲಿಹೌಸ್‌ನಲ್ಲಿ ಬೆಳೆದರೆ ಎಕರೆಗೆ ₹ 1.5 ಲಕ್ಷ ಲಾಭ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯವು ರೈತರಿಗೆ ವಿವಿಧ ತೋಟಗಾರಿಕೆ ಬೆಳೆ ಹಾಗೂ ಮಾರುಕಟ್ಟೆಯ ಬಗ್ಗೆ ಮಾಹಿತಿ ಒದಗಿಸಿದಲ್ಲಿ ರೈತ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ನೀರಾವರಿ ಕ್ಷೇತ್ರ ಹೆಚ್ಚಿಸಲು ಅನೇಕ ಯೋಜನೆಗಳ ರೂಪಿಸಲಾಗುತ್ತಿದೆ. ಬೀಳಗಿ ಮತಕ್ಷೇತ್ರವನ್ನು ಮುಂದಿನ ಎರಡು ವರ್ಷದಲ್ಲಿ ಸಂಪೂರ್ಣ ನೀರಾವರಿ ಕ್ಷೇತ್ರವನ್ನಾಗಿ ಮಾಡಲಾಗುತ್ತಿದೆ. ರೈತರಿಗೆ ಉತ್ತಮ ಗುಣಮಟ್ಟದ ವಿದ್ಯುತ್, ನೀರು ಪೂರೈಸುವ ಮೂಲಕ ರೈತರ ಆರ್ಥಿಕ ಮಟ್ಟ ಹೆಚ್ಚಿಸುವ ಕಾರ್ಯ ಮಾಡಲಾಗುತ್ತಿದೆ. ಕೆರೆ ತುಂಬಿಸುವುದು, ಕೊಳವೆ ಬಾವಿಗಳನ್ನು ಪುನಃ ರಿಚಾರ್ಜ್ ಮಾಡುವತ್ತ ಗಮನಹರಿಸಲಾಗುತ್ತಿದೆ ಎಂದರು.

ಕೃಷಿ ಸಚಿವ ಬಿ.ಸಿ.ಪಾಟೀಲ ವರ್ಚ್ಯುವಲ್ ವ್ಯವಸ್ಥೆ ಮೂಲಕ ಮಾತನಾಡಿ, ಜಿಲ್ಲೆಯ ಫಲಶ್ರೇಷ್ಟ ರೈತ ಅಥವಾ ರೈತ ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡುವ ಮೂಲಕ ಕೃಷಿಕರಿಗೆ ಸಾಮಾಜಿಕ ಮಾನ್ಯತೆ ಹಾಗೂ ಪ್ರಗತಿಯ ದಿಕ್ಕಿನತ್ತ ಸಾಗಲು ಉತ್ತೇಜನ ನೀಡುತ್ತಿರುವುದು ಸಂತೋಷದ ವಿಷಯ ಎಂದು ತಿಳಿಸಿದರು.

ಪ್ರಸಕ್ತ ವರ್ಷವನ್ನು ಅಂತರರಾಷ್ಟ್ರೀಯ ಹಣ್ಣು ಮತ್ತು ತರಕಾರಿಗಳ ವರ್ಷವೆಂದು ವಿಶ್ವ ಸಂಸ್ಥೆ ಘೋಷಿಸಿದೆ. ಈ ಸಂದರ್ಭದಲ್ಲಿ ತೋಟಗಾರಿಕೆ ಮೇಳ ಆಯೋಜಿಸಿರುವುದು ಬಹಳ ಸಮಂಜಸವಾಗಿದೆ. ರೈತ ಸಮುದಾಯಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ವಿವಿಧ ವಿಷಯಗಳ ಮೇಲೆ ತಾಂತ್ರಿಕಗೋಷ್ಠಿಯಲ್ಲಿ ರೈತರು, ರೈತ ಮಹಿಳೆಯರು ಪಾಲ್ಗೊಂಡು ಇದರ ಪ್ರಯೋಜನ ಪಡೆಯಬೇಕು. ವಿಶ್ವವಿದ್ಯಾಲಯಕ್ಕೆ ಶಿಕ್ಷಣ, ಸಂಶೋಧನೆ, ವಿಸ್ತರಣೆ ಹಾಗೂ ಮೂಲಸೌಕರ್ಯಗಳ ಅಭಿವೃದ್ದಿಗೆ ಅವಶ್ಯವಿರುವ ಎಲ್ಲ ರೀತಿಯ ಸಹಾಯ, ಅನುದಾನ ಒದಗಿಸಿಕೊಡುವಂತೆ ಮುಖ್ಯಮಂತ್ರಿಗೆ ಕೋರಲಾಗುತ್ತಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ಆರ್.ಬಿ.ತಿಮ್ಮಾಪುರ, ಪಿ.ಎಚ್.ಪೂಜಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT