ಬಾಗಲಕೋಟೆ: ‘ಲಿಂಗಾಯತರು ಸೇರಿದಂತೆ ವಿವಿಧ ಸಮುದಾಯದ ಮತಗಳು ಧ್ರುವೀಕರಣ ಬಿಜೆಪಿಗೆ ನಾನು ಬಂದ ಮೇಲೆ ಆಯಿತು. ಅದರ ಪರಿಣಾಮ ಪಿ.ಎಚ್.ಪೂಜಾರ ಎರಡು ಬಾರಿ ಶಾಸಕರಾಗಿದ್ದರು’ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘1996ರಲ್ಲಿ ಲೋಕಸಭೆಗೆ ನಾನು ಸ್ಪರ್ಧಿಸಿದಾಗ ಬಾಗಲಕೋಟೆ ಕ್ಷೇತ್ರದಲ್ಲಿ ಹೆಚ್ಚು ಮತಗಳು ಬಂದಿದ್ದವು. ಆಗಲೇ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ, ಬಸವರಾಜ ಪಾಟೀಲ ಸೇಡಂ ಅವರು ಒಂದು ಬಾರಿ ಬಿಟ್ಟುಕೊಡುವಂತೆ ಕೋರಿದ್ದರಿಂದ ಸುಮ್ಮನಾಗಿದ್ದೆ. ಮುಂದೆ ಹೈಕಮಾಂಡ್ ನನಗೆ ಮಣೆ ಹಾಕಿತು’ ಎಂದು ತಾವು ಟಿಕೆಟ್ ಪಡೆದ ಸಂದರ್ಭ ವಿವರಿಸಿದರು.
‘ಬಿ.ವಿ.ವಿ ಸಂಘದಲ್ಲಿ ಮೂಗು ತೂರಿಸುವುದಿಲ್ಲ ಎನ್ನುವವರು, ಈ ಹಿಂದೆ ಸಂಘದ ವಿರುದ್ಧ ಪಿತೂರಿ ನಡೆಸುತ್ತಿದ್ದ ಟಿ.ಎಂ. ಹುಂಡೇಕಾರಗೆ ಪ್ರಚೋದಿಸುತ್ತಿದ್ದರು’ ಎಂದು ಆರೋಪಿಸಿದರು.
‘ಶಾಸಕನಾಗಿದ್ದ ನಗರಸಭೆ ಅಧ್ಯಕ್ಷರ ಕೋರಿಕೆ ಮೇರೆಗೆ ಸಾಮಾನ್ಯ ಸಭೆಗೆ ಹಾಜರಾಗುತ್ತಿದ್ದೆ. ನಾನು ಇದ್ದಿದ್ದರಿಂದಲೇ ವಿಷಯಾಧಾರಿತ ಚರ್ಚೆ ನಡೆಯುತಿತ್ತು ಎಂಬುದು ಸದಸ್ಯರ ಅಭಿಪ್ರಾಯವಾಗಿತ್ತು. ಸಂಘದ ಕಾರ್ಯಾಧ್ಯಕ್ಷ ಹುದ್ದೆ ತ್ಯಜಿಸುವುದಾಗಿ ಹೇಳಿದಾಗ ಸದಸ್ಯರು ಬಿಟ್ಟುಕೊಟ್ಟಿಲ್ಲ. ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ರಾಜಕೀಯದಲ್ಲಿದ್ದಾರೆ. ನನ್ನನ್ನು ಸಂಘ ಬಿಡುವಂತೆ ಹೇಳುವುದರ ಹಿಂದಿನ ಉದ್ದೇಶ ಏನು’ ಎಂದು ಪ್ರಶ್ನಿಸಿದರು.
‘ಮುಳುಗಡೆಯ ನಗರವಾಗಿದ್ದರಿಂದ ಮೂಲಸೌಕರ್ಯದಿಂದಲೇ ಆರಂಭಿಸಬೇಕಾಗುತ್ತದೆ. ನವನಗರವನ್ನು ಕಟ್ಟಿದ್ದೇನೆ. ಚರ್ಚೆಗೂ ಸಿದ್ಧನಿದ್ದೇನೆ’ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಮಾತನಾಡಿ, ಚರಂತಿಮಠರು ಮನೆಗಾಗಿ ಜಾಗ ಪಡೆದಿಲ್ಲ. ಬಿ.ವಿ.ವಿ. ಸಂಘಕ್ಕಾಗಿ ಪಡೆದಿದ್ದಾರೆ. ಈ ವಿಚಾರದಲ್ಲಿ ಅವರನ್ನು ಗುರಿಯಾಗಿಸುತ್ತಿರುವುದು ಸರಿಯಲ್ಲ ಎಂದರು.
ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಿನಾರಾಯಣ ಕಾಸಟ್, ಶಿವಾನಂದ ಟವಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.