ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯಾ ಪೋಸ್ಟ್ ಬ್ಯಾಂಕ್ ಕಾರ್ಯಾರಂಭ ನಾಳೆ 

-
Last Updated 30 ಆಗಸ್ಟ್ 2018, 14:28 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಸಾರ್ವಜನಿಕರಿಗೆ ನೇರವಾಗಿ ಪೋಸ್ಟಲ್ ಸೇವೆ ಒದಗಿಸುವ ನಿಟ್ಟಿನಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೆಪ್ಟೆಂಬರ್ 1ರಂದು ಉದ್ಘಾಟನೆಗೊಳ್ಳಲಿದೆ’ ಎಂದು ಬಾಗಲಕೋಟೆ ವೃತ್ತದ ಅಂಚೆ ಅಧೀಕ್ಷಕ ಕೆ.ಮಹಾದೇವಪ್ಪ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಮಧ್ಯಾಹ್ನ 2.30ಕ್ಕೆ ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದಿರೇಶ, ಇತಿಹಾಸ ತಜ್ಞ ಡಾ.ಶೀಲಾಕಾಂತ ಪತ್ತಾರ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ದೇಶದಾದ್ಯಂತ ಅಂದು 650 ಅಂಚೆ ಕಚೇರಿಯಲ್ಲಿ ಪೋಸ್ಟ್ ಪೇಮೆಂಟ್ ಬ್ಯಾಂಕ್ ಉದ್ಘಾಟನೆಗೊಳ್ಳಲಿದೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈಗಾಗಲೆ ನಗರದಲ್ಲಿ 2,041 ಖಾತೆಗಳನ್ನು ತೆರೆಯಲಾಗಿದೆ. ಉದ್ಘಾಟನೆ ದಿನ ಐದು ಸಾವಿರ ಖಾತೆ ತೆರೆಯುವ ಗುರಿ ಹೊಂದಲಾಗಿದೆ. ಆ ನಿಟ್ಟಿನಲ್ಲಿ ಸಿಬ್ಬಂದಿ ಪ್ರಯತ್ನ ನಡೆಸಿದ್ದಾರೆ’ ಎಂದರು.

‘ಮೊದಲ ಹಂತದಲ್ಲಿ ಮುಖ್ಯ ಅಂಚೆ ಕಚೇರಿ ಸೇರಿದಂತೆ ನವನಗರ, ಬಿಎಚ್ಎಸ್, ಬಿಟಿಡಿಎ, ಹವೇಲಿ ಅಂಚೆ ಕಚೇರಿಯಲ್ಲಿ ಸೇವೆ ಪ್ರಾರಂಭಗೊಳ್ಳಲಿದ್ದು ಡಿಸೆಂಬರ್ ಅಂತ್ಯದ ವೇಳೆಗೆ ಜಿಲ್ಲೆಯ ಎಲ್ಲ ಅಂಚೆ ಕಚೇರಿಯಲ್ಲೂ ಸೇವೆ ಲಭ್ಯವಾಗಲಿದೆ’ ಎಂದರು.

ಗ್ರಾಹಕರು ಕೇವಲ ಆಧಾರ ಕಾರ್ಡ್ ಬಳಸಿ ಶೂನ್ಯ ಠೇವಣಿಯಲ್ಲಿ ಅಂಚೆ ಬ್ಯಾಂಕಿಂಗ್ ಖಾತೆ ತೆರೆಯಬಹುದು. ಪಾಸ್‌ಬುಕ್ ಬದಲಾಗಿ ಪುಟ್ಟ ಕ್ಯು.ಆರ್‌ ಕಾರ್ಡ್‌ಗಳು ಗ್ರಾಹಕರ ಕೈ ಸೇರಲಿವೆ. ಈ ಕಾರ್ಡ್ ಸ್ಕ್ಯಾನ್ ಮಾಡಿದರೆ ಇಡೀ ಖಾತೆಯ ವಿವರ ಗೊತ್ತಾಗಲಿದೆ’ ಎಂದರು.

‘ಅಂಚೆ ಬ್ಯಾಂಕಿನಲ್ಲಿ ಕೇವಲ ಹಣ ಪಾವತಿ ಅಥವಾ ಜಮೆಯ ವಹಿವಾಟು ಮಾತ್ರ ಇರುತ್ತದೆ, ಸಾಲದ ವಹಿವಾಟು ಇರುವುದಿಲ್ಲ, ಗರಿಷ್ಠ ಮಟ್ಟದಲ್ಲಿ ಗ್ರಾಹಕ ಒಂದು ಲಕ್ಷ ಮಾತ್ರ ಖಾತೆಯಲ್ಲಿಡಬಹುದು, ಹೆಚ್ಚಿನ ಹಣ ಜಮೆಯಾದರೆ ಅದು ಅಂಚೆ ಬ್ಯಾಂಕಿನಿಂದ ಗ್ರಾಹಕನ ಅಂಚೆ ಎಸ್.ಬಿ ಖಾತೆಗೆ ವರ್ಗಾವಣೆಯಾಗಲಿದೆ’ ಎಂದರು.

ಸಹಾಯಕ ಅಂಚೆ ಅಧೀಕ್ಷಕರಾದ ಶ್ರೀಕಾಂತ ಜಾಧವ್, ವಿ.ವಿ.ನಿಂಬರಗಿ, ಶ್ರೀಧರ ಜತ್ತಿ, ಸಹಾಯಕ ಅಂಚೆ ನಿರೀಕ್ಷಕ ಎಂ.ಆರ್.ಸಿಂಗದ, ಮಾರುಕಟ್ಟೆ ಅಧಿಕಾರಿ ಸಂತೋಷ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT