ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಾ ಕರ್ಫ್ಯೂ: ಬಾಗಲಕೋಟೆ ಜಿಲ್ಲೆ ಸಂಪೂರ್ಣ ಸ್ತಬ್ಧ

ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಜಿಲ್ಲೆಯ ಜನರಿಂದ ವ್ಯಾಪಕ ಸ್ಪಂದನೆ
Last Updated 22 ಮಾರ್ಚ್ 2020, 10:32 IST
ಅಕ್ಷರ ಗಾತ್ರ

ಬಾಗಲಕೋಟೆ: ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನತಾ ಕರ್ಫ್ಯೂ ಕರೆಗೆ ಜಿಲ್ಲೆಯಲ್ಲಿ ವ್ಯಾಪಕ ಸ್ಪಂದನೆ ದೊರೆತಿದೆ.

ಜಿಲ್ಲಾ ಕೇಂದ್ರ ಬಾಗಲಕೋಟೆ ಸೇರಿದಂತೆ ಜಿಲ್ಲೆಯ ಎಲ್ಲ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರಗೆ ಬರುತ್ತಿಲ್ಲ. ಹೀಗಾಗಿ ಇಡೀ ಜಿಲ್ಲೆ ಹೊದ್ದು ಮಲಗಿದಂತೆ ಭಾಸವಾಗುತ್ತಿದೆ.

ಬಾಗಲಕೋಟೆ ನಗರದ ನಿವಾಸಿಗಳ ನಿದ್ರೆಯ ಅವಧಿ ಭಾನುವಾರ ಮುಂಜಾನೆ ವಿಸ್ತಾರಗೊಂಡಂತೆ ಭಾಸವಾಯಿತು. ನಸುಕಿನಲ್ಲಿ ಪೇಪರ್ ಹಾಕುವವರು ಬಿಟ್ಟರೆ ರಸ್ತೆ, ಜನವಸತಿ ಪ್ರದೇಶಗಳಲ್ಲಿ ಯಾರೊಬ್ಬರೂ ಕಾಣಲಿಲ್ಲ. ಬಹಳಷ್ಟು ಮನೆಯವರು ಬಾಗಿಲನ್ನೇ ತೆರೆದಿರಲಿಲ್ಲ. ದೈನಂದಿನ ವಾಕಿಂಗ್ (ವಾಯು ವಿಹಾರ) ಕೂಡ ಸ್ಥಗಿತಗೊಂಡಿತ್ತು. ಹಾಲಿನ ಬೂತ್ ತೆರೆದಿದ್ದರೂ ಹಾಲು ಕೊಳ್ಳುವವರೇ ಬಂದಿರಲಿಲ್ಲ.

ರಸ್ತೆಗಳು ನಿರ್ಜನವಾಗಿದ್ದು, ಅತಿ ವಿರಳವಾಗಿಯೂ ವಾಹನಗಳು ಓಡಾಟ ನಡೆಸಲಿಲ್ಲ. ಅಂಗಡಿ–ಮುಂಗಟ್ಟು ಮುಚ್ಚಿದ್ದು, ಬಸ್ ನಿಲ್ದಾಣ ಬಸ್‌ಗಳು ಹಾಗೂ ಜನರ ಸುಳಿವು ಇಲ್ಲದೇ ಬಿಕೊ ಎನ್ನುತ್ತಿದೆ. ರೈಲು ನಿಲ್ದಾಣವೂ ಕಳೆಗುಂದಿದೆ. ನವನಗರದ ವಾರದ ಸಂತೆಯೂ ರದ್ದುಗೊಂಡು ಅದರ ಕುರುಹೇ ಇಲ್ಲದಂತಾಗಿತ್ತು. ಸದಾ ವಾಹನ ದಟ್ಟಣೆಯಿಂದ ತುಂಬಿರುವ ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗೂ ಹುಬ್ಬಳ್ಳಿ ಸಂಪರ್ಕಿಸುವ ಸಮೀಪದ ಗದ್ದನಕೇರಿ ಕ್ರಾಸ್‌ನಲ್ಲಿ ಜೀವ ಕಳೆ ಇಲ್ಲವಾಗಿತ್ತು.

ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾ ಪಂಚಾಯ್ತಿ ಆಡಳಿತ ಶನಿವಾರವೇ ಆಯಾ ಗ್ರಾಮ ಪಂಚಾಯ್ತಿಯಿಂದ ಡಂಗುರ ಹೊಡೆಸಿ ಮುಂಜಾನೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಜನತಾ ಕರ್ಪ್ಯೂ ಇದ್ದು, ಯಾರೂ ಹೊರಗೆ ಬಾರದಂತೆ ಮನವಿ ಮಾಡಿದ್ದ ಪರಿಣಾಮ ಹಳ್ಳಿಗಳೂ ಮೌನ ಹೊದ್ದಿದ್ದವು. ಮನೆಯಲ್ಲಿಯೇ ಟಿವಿ ನೋಡುತ್ತಾ, ಪೇಪರ್‌ಗಳನ್ನು ಓದುತ್ತಾ ಜನ ಕಾಲಕಳೆದರು.

ಸೂರ್ಯ ನೆತ್ತಿಗೇರುತ್ತಿದ್ದಂತೆಯೇ ಏರಿಕೆಯಾದ ಬಿಸಿಲು ಜನರು ಮನೆಯಿಂದ ಹೊರಗೆ ಹೋಗದಿರಲು ಇನ್ನಷ್ಟು ಕಾರಣವಾಯಿತು. ಟಂಟಂ, ಆಟೊ, ಖಾಸಗಿ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಬೈಕ್–ಸ್ಕೂಟರ್‌ಗಳ ಸದ್ದು ಕೇಳಿಬರಲಿಲ್ಲ. 1974ರಲ್ಲಿ ರೈಲ್ವೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಿದ್ದರು. ಆ ನಂತರ ಇದೇ ಮೊದಲ ಬಾರಿಗೆ ನಗರದಲ್ಲಿರೈಲು ಸಂಚಾರ ಸಂಪೂರ್ಣ ಬಂದ್ ಆಗಿತ್ತು ಎಂದು ಹಿರಿಯರು ಸ್ಮರಿಸುತ್ತಾರೆ. ರೈಲು ಬಂದ್ ಆಗುವ ಮಾಹಿತಿ ಇಲ್ಲದೇ ನಿಲ್ದಾಣಕ್ಕೆ ಬಂದ ಹಲವರು ವಾಪಸ್ ಮರಳಿದರು. ಬೇರೆ ಊರುಗಳಿಂದ ಬಂದವರು ನಿಲ್ದಾಣದಲ್ಲಿಯೇ ದಿನ ಕಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT