ಜಮಖಂಡಿ ನಗರಸಭೆ: ಮಲ್ಲವ್ವ ಅಧ್ಯಕ್ಷೆ ?

ಜಮಖಂಡಿ: ಇಲ್ಲಿನ ನಗರಸಭೆ ಅಧ್ಯಕ್ಷರ ಸ್ಥಾನ ಹಿಂದುಳಿದ ವರ್ಗ–ಎ ಮಹಿಳೆಗೆ ಮೀಸಲಾಗಿದೆ. ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
ವಾರ್ಡ್ ನಂ.2, 17 ಮತ್ತು 19 ಹಿಂದುಳಿದ ವರ್ಗ–ಎ ಮಹಿಳೆಗೆ ಮೀಸಲಾಗಿದ್ದವು. ವಾರ್ಡ್ ನಂ. 2 ರಿಂದ ಕಾಂಗ್ರೆಸ್ನ ಮಲ್ಲವ್ವ ಪಾಯಗೊಂಡ 448 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಅಂಜುಮ್ ಗೋಪಿನಾಥ ಮೀಶಿ(447) ಅವರನ್ನು ಒಂದೇ ಮತದ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದಾರೆ. ಆ ಅದೃಷ್ಟ ಈಗ ಅವರನ್ನು ಅಧ್ಯಕ್ಷರ ಹುದ್ದೆಗೆ ತಂದು ನಿಲ್ಲಿಸಿದೆ.
ವಾರ್ಡ್ ನಂ.17 ರಿಂದ ಪಕ್ಷೇತರರಾಗಿ ಪುತಳವ್ವ ಚೌಧರಿ ಹಾಗೂ ವಾರ್ಡ್ ನಂ.19 ರಿಂದ ಬಿಜೆಪಿಯ ಮಾನಂದಾ ಕಲೂತಿ ಆಯ್ಕೆಯಾಗಿದ್ದಾರೆ. 31 ಸದಸ್ಯ ಬಲ ಹೊಂದಿರುವ ಜಮಖಂಡಿ ನಗರಸಭೆ 20 ಸ್ಥಾನಗಳಲ್ಲಿ ಗೆದ್ದಿರುವ ಕಾಂಗ್ರೆಸ್ನ ವಶದಲ್ಲಿದೆ.
ಬಹುಮತ ಹೊಂದಿರುವ ಕಾಂಗ್ರೆಸ್ ಹೊರತುಪಡಿಸಿ ಪಕ್ಷೇತರರಿಗೆ ಅಥವಾ ಬಿಜೆಪಿಗೆ ಅಧ್ಯಕ್ಷ ಸ್ಥಾನ ದಕ್ಕದು. ಆದ್ದರಿಂದ ಮಲ್ಲವ್ವ ಅವರ ಏಕೈಕ ಮತದ ಗೆಲುವು ಅನಾಯಾಸವಾಗಿ ಅವರನ್ನು ಅಧ್ಯಕ್ಷ ಗದ್ದುಗೆಗೆ ಏರಿಸಲಿದೆ.
ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ವಾರ್ಡ್ ನಂ.1,4,12,18, 21,22,25 ಮತ್ತು 28 ಸಾಮಾನ್ಯ ವರ್ಗಕ್ಕೆ ಮೀಸಲಿದ್ದು. ವಾರ್ಡ್ ನಂ.18 ರಿಂದ ಬಿಜೆಪಿಯ ಪ್ರಶಾಂತ ಚರಕಿ, ವಾರ್ಡ್ ನಂ.21 ರಿಂದ ಬಿಜೆಪಿಯ ಗುರುಪಾದ ಮೆಂಡಿಗೇರಿ ಆಯ್ಕೆಯಾಗಿದ್ದಾರೆ. ವಾರ್ಡ್ ನಂ.28 ರಿಂದ ಪಕ್ಷೇತರರಾಗಿ ರಿಯಾಜ್ಅಹಮದ್ ತೇಲಸಂಗ ಆಯ್ಕೆಯಾಗಿದ್ದಾರೆ. ಇವರಾರಿಗೂ ಉಪಾಧ್ಯಕ್ಷರ ಸ್ಥಾನ ಸಿಗದು.
ಕಾಂಗ್ರೆಸ್ನಿಂದ ಸುನಿಲ್ ಶಿಂಧೆ, ಪ್ರಕಾಶ ಹಂಗರಗಿ, ಇಮ್ರಾನ್ ಬಾಗವಾನ, ಮುಬಾರಕ ಅಪರಾದ ಕ್ರಮವಾಗಿ ವಾರ್ಡ್ ನಂ.4,12,22 ಮತ್ತು 25 ರಿಂದ ಆಯ್ಕೆಯಾಗಿದ್ದಾರೆ. ಈ ನಾಲ್ವರಲ್ಲಿ ಒಬ್ಬರಿಗೆ ಉಪಾಧ್ಯಕ್ಷ ಸ್ಥಾನ ಒಲಿಯಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.